ADVERTISEMENT

22 ರಾಜ್ಯ ಕುಸ್ತಿ ಸಂಸ್ಥೆಗಳು ಸಭೆಯಲ್ಲಿ ಭಾಗಿ: ಬ್ರಿಜ್‌ಭೂಷಣ್

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 22:57 IST
Last Updated 30 ಜುಲೈ 2023, 22:57 IST
   

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಚುನಾವಣೆಗೆ ಸ್ಪರ್ಧಿಸಲಿರುವ ತಮ್ಮ ನಿಷ್ಠ ಗುಂಪಿನ ಅಭ್ಯರ್ಥಿಗಳ ಹೆಸರುಗಳನ್ನು ಸೋಮವಾರ ಪ್ರಕಟಿಸಲಾಗುವುದು ಎಂದು ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ಹೇಳಿದರು.

ಡಬ್ಲ್ಯುಎಫ್‌ಐಗೆ ಆಗಸ್ಟ್‌ 12ರಂದು ಚುನಾವಣೆ ನಿಗದಿ ಆಗಿದ್ದು, ನಾಮಪತ್ರ ಸಲ್ಲಿಕೆಗೆ ಜುಲೈ 31 ಕೊನೆಯ ದಿನ. ಅಂದೇ ಅಭ್ಯರ್ಥಿಗಳ ಹೆಸರನ್ನು ಅವರು ಪ್ರಕಟಿಸಲಿದ್ದಾರೆ. ಬ್ರಿಜ್‌ಭೂಷಣ್‌, ತಮ್ಮ ಪರವಾಗಿರುವ ರಾಜ್ಯ ಕುಸ್ತಿ ಸಂಸ್ಥೆಗಳ ಪ್ರತಿನಿಧಿಗಳ ಜತೆ ಭಾನುವಾರ ಸಭೆ ನಡೆಸಿದರು.

‘ಡಬ್ಲ್ಯುಎಫ್‌ಐ ಮಾನ್ಯತೆ ಹೊಂದಿರುವ 25 ರಾಜ್ಯ ಕುಸ್ತಿ ಸಂಸ್ಥೆಗಳಲ್ಲಿ 22 ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು’ ಎಂದು ಅವರು ಹೇಳಿದರು.

ADVERTISEMENT

ಬ್ರಿಜ್‌ ಭೂಷಣ್ ಮತ್ತು ಅವರ ಪುತ್ರ ಕರಣ್ ಈ ಬಾರಿ ಕಣದಲ್ಲಿರುವುದಿಲ್ಲ. ಬ್ರಿಜ್‌ಭೂಷಣ್‌ ಈಗಾಗಲೇ 12 ವರ್ಷ ಅಧಿಕಾರ ಪೂರೈಸಿರುವ ಕಾರಣ ಸ್ಪರ್ಧಿಸುವಂತಿಲ್ಲ. ಅವರ ಅಳಿಯ ವಿಶಾಲ್‌ ಸಿಂಗ್‌ ಕೂಡಾ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ವಿಶಾಲ್‌ ಅವರು ಬಿಹಾರದ ಪ್ರತಿನಿಧಿಯಾಗಿ ಉನ್ನತ ಹುದ್ದೆಗೆ ಸ್ಪರ್ಧಿಸುವರು ಎನ್ನಲಾಗಿತ್ತು.

‘ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ ಎಂದು ಅವರು (ವಿಶಾಲ್‌) ಸ್ಪಷ್ಟಪಡಿಸಿದ್ದಾರೆ. ಪದಾಧಿಕಾರಿಯಾಗಿ ಆಯ್ಕೆಯಾದರೆ ತಮ್ಮ ಹುದ್ದೆಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಿಲ್ಲ ಎಂದಿದ್ದಾರೆ’ ಎಂಬುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯ ಸಂಸ್ಥೆಯ ಕಾರ್ಯದರ್ಶಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.