
ಪಣಜಿ: ‘ಚೆಸ್‌ನ ಮೆಸ್ಸಿ’ ಎಂದೇ ಹೆಸರಾಗಿರುವ ಅರ್ಜೆಂಟೀನಾದ ಬಾಲಪ್ರತಿಭೆ ಫೌಸ್ಟಿನೊ ಒರೊ, ಚೆಸ್ ವಿಶ್ವಕಪ್‌ನ ಎರಡನೇ ಸುತ್ತಿನಲ್ಲೂ ಗಮನ ಸೆಳೆದಿದ್ದಾನೆ. ಮಂಗಳವಾರ ನಡೆದ ಮೊದಲ ಕ್ಲಾಸಿಕಲ್ ಆಟದಲ್ಲಿ 12 ವರ್ಷದ ಈ ಹುಡುಗನೆದುರು, ಭಾರತದ ಅನುಭವಿ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಸಂತೋಷ್ ಗುಜರಾತಿ ಡ್ರಾ ಮಾಡಿಕೊಳ್ಳಬೇಕಾಯಿತು.
ಮೂರನೇ ಶ್ರೇಯಾಂಕದ ಪ್ರಜ್ಞಾನಂದ ಮತ್ತು ಅಗ್ರ ಶ್ರೇಯಾಂಕದ ತಮ್ಮ ತಮ್ಮ ಪಂದ್ಯಗಳನ್ನು ಡ್ರಾ ಮಾಡಿಕೊಂಡರೆ, ಎರಡನೇ ಶ್ರೇಯಾಂಕದ ಅರ್ಜುನ್ ಇರಿಗೇಶಿ ಇನ್ನೊಂದು ಪಂದ್ಯದಲ್ಲಿ ಬಲ್ಗೇರಿಯಾದ ಪೆಟ್ರೋವ್ ಮಾರ್ಟಿನ್ ವಿರುದ್ಧ ಗೆಲುವು ಸಾಧಿಸಿ ಎರಡನೇ ಸುತ್ತಿನಲ್ಲಿ ಉತ್ತಮ ಆರಂಭ ಪಡೆದರು.
ಅಸಾಧಾರಣ ಪ್ರತಿಭೆಯಿಂದಾಗಿ ಒರೊನನ್ನು ಚೆಸ್ ಆಟದಲ್ಲಿ, ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿಗೆ ಹೋಲಿಸಲಾಗುತ್ತಿದೆ. ಮೊದಲ ಸುತ್ತಿನಲ್ಲಿ ತನಗಿಂತ ಮೇಲಿನ ಕ್ರಮಾಂಕದ ಆಂಟೆ ಬರ್ಕಿಚ್ (ಕ್ರೊವೇಷ್ಯಾ) ಅವರನ್ನು ಮಣಿಸಿದ್ದ ಈ ಹುಡುಗ ಕಪ್ಪುಕಾಯಿಗಳಲ್ಲಿ ಆಡಿ ಮತ್ತೊಂದು ಸ್ಪೂರ್ತಿಯುತ ಆಟದ ಪ್ರದರ್ಶನ ನೀಡಿದ. 28 ನಡೆಗಳ ನಂತರ ಇಬ್ಬರೂ ‘ಡ್ರಾ’ಕ್ಕೆ ಒಪ್ಪಿದರು.
ವಿಶ್ವ ಚಾಂಪಿಯನ್ ಗುಕೇಶ್, ಕಜಕಸ್ತಾನದ ನೊಗೆರ್ಬೆಕ್ ಕಝಿಬೆಕ್ ಎದುರು ಪಾಯಿಂಟ್ ಹಂಚಿಕೊಂಡರೆ, ಪ್ರಜ್ಞಾನಂದ ಅವರು ಆಸ್ಟ್ರೇಲಿಯಾದ ಕೆ.ತೆಮೂರ್ ಜೊತೆ ಡ್ರಾ ಮಾಡಿಕೊಂಡರು.
ನಾಳೆ ಮರು ಆಟದಲ್ಲಿ ಗುಜರಾತಿ ಅವರು ಕಪ್ಪು ಕಾಯಿಗಳಲ್ಲಿ ಆಡಲಿದ್ದಾರೆ. ಆ ಆಟವೂ ಡ್ರಾ ಆದಲ್ಲಿ ಗುರುವಾರ ಅಲ್ಪಾವಧಿಯ ಟೈಬ್ರೇಕರ್ ಆಟಗಳಿಂದ ವಿಜೇತರ ನಿರ್ಧಾರ ಆಗಲಿದೆ. 2026ರ ಕ್ಯಾಂಡಿಡೇಟ್ಸ್‌ಗೆ ಆಯ್ಕೆಯಾಗಲು ವಿದಿತ್‌ಗೆ ಈ ಟೂರ್ನಿ ಕೊನೆಯ ಅವಕಾಶ.
ಅರೋನಿಯನ್‌ಗೆ ಜಯ:
ಅನುಭವಿ ಲೆವೋನ್ ಅರೋನಿಯನ್ (ಅಮೆರಿಕ) ಅವರು ಯುವ ಐಎಂ ಅರಣ್ಯಕ್ ಘೋಷ್ ಅವರನ್ನು ಸೋಲಿಸಿ ಉತ್ತಮ ಆರಂಭ ಮಾಡಿದರು.
ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರು ಭಾರತದ ಅನುಭವಿ ಸೂರ್ಯಶೇಖರ್ ಗಂಗೂಲಿ ಅವರನ್ನು ಮೊದಲ ಆಟದಲ್ಲಿ ಸೋಲಿಸಿದರು. ಎಸ್.ಎಲ್.ನಾರಾಯಣನ್, ಇಂಗ್ಲೆಂಡ್‌ನ ನಿಕಿತಾ ವಿಟಿಯುಗೊವ್ ಅವರ ಜೊತೆ ಮೊದಲ ಆಟವನ್ನು ಡ್ರಾ ಮಾಡಿಕೊಂಡರು.
ಭಾರತದ ದೀಪ್ತಾಯನ ಘೋಷ್, ಫಿಡೆ ಪ್ರತಿನಿಧಿಸುತ್ತಿರುವ ರಷ್ಯಾದ ಇಯಾನ್ ನಿಪೊಮ್‌ನಿಷಿ ಜೊತೆ ಡ್ರಾ ಮಾಡಿಕೊಂಡರು. ಭಾರತದ ಆಟಗಾರರ ವ್ಯವಹಾರವಾಗಿದ್ದ ಪಂದ್ಯದಲ್ಲಿ ಅರವಿಂದ ಚಿದಂರಂಬರಂ್ ಮತ್ತು ಕಾರ್ತಿಕ್ ವೆಂಕಟರಾಮನ್ ಡ್ರಾ ಮಾಡಿಕೊಂಡರು. ಭಾರತದ ವಿ.ಪ್ರಣವ್, ನಾರ್ವೆಯ ತರಿ ಆರ್ಯನ್ ವಿರುದ್ಧ ಗೆಲುವು ಪಡೆದರು. ಆರ್ಮೇನಿಯಾದ ರೋಬರ್ಟ್ ಹೊವ್ನನೀಸಿಯನ್, ಭಾರತದ ರೋನಕ್ ಸಾಧ್ವಾನಿ ಜೊತೆ ಡ್ರಾಕ್ಕೆ ಒಪ್ಪಿದರು. ಅನಿಶ್ ಗಿರಿ, ಬೋಸ್ನಿಯಾ–ಹರ್ಜೆಗೋವಿನಾದ ಮಕ್ಸಿವೋವಿಕ್ ಬೊಯಾನ್ ಜೊತೆ ಡ್ರಾಕ್ಕೆ ಸಹಿ ಮಾಡಿದ್ದೂ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.