ADVERTISEMENT

ಲೆಜೆಂಡ್ಸ್‌ ಆಫ್‌ ಚೆಸ್‌ ಟೂರ್ನಿ: ಕೊನೆಗೂ ಗೆದ್ದ ವಿಶ್ವನಾಥನ್‌ ಆನಂದ್‌

ಪಿಟಿಐ
Published 28 ಜುಲೈ 2020, 13:33 IST
Last Updated 28 ಜುಲೈ 2020, 13:33 IST
ವಿಶ್ವನಾಥನ್‌ ಆನಂದ್‌–ಪಿಟಿಐ ಚಿತ್ರ
ವಿಶ್ವನಾಥನ್‌ ಆನಂದ್‌–ಪಿಟಿಐ ಚಿತ್ರ   

ಚೆನ್ನೈ: ಭಾರತದ ಖ್ಯಾತ ಆಟಗಾರ‌ ವಿಶ್ವನಾಥನ್‌ ಆನಂದ್‌ ಅವರು ಲೆಜೆಂಡ್ಸ್‌ ಆಫ್‌ ಚೆಸ್‌ ಟೂರ್ನಿಯಲ್ಲಿ ಕೊನೆಗೂ ಜಯದ ನಿಟ್ಟುಸಿರು ಬಿಟ್ಟಿದ್ದಾರೆ. ಸೋಮವಾರ ತಡರಾತ್ರಿ ನಡೆದ ಹಣಾಹಣಿಯಲ್ಲಿ ಅವರು2.5–0.5ರಿಂದ ಇಸ್ರೇಲ್‌ನ ಬೊರಿಸ್‌ ಗೆಲ್‌ಫಾಂಡ್‌ ಎದುರು ಗೆದ್ದರು. ಸತತ ಆರು ಸೋಲುಗಳ ಬಳಿಕ ಭಾರತದ ಪಟುವಿಗೆ ಒಲಿದ ಮೊದಲ ಜಯ ಇದು.

ಅವರ ದೀರ್ಘಕಾಲದ ಎದುರಾಳಿಯ ವಿರುದ್ಧ ಆರಂಭದಲ್ಲಿ ಹಿನ್ನಡೆ ಕಂಡರೂಆನಂದ್ 45 ನಡೆಗಳಲ್ಲಿ ಮೊದಲ ಗೇಮ್‌ ಗೆದ್ದು ಶುಭಾರಂಭ ಮಾಡಿದರು. ಕಪ್ಪು ಕಾಯಿಗಳೊಂದಿಗೆ ಆಡಿದ ಅವರಿಗೆ ಇದು ಟೂರ್ನಿಯಲ್ಲೇ ಗೆದ್ದ ಮೊದಲ ಗೇಮ್ ಆಗಿತ್ತು. ಉತ್ತಮ ಆಟ ಮುಂದುವರಿಸಿದ ಅವರು 49 ನಡೆಗಳಲ್ಲಿ ಎರಡನೇ ಗೇಮ್‌ಅನ್ನೂ ತಮ್ಮ ವಶಕ್ಕೆ ತೆಗೆದುಕೊಂಡರು.

46 ನಡೆಗಳ ಮೂರನೇ ಗೇಮ್‌ ಡ್ರಾನಲ್ಲಿ ಅಂತ್ಯವಾಯಿತು. 2012ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆನಂದ್‌ ಅವರಿಗೆ ಬೊರಿಸ್‌ ಎದುರಾಳಿಯಾಗಿದ್ದರು.

ADVERTISEMENT

‘ಮೊದಲ ಮೂರು ದಿನಗಳ ಆಟದಷ್ಟು ಈ ಕೊನೆಯ ಮೂರು ದಿನಗಳ ಆಟ ಕಠಿಣವಾಗಿರಲಿಲ್ಲ. ಗೆಲುವು ಸಾಧಿಸಿದ್ದರಿಂದ ಸಂತಸವಾಗಿದೆ‘ ಎಂದುಪಂದ್ಯದ ಬಳಿಕ ಆನಂದ್‌ ಪ್ರತಿಕ್ರಿಯಿಸಿದರು.

ಈ ಗೆಲುವಿನೊಂದಿಗೆ ಆನಂದ್‌ ಅವರು ಆರು ಪಾಯಿಂಟ್ಸ್‌ನೊಂದಿಗೆ ಎಂಟನೇ ಸ್ಥಾನಕ್ಕೆ ಏರಿದ್ದಾರೆ. ಹಂಗರಿಯ ಪೀಟರ್‌ ಲೇಕೊ (5 ಪಾಯಿಂಟ್ಸ್‌) ಹಾಗೂ ಚೀನಾದ ದಿಂಗ್‌ ಲಿರೇನ್‌ (3) ಅವರಿಗಿಂತ ಮುಂದಿದ್ದಾರೆ.

ಎಂಟನೇ ಸುತ್ತಿನ ಪಂದ್ಯದಲ್ಲಿ ಅವರಿಗೆ ದಿಂಗ್‌ ಸವಾಲು ಎದುರಾಗಲಿದೆ.

ಇನ್ನೊಂದು ಪಂದ್ಯದಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು 2.5–1.5ರಿಂದ ಪೀಟರ್‌ ಸ್ವಿಡ್ಲರ್‌ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.