
ನವದೆಹಲಿ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡೆಗಳಲ್ಲಿ ಪದಕಕ್ಕಾಗಿ ಮತ್ತೊಂದು ಪ್ರಯತ್ನ ನಡೆಸಲು ತಾವು ನಿವೃತ್ತಿಯಿಂದ ಹೊರಬರುವುದಾಗಿ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರು ಶುಕ್ರವಾರ ಪ್ರಕಟಿಸಿದ್ದಾರೆ. ‘ನನ್ನೊಳಗಿನ ಕಿಚ್ಚು ಇನ್ನೂ ಆರಿಲ್ಲ. ದಣಿವು ಮತ್ತು ಗದ್ದಲದಲ್ಲಿ ಅದು ಹುದುಗಿಹೋಗಿತ್ತು’ ಎಂದು ಹೇಳಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆ.ಜಿ. ವಿಭಾಗದ ಸ್ಪರ್ಧೆಯ ಸಂದರ್ಭದಲ್ಲಿ ನಿಗದಿಗಿಂತ ನೂರು ಗ್ರಾಮ್ ಹೆಚ್ಚುವರಿ ತೂಕ ಇದ್ದ ಕಾರಣ ಅವರನ್ನು ಚಿನ್ನದ ಪದಕದ ಸ್ಪರ್ಧೆಯ ವೇಳೆ ಅನರ್ಹಗೊಳಿಸಲಾಗಿತ್ತು. 31 ವರ್ಷ ವಯಸ್ಸಿನ ವಿನೇಶ್ ತೀವ್ರ ನಿರಾಸೆಗೆ ಒಳಗಾಗಿ, ಕೆಲವೇ ದಿನಗಳ ನಂತರ ನಿವೃತ್ತಿ ಪ್ರಕಟಿಸಿದ್ದರು.
ತಮಗೆ ಜಂಟಿಯಾಗಿ ಬೆಳ್ಳಿ ಪದಕ ನೀಡುವಂತೆ ವಿನೇಶ್ ಅವರು ಕ್ರೀಡಾ ನ್ಯಾಯಮಂಡಳಿಗೆ (ಸಿಎಎಸ್) ಮೊರೆಹೋಗಿದ್ದರು. ಆದರೆ ಸಿಎಎಸ್ ಇದಕ್ಕೆ ಒಪ್ಪಿರಲಿಲ್ಲ. ಇದರ ಬೆನ್ನಲ್ಲೇ ವಿನೇಶ್ ಅವರು ಕುಸ್ತಿಗೆ ವಿದಾಯ ಹೇಳಿದ್ದರು. ರಾಜಕೀಯಕ್ಕೆ ಸೇರ್ಪಡೆಗೊಂಡ ಅವರು ಹರಿಯಾಣದ ಜುಲಾನಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕಿಯಾಗಿದ್ದರು.
‘ನಿಮ್ಮ ಪಾಲಿಗೆ ಪ್ಯಾರಿಸ್ ಕೂಟ ಕೊನೆಯೇ ಎಂದು ಜನ ಕೇಳುತ್ತಲೇ ಬಂದಿದ್ದರು. ನನ್ನ ಬಳಿ ಉತ್ತರವಿರಲಿಲ್ಲ. ನಾನು ಒತ್ತಡ, ನಿರೀಕ್ಷೆಯ ಭಾರ ಮತ್ತು ನನ್ನದೇ ಮಹತ್ವಾಕಾಂಕ್ಷೆಯ ಪರಿಣಾಮ ಮ್ಯಾಟ್ ತೊರೆಯಬೇಕಾಯಿತು. ವರ್ಷಗಳಲ್ಲಿ ಮೊದಲ ಬಾರಿ ಈಗ ನಿರಾಳಭಾವ ಮೂಡಿದೆ’ ಎಂದು ವಿನೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪತಿ ಸೋಮವೀರ್ ರಾಠಿ ಅವರನ್ನು ವಿವಾಹವಾಗಿರುವ ವಿನೇಶ್ ಜುಲೈನಲ್ಲಿ ಗಂಡುಮಗುವಿಗೆ ತಾಯಿಯಾಗಿದ್ದರು.
‘ಹೊಸ ಸ್ಪೂರ್ತಿಯೊಡನೆ ಲಾಸ್ ಏಂಜಲೀಸ್ 28 ಕ್ರೀಡೆಗಳಿಗೆ ಹೊಸದಾಗಿ ಪಯಣ ಆರಂಭಿಸುವುದಾಗಿ ವಿನೇಶ್ ತಿಳಿಸಿದ್ದಾರೆ.
‘ಅಂಜಿಕೆಯಿಲ್ಲದ ಹೃದಯ, ಬತ್ತದ ಸ್ಪೂರ್ತಿಯೊಡನೆ ಲಾಸ್ ಏಂಜಲೀಸ್ 2028ರತ್ತ ಹೆಜ್ಜೆಯಿಡುತ್ತಿದ್ದೇನೆ. ಈ ಬಾರಿ ನಾನೊಬ್ಬಳೇ ಇಲ್ಲ, ನನ್ನ ಮಗನೂ ನನ್ನ ಜೊತೆಯಲ್ಲಿದ್ದಾನೆ. ಲಾಸ್ ಏಂಜಲೀಸ್ ಹಾದಿಯಲ್ಲಿ ನನ್ನ ಅತಿ ದೊಡ್ಡ ಪ್ರೇರಣೆ ಮತ್ತು ನನ್ನ ಪುಟ್ಟ ಚಿಯರ್‌ಲೀಡರ್ ಇದ್ದಾನೆ’ ಎಂದು ಹೇಳಿದ್ದಾರೆ.
ಒಲಿಂಪಿಕ್ ಸ್ಪರ್ಧೆಯೊಂದರ ಚಿನ್ನದ ಪದಕದ ಸ್ಪರ್ಧೆಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಶ್ರೇಯ ಈಗಾಗಲೇ ಅವರದಾಗಿದೆ. ಮೂರು ಬಾರಿಯ ಒಲಿಂಪಿಯನ್ ಆಗಿರುವ ವಿನೇಶ್, ಏಷ್ಯನ್ ಕ್ರೀಡೆ ಮತ್ತು ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.