ADVERTISEMENT

400 ಮೀ. ಓಟ: ವಿಶಾಲ್ ರಾಷ್ಟ್ರೀಯ ದಾಖಲೆ

ರಾಷ್ಟ್ರೀಯ ಅಂತರ ರಾಜ್ಯ ಸೀನಿಯರ್ ಅಥ್ಲೆಟಿಕ್ ಕೂಟ

ಪಿಟಿಐ
Published 21 ಆಗಸ್ಟ್ 2025, 16:00 IST
Last Updated 21 ಆಗಸ್ಟ್ 2025, 16:00 IST
<div class="paragraphs"><p>ಓಟ</p></div>

ಓಟ

   

ಚೆನ್ನೈ : ತಮಿಳುನಾಡಿನ ವಿಶಾಲ್‌ ತೆನ್ನರಸು ಕಾಯಲ್ವಿಳಿ ಅವರು ರಾಷ್ಟ್ರೀಯ ಅಂತರ ರಾಜ್ಯ ಸೀನಿಯರ್ ಅಥ್ಲೆಟಿಕ್ ಕೂಟದ ಎರಡನೇ ದಿನವಾದ ಗುರುವಾರ ಪುರುಷರ 400 ಮೀ. ಓಟವವನ್ನು 45.12 ಸೆ.ಗಳ ದಾಖಲೆ ಅವಧಿಯೊಳಗೆ ಓಡಿ ಮಿಂಚಿದರು. 

21 ವರ್ಷ ವಯಸ್ಸಿನ ವಿಶಾಲ್‌ ತೆನ್ನರಸು ಅಮೋಘ ಓಟ ಓಡಿ ಎದುರಾಳಿಗಳನ್ನೆಲ್ಲಾ ಆರಾಮವಾಗಿ ಹಿಂದೆಹಾಕಿ ನೂತನ ರಾಷ್ಟ್ರೀಯ ದಾಖಲೆ ಬರೆದರು. ಆ ಮೂಲಕ ದೇಶದ ಅಗ್ರಮಾನ್ಯ ‘ಕ್ವಾರ್ಟರ್‌ ಮೈಲ್ ಓಟಗಾರ’ ಎಂಬ ಹಿರಿಮೆಯನ್ನು ಇನ್ನಷ್ಟು ಗಟ್ಟಿಗೊಳಿಸಿದರು. ಈ ಹಿಂದಿನ ದಾಖಲೆ (45.21 ಸೆ.) ಕೇರಳದ ಮುಹಮ್ಮದ್‌ ಅನಸ್‌ ಹೆಸರಿನಲ್ಲಿತ್ತು. ಅವರು ಝೆಕ್‌ ರಿಪಬ್ಲಿಕ್‌ನ ಕ್ಲಾಡ್ನೊ ಅಥ್ಲೆಟಿಕ್‌ ಕೂಟದಲ್ಲಿ ಇದನ್ನು ದಾಖಲಿಸಿದ್ದರು.

ADVERTISEMENT

ವಿಶಾಲ್ ಈ ಹಿಂದಿನ ಶ್ರೇಷ್ಠ ಸಾಧನೆ 45.57 ಸೆ.ಗಳಾಗಿದ್ದು, ಈ ವರ್ಷದ ಮೇ ತಿಂಗಳಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ದಾಖಲಿಸಿದ್ದರು. ದಕ್ಷಿಣ ಕೊರಿಯಾದಲ್ಲಿ ನಡೆದ ಆ ಕೂಟದಲ್ಲಿ ಅವರು ನಾಲ್ಕನೇ ಸ್ಥಾನ ಗಳಿಸಿದ್ದರು. 4x400 ಮಿಶ್ರ ರಿಲೇ ಚಿನ್ನ ಮತ್ತು 4x400 ಮೀ. ರಿಲೆಯಲ್ಲಿ ಬೆಳ್ಳಿ ಗೆದ್ದ ತಂಡದಲ್ಲಿ ಅವರು ಓಡಿದ್ದರು.

ಇದು (45.12 ಸೆ.) ಈ ವರ್ಷದ ನಾಲ್ಕನೇ ಅತಿ ವೇಗದ ಅವಧಿ ಎನಿಸಿತು. ಜಪಾನ್‌ನ ಯುಕಿ ಜೋಸೆಫ್‌ ನಕಾಜಿಮ (44.84 ಸೆ.), ಕತಾರ್‌ನ ಅಮ್ಮರ್‌ ಇಸ್ಮಾಯಿಲ್ ಇಬ್ರಾಹಿಂ (44.90 ಸೆ.) ಮತ್ತು ಚೀನಾದ ಲಿಯಕೈ ಲಿಯು (45.06 ಸೆ.) ಅವರು ಇದಕ್ಕಿಂತ ವೇಗವಾಗಿ ಓಡಿದ್ದಾರೆ.

ಆದರೆ ಅವರು ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆಗೆ ನಿಗದಿಪಡಿಸಿದ್ದ ಅವಧಿ (44.85 ಸೆ.) ಒಳಗೆ ಗುರಿಮುಟ್ಟಲಾಗಲಿಲ್ಲ.

ತಮಿಳುನಾಡಿನ ರಾಜೇಶ್ ರಮೇಶ್‌ (46.04 ಸೆ.) ಮತ್ತು ಹರಿಯಾಣದ ವಿಕ್ರಾಂತ್ ಪಾಂಚಾಲ್ (46.17 ಸೆ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ಮಹಿಳೆಯರ ಪೋಲ್‌ವಾಲ್ಟ್‌ನಲ್ಲಿ ತಮಿಳುನಾಡಿನ ಬರನಿಕಾ ಇಳಂಗೋವನ್ 4.10 ಮೀ. ಜಿಗಿದು ಪವಿತ್ರಾ ವೆಂಕಟೇಶ್‌ ಹೆಸರಿನಲ್ಲಿದ್ದ (2023ರ) ಕೂಟ ದಾಖಲೆ ಸರಿಗಟ್ಟಿದರು. ಕೇರಳದ ಮರಿಯಾ ಜೈಸನ್‌ (4.05 ಮೀ) ಮತ್ತು ತಮಿಳುನಾಡಿನ ಸತ್ಯಾ ತಮಿಳರಸನ್ (4 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.