ADVERTISEMENT

‘ಒಲಿಂಪಿಕ್ಸ್‌ ಬೆಂಬಿಡದು ಕೊರೊನಾ’

ಒಂದು ವರ್ಷದಲ್ಲಿ ಜಗತ್ತಿನಾದ್ಯಂತ ವೈರಸ್ ನಿಯಂತ್ರಣಕ್ಕೆ ಬರುವುದು ಖಚಿತವಿಲ್ಲ: ಕೆಂಟಾರೊ ಇವಾಟ ಅಭಿಪ್ರಾಯ

ಏಜೆನ್ಸೀಸ್
Published 20 ಏಪ್ರಿಲ್ 2020, 20:04 IST
Last Updated 20 ಏಪ್ರಿಲ್ 2020, 20:04 IST
ಟೋಕಿಯೊದ ಒಡೈಬಾ ಜಲಾಶಯದ ಬಳಿ ಇರಿಸಿರುವ ಒಲಿಂಪಿಕ್ ಬಳೆಗಳು ಸೋಮವಾರ ಶೋಭಿಸಿದ್ದು ಹೀಗೆ –ಎಎಫ್‌ಪಿ ಚಿತ್ರ
ಟೋಕಿಯೊದ ಒಡೈಬಾ ಜಲಾಶಯದ ಬಳಿ ಇರಿಸಿರುವ ಒಲಿಂಪಿಕ್ ಬಳೆಗಳು ಸೋಮವಾರ ಶೋಭಿಸಿದ್ದು ಹೀಗೆ –ಎಎಫ್‌ಪಿ ಚಿತ್ರ   

ಟೋಕಿಯೊ: ಕೊರೊನಾ ಮಹಾಮಾರಿಯ ಹಾವಳಿಯಿಂದ ಒಂದು ವರ್ಷ ಮುಂದೂಡಿರುವ ಒಲಿಂಪಿಕ್ಸ್‌ಗೆ ಆಯೋಜಕರು ಸಿದ್ಧಗೊಳ್ಳುತ್ತಿದ್ದರೆ ಜಪಾನ್‌ನ ವೈರಾಣು ತಜ್ಞ ಕೆಂಟಾರೊ ಇವಾಟ ಮುಂದಿನ ವರ್ಷವೂ ಕೊರೊನಾ ವೈರಸ್ ಒಲಿಂಪಿಕ್ಸ್ ಕೂಟವನ್ನು ಕಾಡಲಿದೆ ಎಂದು ಎಚ್ಚರಿಸಿದ್ದಾರೆ.

ಕೋಬೆ ವಿಶ್ವವಿದ್ಯಾಲಯದ ಸೋಂಕು ರೋಗಗಳ ವಿಭಾಗದ ಪ್ರಾಧ್ಯಾಪಕರೂ ಆಗಿರುವ ಕೆಂಟಾರೊ ‘ಒಲಿಂಪಿಕ್ಸ್‌ ಕೂಟಕ್ಕೆ ಬೇರೆ ಬೇರೆ ದೇಶಗಳಿಂದ ಕ್ರೀಡಾಪಟುಗಳು ಬರುತ್ತಾರೆ. ಲಕ್ಷಾಂತರ ಪ್ರೇಕ್ಷಕರು ಸೇರುತ್ತಾರೆ. ಆದ್ದರಿಂದ ಆತಿಥ್ಯ ವಹಿಸುವ ರಾಷ್ಟ್ರದಲ್ಲೂ ಅತಿಥಿಗಳ ನಾಡಿನಲ್ಲೂ ವೈರಸ್ ನಿಯಂತ್ರಣಕ್ಕೆ ಬರಬೇಕಾಗಿದೆ’ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಮುಂದಿನ ಬೇಸಿಗೆಯ ಒಳಗೆ ಜಪಾನ್‌ನಲ್ಲಿ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದುಕೊಳ್ಳೋಣ. ಆದರೆ ಬೇರೆ ದೇಶಗಳಲ್ಲಿ ಅದು ಸಾಧ್ಯವೇ ಎಂಬುದು ಪ್ರಶ್ನೆಯಾಗಿಯೇ ಉಳಿಯಲಿದೆ. ಎಲ್ಲ ಕಡೆಯೂ ವೈರಾಣು ನಿಯಂತ್ರಣಕ್ಕೆ ಬಾರದೆ ಕೂಟ ಆಯೋಜಿಸುವುದರಿಂದ ಅಪಾಯದ ಸಾಧ್ಯತೆ ಇರುತ್ತದೆ’ ಎಂಬುದು ಅವರ ಅಭಿಪ್ರಾಯ.

ADVERTISEMENT

ಮೇ ತಿಂಗಳಲ್ಲಿ ನಿಗದಿಯಾಗಿದ್ದ ಒಲಿಂಪಿಕ್ಸ್ ಕೂಟವನ್ನು ಕೊರೊನಾ ಅಟ್ಟಹಾಸದ ಕಾರಣ ಮುಂದಿನ ವರ್ಷ ಜುಲೈ ವರೆಗೆ ಮುಂದೂಡಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಜಪಾನ್ ಇತ್ತೀಚೆಗೆ ನಿರ್ಧರಿಸಿತ್ತು. ಆದರೆ ಇತ್ತೀಚೆಗೆ ಪ್ರಪಂಚದ ವಿವಿಧ ದೇಶಗಳಲ್ಲಿ ಕೊರೊನಾ ವೈರಸ್ ರುದ್ರ ತಾಂಡವವಾಡುತ್ತಿರುವುದರಿಂದ ಒಂದು ವರ್ಷದ ಅವಧಿ ಸಾಕಾದೀತೇ ಎಂಬ ಪ್ರಶ್ನೆ ಎದ್ದಿತ್ತು.

‘ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲಿಲ್ಲ ಎಂದಾದರೆ ಪ್ರೇಕ್ಷಕರಿಲ್ಲದೆ ಮತ್ತು ಕನಿಷ್ಠ ಸಂಖ್ಯೆಯ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ ನೀಡಿ ಕ್ರೀಡಾಕೂಟವನ್ನು ಆಯೋಜಿಸುವ ಕುರಿತು ಚಿಂತನೆ ನಡೆಸಬೇಕಾದೀತು’ ಎಂದು ಕೆಂಟಾರೊ ಹೇಳಿದರು.

ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿ ಜಪಾನ್ ಸರ್ಕಾರ ಕೈಗೊಂಡ ಕ್ರಮವನ್ನು ಟೀಕಿಸಿ ನೀಡಿದ ಹೇಳಿಕೆಯ ಮೂಲಕ ಕೆಂಟಾರೊ ಈ ಹಿಂದೆಯೂ ಸುದ್ದಿಯಾಗಿದ್ದರು. ದೇಶದ ಬಂದರಿನಲ್ಲಿ ಲಂಗರು ಹಾಕಿದ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿದ್ದವರನ್ನು ಅಧಿಕಾರಿಗಳು ಅದರೊಳಗೇ ಕ್ವಾರಂಟೈನ್‌ಗೆ ಒಳಪಡಿಸಿದ್ದರು. ಅವರ ಪೈಕಿ 700 ಮಂದಿ ಸೋಂಕಿಗೆ ಒಳಗಾಗಿ 13 ಮಂದಿ ಸಾವಿಗೀಡಾಗಿದ್ದರು. ಇದನ್ನು ಕೆಂಟಾರೊ ತೀಕ್ಷ್ಣವಾಗಿ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.