ADVERTISEMENT

ಸಂಭ್ರಮಾಚರಣೆ ಇನ್ನೂ ಬಾಕಿ ಇದೆ: ಪಿ.ವಿ. ಸಿಂಧು ನುಡಿ

ಭಾರತಕ್ಕೆ ಮರಳಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್

ಪಿಟಿಐ
Published 27 ಆಗಸ್ಟ್ 2019, 19:45 IST
Last Updated 27 ಆಗಸ್ಟ್ 2019, 19:45 IST
ಸ್ವಿಟ್ಜರ್‌ಲೆಂಡ್‌ನ ಬಾಸೆಲ್‌ನಿಂದ ಮಂಗಳವಾರ ನವದೆಹಲಿಗೆ ಮರಳಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಕೇಂದ್ರ ಕ್ರೀಡಾ ಸಚಿವ ಕಿರಣ ರಿಜಿಜು, ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್, ಪಿ.ವಿ. ರಮಣ (ಸಿಂಧು ತಂದೆ), ಕೋಚ್ ಕಿಮ್ ಜಿ ಯೂನ್ ಹಾಜರಿದ್ದರು  –ಎಎಫ್‌ಪಿ ಚಿತ್ರ
ಸ್ವಿಟ್ಜರ್‌ಲೆಂಡ್‌ನ ಬಾಸೆಲ್‌ನಿಂದ ಮಂಗಳವಾರ ನವದೆಹಲಿಗೆ ಮರಳಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಕೇಂದ್ರ ಕ್ರೀಡಾ ಸಚಿವ ಕಿರಣ ರಿಜಿಜು, ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್, ಪಿ.ವಿ. ರಮಣ (ಸಿಂಧು ತಂದೆ), ಕೋಚ್ ಕಿಮ್ ಜಿ ಯೂನ್ ಹಾಜರಿದ್ದರು  –ಎಎಫ್‌ಪಿ ಚಿತ್ರ   

ನವದೆಹಲಿ: ಸ್ವಿಟ್ಜರ್‌ಲೆಂಡ್‌ನ ಬಾಸೆಲ್‌ನಲ್ಲಿ ಹೋದ ಭಾನುವಾರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ ಆಗಿ ಹೊರಹೊಮ್ಮಿ ಇತಿಹಾಸ ನಿರ್ಮಿಸಿದ ಪಿ.ವಿ. ಸಿಂಧು ಮಂಗಳವಾರ ಭಾರತಕ್ಕೆ ಮರಳಿದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಧು, ‘ಪಂದ್ಯ ಗೆದ್ದ ನಂತರ ಸಂಭ್ರಮಾಚರಣೆ ಮಾಡಲು ಹೆಚ್ಚು ಸಮಯ ಸಿಕ್ಕಿಲ್ಲ. ಪಂದ್ಯದ ನಂತರ ಬೇಗನೆ ಹೋಟೆಲ್‌ಗೆ ಹೋಗಬೇಕಿತ್ತು. ಮರುದಿನ ಬೆಳಿಗ್ಗೆಯೇ ಇಲ್ಲಿಗೆ ಮರಳಲು ಪ್ರಯಾಣ ಆರಂಭಿಸಬೇಕಿತ್ತು’ ಎಂದರು.

ಒಲಿಂಪಿಕ್ಸ್‌ ಸಿದ್ಧತೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ‘ಇನ್ನೂ ಹೆಚ್ಚು ಶ್ರಮವಹಿಸಿ ಅಭ್ಯಾಸ ಮಾಡುತ್ತೇನೆ. ಇನ್ನಷ್ಟು ಪದಕಗಳನ್ನು ಜಯಿಸುತ್ತೇನೆ’ ಎಂದರು.

ADVERTISEMENT

‘ಫೈನಲ್‌ನಲ್ಲಿ ಜಯಿಸಿದ ನಂತರ ಪದಕ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಗೀತೆ ಮೊಳಗಿದಾಗ ಕಣ್ಣಾಲಿಗಳು ತುಂಬಿಬಂದಿದ್ದವು. ಬಹಳ ಭಾವುಕಳಾಗಿದ್ದೆ.ಶುಭ ಹಾರೈಸಿದ ಎಲ್ಲ ಅಭಿಮಾನಿಗಳಿಗೂ ನಾನು ಚಿರಋಣಿ. ನಿಮ್ಮೆಲ್ಲರ (ಅಭಿಮಾನಿಗಳು) ಆಶೀರ್ವಾದದಿಂದಲೇ ಈ ಸಾಧನೆ ಸಾಧ್ಯವಾಗಿದೆ’ ಎಂದು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಐದು ಬಾರಿ ಪದಕಗಳನ್ನು ಗೆದ್ದಿರುವ ಸಿಂಧು ಹೇಳಿದರು.

‘ಕೋಚ್ ಗೋಪಿ ಸರ್ ಮತ್ತು ಕಿಮ್ ಜಿ ಯೂನ್ ಅವರಿಗೆ ಬಹಳಷ್ಟು ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ನನ್ನ ಆಟದಲ್ಲಿ ಸುಧಾರಣೆಗಾಗಿ ಅವರು ಬಹಳಷ್ಟು ಪ್ರಯತ್ನಿಸಿದ್ದಾರೆ’ ಎಂದರು. ಕೇಂದ್ರ ಮತ್ತು ತಮ್ಮ ತವರು ರಾಜ್ಯ ಕ್ರೀಡಾ ಇಲಾಖೆಗಳು, ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಫ್‌ಐ) ಗಳಿಗೂ ಅವರು ಕೃತಜ್ಞತೆ ಸಲ್ಲಿಸಿದರು.

‘ಚಿನ್ನದ ಪದಕ ಗೆದ್ದಿರುವುದು ಸಿಂಧು ಅವರ ಬಹುದೊಡ್ಡ ಸಾಧನೆ. ಆದರೆ ಇದಕ್ಕೂ ಮುನ್ನ ಅವರು ಜಯಿಸಿರುವ ಎಲ್ಲ ಪದಕಗಳೂ ಅಮೋಘ ಸಾಧನೆ’ ಎಂದು ಕೋಚ್ ಗೋಪಿಚಂದ್ ಹೇಳಿದರು.

‘ಒಲಿಂಪಿಕ್ಸ್‌ ಸಮೀಪಿಸುತ್ತಿದೆ. ಈ ಸಂದರ್ಭದೆಲ್ಲಿ ವಿಶ್ವ ಚಾಂಪಿಯನ್‌ ಆಗಿರುವುದು ಸಿಂಧು ಅವರ ಆತ್ಮವಿಶ್ವಾಸ ವೃದ್ಧಿಸಿದೆ. ಫೈನಲ್‌ನಲ್ಲಿ ಅವರು ಆಡಿದ್ದನ್ನು ನೋಡುವುದೇ ಅವಿಸ್ಮರಣೀಯ ಅನುಭವವಾಗಿತ್ತು’ ಎಂದರು.

‘ನನಗೆ ಬಹಳ ಅಮೊಘವಾದ ಸ್ವಾಗತ ಇಲ್ಲಿ ಲಭಿಸಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಕ್ರೀಡಾ ಸಂಘಟನೆಗೆ ನಾನು ಆಭಾರಿಯಾಗಿದ್ದೇನೆ’ ಎಂದರು.

ಪ್ರಧಾನಿ ಭೇಟಿಯಾದ ಸಿಂಧು
ದೆಹಲಿಗೆ ಬಂದಿಳಿದ ಪಿ.ವಿ. ಸಿಂಧು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರನ್ನು ಭೇಟಿಯಾದರು.

ಭಾನುವಾರ ಅವರು ಚಿನ್ನದ ಪದಕ ಗೆದ್ದ ಕೂಡಲೇ ಮೋದಿ ಮತ್ತು ರಿಜುಜು ಅವರು ಶುಭಾಶಯ ಕೋರಿ ಟ್ವೀಟ್ ಮಾಡಿದ್ದರು.

ಇದೇ ಸಂದರ್ಭದಲ್ಲಿ ಕಿರಣ್ ರಿಜಿಜು ಅವರು ಸಿಂಧುಗೆ ₹ 10 ಲಕ್ಷ ಬಹುಮಾನದ ಚೆಕ್ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.