ADVERTISEMENT

ಚೆಸ್‌ ಕದನ: ಫಿಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ವ್ಲಾದಿಮಿರ್ ಕ್ರಾಮ್ನಿಕ್

ಪಿಟಿಐ
Published 1 ಜನವರಿ 2026, 13:38 IST
Last Updated 1 ಜನವರಿ 2026, 13:38 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ನವದೆಹಲಿ: ಆಧಾರವಿಲ್ಲದೇ ಮೋಸದಾಟದ ಆರೋಪ ಹೊರಿಸಿ ಆಟಗಾರರ ಶೋಷಣೆ ಮಾಡುತ್ತಿರುವ ಆರೋಪದಲ್ಲಿ ತಮ್ಮನ್ನು ತನಿಖೆಯ ಭಾಗವಾಗಿಸಿರುವುದನ್ನು ಖಂಡಿಸಿ ರಷ್ಯಾದ ಚೆಸ್‌ ದಿಗ್ಗಜ ವ್ಲಾದಿಮಿರ್ ಕ್ರಾಮ್ನಿಕ್ ಅವರು ಸ್ವಿಟ್ಜರ್ಲೆಂಡ್‌ನ ಸಿವಿಲ್‌ ನ್ಯಾಯಾಲಯದಲ್ಲಿ ವಿಶ್ವ ಚೆಸ್‌ ಫೆಡರೇಷನ್‌ (ಫಿಡೆ) ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಅಮೆರಿಕದ ಯುವ ಗ್ರ್ಯಾಂಡ್‌ಮಾಸ್ಟರ್ ಡೇನಿಯಲ್ ನರೋಡಿಟ್‌ಸ್ಕಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಲು ಕ್ರಾಮ್ನಿಕ್ ಅವರು ಮಾಡಿದ ಮೋಸದ ಆರೋಪಗಳು ಕಾರಣ ಎಂಬ ಮಾತುಗಳು ಬಲವಾಗಿ ಕೇಳಿಬಂದಿವೆ.

ಫಿಡೆ ಮತ್ತು ಸಹ ಆಟಗಾರರು ತಮ್ಮ ವಿರುದ್ಧ ಒಂದೇ ಸಮನೇ ಆರೋಪಗಳನ್ನು ಮಾಡುತ್ತಿರುವುದರಿಂದ ಈ ಕ್ರಮಕ್ಕೆ ಮುಂದಾಗುವುದು ತಮಗೆ ಅನಿವಾರ್ಯವಾಯಿತು ಎಂದು ಕ್ರಾಮ್ನಿಕ್ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ADVERTISEMENT

ನರೋಡಿಟ್‌ಸ್ಕಿ ವಿರುದ್ಧ ಕ್ರಾಮ್ನಿಕ್ ಮಾಡಿದ ಮೋಸದಾಟದ ಆರೋಪಗಳು ‘ಅಸಹ್ಯಕರ ಮತ್ತು ನಾಚಿಕಗೇಡಿನದ್ದು’ ಎಂದು ಫಿಡೆ ಸಿಇಒ ಎಮಿಲ್‌ ಸುತೋವ್‌ಸ್ಕಿ ಅವರು ಕ್ರಾಮ್ನಿಕ್ ಅವರನ್ನು ಟೀಕಿಸಿದ್ದರು.

29 ವರ್ಷ ವಯಸ್ಸಿನ ನರೊಡಿಟ್‌ಸ್ಕಿ ಅವರ ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಕೊನೆಯ ಬಾರಿ ನೇರಪ್ರಸಾರದ ಕಾರ್ಯಕ್ರಮದಲ್ಲಿ ‘ಕ್ರಾಮ್ನಿಕ್ ತಮ್ಮ ವಿರುದ್ಧ ಮಾಡಿರುವ ಮೋಸದಾಟದ ಆರೋಪಗಳಿಂದ ತೀವ್ರ ಕ್ಲೇಶಕ್ಕೆ ಒಳಗಾಗಿರುವುದಾಗಿ’ ಅವರು ಹೇಳಿದ್ದರು.

ತಮ್ಮ ವಿರುದ್ಧ ಕ್ರಾಮ್ನಿಕ್ ಮಾಡಿದ್ದ ಆನ್‌ಲೈಟ್‌ ಆಟದಲ್ಲಿನ ಮೋಸದ ಆರೋಪದಿಂದ ಹತಾಶೆಗೆ ಒಳಗಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಯೋಚನೆ ಮೂಡಿಸಿತು ಎಂದು ಝೆಕ್‌ ಗ್ರ್ಯಾಂಡ್‌ಮಾಸ್ಟರ್ ಡೇವಿಡ್‌ ನವಾರ ಸಹ ಹೇಳಿದ್ದರು. ಆದರೆ, ಆಧಾರರಹಿತವಾಗಿ ತಾವು ಮಾತನಾಡಿಲ್ಲ. ಎಲ್ಲದ್ದಕ್ಕೂ ಎಲೆಕ್ಟ್ರಾನಿಕ್ ದಾಖಲೆಗಳಿಗವೆ ಎಂದು ರಷ್ಯಾದ ಆಟಗಾರ ಹೇಳಿದ್ದರು.

ತಮ್ಮನ್ನು ಟೀಕಿಸಿರುವ ಆಟಗಾರರ ವಿರುದ್ಧವೂ ಕ್ರಾಮ್ನಿಕ್ ಕಿಡಿಕಾರಿದ್ದಾರೆ. ಈ ಆಟಗಾರರ ಗುಂಪಿನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌, ಭಾರತದ ನಿಹಾಲ್ ಸರಿನ್ ಅವರೂ ಒಳಗೊಂಡಿದ್ದಾರೆ. ನರೊಡಿಟ್‌ಸ್ಕಿ ಸಾವಿಗೆ ಕ್ರಾಮ್ನಿಕ್ ನೇರ ಕಾರಣ ಎಂದು ನಿಹಾಲ್ ಹೇಳಿದ್ದರು. ‘ಕೆಲವು ಆಟಗಾರರು ಬಹಿರಂಗವಾಗಿ ತಮ್ಮ ಹೆಸರು ಹೇಳಿ, ಅವಮಾನಿಸಿದ್ದಾರೆ’ ಎಂದೂ ಕ್ರಾಮ್ನಿಕ್ ದೂರಿದ್ದಾರೆ.

‘ಯಾರೂ ಸಹ ಕ್ಷಮೆ ಕೇಳಲು ಮುಂದೆಬಂದಿಲ್ಲ. ಅಥವಾ ತಮ್ಮ ಹೇಳಿಕೆಯಿಂದ ಹಿಂದೆಸರಿದಿಲ್ಲ. ಆದರೆ ಪ್ರತಿಯಾಗಿ ನಾನು ಒದಗಿಸಿರುವ ಸಾಕ್ಷ್ಯಗಳನ್ನು ಕಡೆಗಣಿಸಿದ್ದಾರೆ’ ಎಂದು ಹೇಳಿದ್ದಾರೆ.

ತಮ್ಮ ವಿರುದ್ಧ ಫಿಡೆ ಎಥಿಕ್ಸ್‌ ಸಮಿತಿ ವಿಚಾರಣೆ ನಡೆಸುವುದಕ್ಕೂ, ಈ ಕಾನೂನು ಹೋರಾಟಕ್ಕೂ ಸಂಬಂಧವಿಲ್ಲ ಎಂದು ಕ್ರಾಮ್ನಿಕ್ ಹೇಳಿದ್ದಾರೆ.

ಎರಡು ವರ್ಷಗಳಿಂದ ಆಟಗಾರರ ಘನತೆಗೆ ಧಕ್ಕೆ ತರುವಂತೆ ಕ್ರಾಮ್ನಿಕ್ ನಡೆದುಕೊಂಡು ಬಂದಿರುವ ರೀತಿಯನ್ನು ಆಧಾರವಾಗಿಟ್ಟುಕೊಂಡು ಫಿಡೆ ಸಮಿತಿ ತನಿಖೆ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.