ADVERTISEMENT

Tokyo Olympics: ಇತಿಹಾಸಕ್ಕೆ ಮೆರಗು ತುಂಬುವತ್ತ ರಾಣಿ ಪಡೆ ಚಿತ್ತ

ಸೆಮಿಫೈನಲ್‌ನಲ್ಲಿ ಭಾರತ –ಅರ್ಜೆಂಟಿನಾ ಮುಖಾಮುಖಿ

ಪಿಟಿಐ
Published 3 ಆಗಸ್ಟ್ 2021, 19:30 IST
Last Updated 3 ಆಗಸ್ಟ್ 2021, 19:30 IST
ಭಾರತ ಮಹಿಳಾ ಹಾಕಿ ತಂಡ
ಭಾರತ ಮಹಿಳಾ ಹಾಕಿ ತಂಡ   

ಟೋಕಿಯೊ: ಇದೇ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಬರೆದಿರುವ ಮಹಿಳಾ ತಂಡ ಈಗ ಮತ್ತೊಂದು ಹೆಜ್ಜೆ ಮುಂದಿಡುವತ್ತ ಚಿತ್ತ ನೆಟ್ಟಿದೆ.

ರಾಣಿ ರಾಂಪಾಲ್ ಬಳಗವು ಬುಧವಾರ ನಡೆಯುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಅರ್ಜೇಂಟಿನಾ ಎದುರು ಆಡಲಿದೆ.

ಕ್ವಾರ್ಟರ್‌ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಭರ್ತಿ ಆತ್ಮವಿಶ್ವಾಸದಲ್ಲಿರುವ ಭಾರತ ವನಿತೆಯರ ತಂಡವು ಫೈನಲ್‌ ಪ್ರವೇಶಿಸುವ ಹುಮ್ಮಸ್ಸಿನಲ್ಲಿದೆ.

ADVERTISEMENT

ಡ್ರ್ಯಾಗ್‌ ಫ್ಲಿಕ್ ಪರಿಣತರಾದ ಗುರ್ಜಿತ್ ಕೌರ್ ಗಳಿಸಿದ್ದ ಏಕೈಕ ಗೋಲಿನ ನೆರವಿನಿಂದ ಭಾರತವು ಎಂಟರ ಘಟ್ಟದಲ್ಲಿ 1–0ಯಿಂದ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಆ ಪಂದ್ಯದಲ್ಲಿ ತಂಡದ ರಕ್ಷಣಾ ಪಡೆ ಮತ್ತು ಗೋಲ್‌ಕೀಪರ್ ಸವಿತಾ ಅವರ ಆಟ ಅಮೋಘವಾಗಿತ್ತು.

ಆದರೆ ಸೆಮಿಫೈನಲ್‌ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಅರ್ಜೆಂಟಿನಾವನ್ನು ಮಣಿಸಲು ವಿಶೇಷ ಕಾರ್ಯತಂತ್ರದೊಂದಿಗೆ ಕಣಕ್ಕಿಳಿಯಬೇಕು. ಕೋಚ್ ಶೋರ್ಡ್‌ ಮರೈನ್ ಏನು ತಂತ್ರ ಹೆಣೆದಿದ್ದಾರೆ ಎಂಬ ಕುತೂಹಲ ಈಗ ಗರಿಗೆದರಿದೆ.

ಅರ್ಜೆಂಟಿನಾ ತಂಡವು 2000ರಲ್ಲಿ ಸಿಡ್ನಿ ಮತ್ತು 2012ರಲ್ಲಿ ಲಂಡನ್ ಒಲಿಂಪಿಕ್ ಕೂಟಗಳಲ್ಲಿ ಬೆಳ್ಳಿ ಪದಕ ಜಯಿಸಿತ್ತು. ಈಗ ಚಿನ್ನದತ್ತ ಕಣ್ಣು ನೆಟ್ಟಿದೆ. ಒಲಿಂಪಿಕ್‌ ಕೂಟಕ್ಕೂ ಮುನ್ನ ಅರ್ಜೆಂಟಿನಾ ಎದುರು ಸರಣಿ ಆಡಿದ್ದ ಭಾರತವು 1–1ರಿಂದ ಡ್ರಾ ಸಾಧಿಸಿತ್ತು.

1980ರಲ್ಲಿ ಆಡಿದ್ದ ಭಾರತ ಮಹಿಳಾ ಬಳಗವು ಆರು ತಂಡಗಳ ಪೈಕಿ ನಾಲ್ಕನೇ ಸ್ಥಾನ ಪಡೆದಿತ್ತು. ಅದಾದ ನಂತರ 2016ರಲ್ಲಿ ಒಲಿಂಪಿಕ್ ಅರ್ಹತೆ ಗಳಿಸಿತ್ತು. ಕೊನೆಯ ಸ್ಥಾನ ಪಡೆದಿತ್ತು. ಟೋಕಿಯೊದಲ್ಲಿಯೂ ಗುಂಪು ಹಂತದ ಆರಂಭಿಕ ಪಂದ್ಯಗಳನ್ನು ಸೋತಿತ್ತು. ನಂತರ ಪುಟಿದೆದ್ದು ನಾಕೌಟ್ ತಲುಪಿತ್ತು.

ಮಂಗಳವಾರ ನಡೆದ ಪುರುಷರ ಸೆಮಿಫೈನಲ್‌ಗಳನ್ನು ತದೇಕಚಿತ್ತದಿಂದ ನೋಡಿರುವ ರಾಣಿ ಬಳಗವು ತನ್ನ ಮುಂದಿರುವ ಸವಾಲಿಗೆ ಸಿದ್ಧವಾಗಿದೆ. ವಂದನಾ ಕಟಾರಿಯಾ, ಗುರ್ಜಿತ್ ಕೌರ್ ಅವರ ಮೇಲೆ ನಿರೀಕ್ಷೆಯ ಭಾರವಿದೆ.

‘ಸೆಮಿ ತಲುಪಿ ಇತಿಹಾಸ ಬರೆದಿದ್ದೇವೆ ಅಷ್ಟೆ. ಆದರೆ ಇಲ್ಲಿಗೆ ಮುಗಿಸಲು ನಮಗೆ ಇಷ್ಟವಿಲ್ಲ. ಇಲ್ಲಿಂದ ಮುಂದುವರೆದು ಮತ್ತೊಂದು ಇತಿಹಾಸ ಬರೆಯುತ್ತೇವೆ‘ ಎಂದು ರಾಣಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.