ADVERTISEMENT

CWG| ವೇಟ್‌ಲಿಫ್ಟಿಂಗ್‌ನಲ್ಲಿ ಮತ್ತೊಂದು ಪದಕ: ಗುರ್ದೀಪ್ ಸಿಂಗ್‌ಗೆ ಕಂಚು

ಪಿಟಿಐ
Published 4 ಆಗಸ್ಟ್ 2022, 13:14 IST
Last Updated 4 ಆಗಸ್ಟ್ 2022, 13:14 IST
 ಗುರ್ದೀಪ್‌ ಸಿಂಗ್‌
ಗುರ್ದೀಪ್‌ ಸಿಂಗ್‌   

ಬರ್ಮಿಂಗ್‌ಹ್ಯಾಮ್: ಭಾರತದ ವೇಟ್‌ಲಿಫ್ಟರ್‌ ಗುರುದೀಪ್‌ ಸಿಂಗ್‌, ಪುರುಷರ +109 ಕೆ.ಜಿ. ವಿಭಾಗದಲ್ಲಿ ಕಂಚು ಗೆದ್ದರು.

ಬುಧವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಅವರು ಒಟ್ಟು 390 ಕೆ.ಜಿ. ಭಾರ ಎತ್ತುವಲ್ಲಿ ಯಶಸ್ವಿಯಾದರು. ಸ್ನ್ಯಾಚ್‌ನಲ್ಲಿ 167 ಕೆ.ಜಿ ಹಾಗೂ ಕ್ಲೀನ್‌–ಜರ್ಕ್‌ನಲ್ಲಿ 223 ಕೆ.ಜಿ. ಸಾಧನೆ ಮಾಡಿದರು.

‍ಪಾಕಿಸ್ತಾನದ ಮೊಹಮ್ಮದ್‌ ನೂಹ್‌ ಬಟ್ 405 ಕೆ.ಜಿ. (173+232) ಭಾರ ಎತ್ತಿ, ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ನ್ಯೂಜಿಲೆಂಡ್‌ನ ಡೇವಿಡ್‌ ಆ್ಯಂಡ್ರ್ಯೂ ಲಿಟಿ (170+224) ಬೆಳ್ಳಿ ಪಡೆದರು.

ADVERTISEMENT

ಸ್ನ್ಯಾಚ್‌ನಲ್ಲಿ 167 ಕೆ.ಜಿ.ಯೊಂದಿಗೆ ಸ್ಪರ್ಧೆ ಆರಂಭಿಸಿದ ಗುರುದೀಪ್‌ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಎರಡನೇ ಅವಕಾಶದಲ್ಲಿ ಯಶ ಕಂಡ ಅವರು ಕೊನೆಯ ಅವಕಾಶದಲ್ಲಿ 173 ಕೆ.ಜಿ. ಎತ್ತಿದರು.

ಜಂಟಿ ಮೂರನೇ ಸ್ಥಾನದೊಂದಿಗೆ ಕ್ಲೀನ್‌–ಜರ್ಕ್‌ನಲ್ಲಿ ಪೈಪೋಟಿಗಿಳಿದ ಅವರು ಮೊದಲ ಪ್ರಯತ್ನದಲ್ಲಿ 207 ಕೆ.ಜಿ. ಎತ್ತಿದರು. ಎರಡನೇ ಪ್ರಯತ್ನದಲ್ಲಿ 215 ಕೆ.ಜಿ ಎತ್ತುವಲ್ಲಿ ಎಡವಿದರು. ಆದರೂ ಎದೆಗುಂದದೆ ಮೂರನೇ ಪ್ರಯತ್ನದಲ್ಲಿ ಭಾರವನ್ನು 8 ಕೆ.ಜಿ ಯಷ್ಟು ಹೆಚ್ಚಿಸಿ, 223 ಕೆ.ಜಿ. ಎತ್ತಲು ಯಶ ಕಂಡರು. ಕ್ಲೀನ್‌–ಜರ್ಕ್‌ನಲ್ಲಿ ಇದು ಅವರ ವೈಯಕ್ತಿಕ ಶ್ರೇಷ್ಠ ಪ್ರದರ್ಶನವೂ ಹೌದು.

‘ಮೊಣಕೈನಲ್ಲಿ ನೋವು ಇದ್ದ ಕಾರಣ ನನಗೆ ಸ್ನ್ಯಾಚ್‌ನಲ್ಲಿ ಪೂರ್ಣ ಸಾಮರ್ಥ್ಯ ತೋರಲು ಆಗಲಿಲ್ಲ. ಇಲ್ಲದಿದ್ದರೆ, ಕನಿಷ್ಠ ಬೆಳ್ಳಿಯ ಪದಕ ಗೆಲ್ಲಬಹುದಿತ್ತು’ ಎಂದು ಏಳು ಬಾರಿಯ ರಾಷ್ಟ್ರೀಯ ಚಾಂಪಿಯನ್‌ ಆಗಿರುವ ಗುರುದೀಪ್‌ ಪ್ರತಿಕ್ರಿಯಿಸಿದರು.

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಸವಾಲು ಇದರೊಂದಿಗೆ ಕೊನೆಗೊಂಡಿದೆ. ಮೂರು ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಭಾರತ ಜಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.