ADVERTISEMENT

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಫೈನಲ್‌ಗೇರಲು ಶ್ರೀಶಂಕರ್‌, ಪಾರುಲ್‌ ವಿಫಲ

ಪಿಟಿಐ
Published 15 ಸೆಪ್ಟೆಂಬರ್ 2025, 15:49 IST
Last Updated 15 ಸೆಪ್ಟೆಂಬರ್ 2025, 15:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಟೋಕಿಯೊ: ಭಾರತದ ಲಾಂಗ್‌ಜಂಪ್ ತಾರೆ ಮುರಳಿ ಶ್ರೀಶಂಕರ್ ಅವರು ವಿಶ್ವ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾದರು. ಅವರು ಸೋಮವಾರ ತಮ್ಮ ಅರ್ಹತಾ ಗುಂಪಿನಲ್ಲಿ 14ನೇ ಸ್ಥಾನ ಪಡೆಯುವುದರೊಂದಿಗೆ ಈ ಕೂಟದಲ್ಲಿ ಭಾರತದ ಅಥ್ಲೀಟುಗಳ ನಿರಾಶಾದಾಯಕ ನಿರ್ವಹಣೆ ಮುಂದುವರಿಯಿತು.

ಮೂರನೇ ಸಲ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಶ್ರೀಶಂಕರ್‌ ಅವರು ‘ಎ’ ಗುಂಪಿನ ಕ್ವಾಲಿಫಿಕೇಷನ್‌ನಲ್ಲಿ ಮೂರು ಯತ್ನಗಳಲ್ಲಿ 7.78 ಮೀ.ಗಳ ಉತ್ತಮ ಜಿಗಿತ ದಾಖಲಿಸಿದರು. ಇದು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಅವರ ಕಳಪೆ ಸಾಧನೆ. ಅವರು 37 ಮಂದಿ ಸ್ಪರ್ಧಿಗಳಲ್ಲಿ ಒಟ್ಟಾರೆ 25ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ADVERTISEMENT

8.15 ಮೀ.ಗಳ ಅರ್ಹತಾ ಗುರಿ ದಾಟಿದವರು ಅಥವಾ ಅತ್ಯುತ್ತಮ ಎರಡು ಗುಂಪುಗಳಲ್ಲಿ ಪೈಕಿ ಅತ್ಯುತ್ತಮ ಸಾಧನೆ ತೋರಿದ ಒಟ್ಟು 12 ಮಂದಿ ಫೈನಲ್ ತಲುಪುತ್ತಾರೆ. ಅವರು 2022ರ ಮಾರ್ಚ್‌ ನಂತರ ಎರಡು ಬಾರಿ ಮಾತ್ರ 7.78 ಮೀ.ಗಿಂತ ಕಡಿಮೆ ದೂರ ಜಿಗಿದಿದ್ದರು. ಇದರಲ್ಲಿ 7.74 ಮೀ. ದೂರವನ್ನು 2023ರ ವಿಶ್ವ ಚಾಂಪಿಯನ್‌ಷಿಪ್‌ ಅರ್ಹತಾ ಸುತ್ತಿನಲ್ಲಿ ದಾಖಲಿಸಿದ್ದು ಎಂಬದು ವಿಶೇಷ.

2022ರ ಯುಜೀನ್ (ಅಮೆರಿಕ) ಚಾಂಪಿಯನ್‌ಷಿಪ್‌ನಲ್ಲಿ ಏಳನೇ ಸ್ಥಾನ ಗಳಿಸಿದ್ದು, 26 ವರ್ಷ ವಯಸ್ಸಿನ ಮುರಳಿ ಅವರ ಶ್ರೇಷ್ಠ ಸಾಧನೆಯಾಗಿದೆ. ಮೊಣಕಾಲಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸುತ್ತಿದ್ದ ಕಾರಣ ಅವರು 20244 ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರಲಿಲ್ಲ. ಅವರು ಈ ವರ್ಷ ದಾಖಲಿಸಿದ ಶ್ರೇಷ್ಠ ಅವಧಿ (8.13 ಮೀ) ಇಲ್ಲಿ ದಾಖಲಿಸಿದ್ದಲ್ಲಿ ಅಂತಿಮ ಸುತ್ತಿಗೆ ತಲುಪಬಹುದಿತ್ತು. ಅವರ ವೈಯಕ್ತಿಕ ಶ್ರೇಷ್ಠ ಸಾಧನೆ ಯುಜೀನ್‌ನಲ್ಲಿ ದಾಖಲಿಸಿದ 8.41 ಮೀ.ಗಳಾಗಿವೆ.

ಪಾರುಲ್‌ ವಿಫಲ: ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಪಾರುಲ್ ಚೌಧರಿ ಮತ್ತು ಅಂಕಿತಾ ಧ್ಯಾನಿ ಅವರು ಇಲ್ಲಿ ತಮ್ಮ ಹೀಟ್‌ ರೇಸ್‌ನಲ್ಲಿ ಕ್ರಮವಾಗಿ 9 ಮತ್ತು 11ನೇ ಸ್ಥಾನ ಗಳಿಸಲಷ್ಟೇ ಶಕ್ತರಾದರು. ಪಾರುಲ್ ಒಟ್ಟಾರೆ 20ನೇ ಸ್ಥಾನ ಪಡೆದರೆ, ಅಂಕಿತಾ 35ನೇ (ಹಾಗೂ ಅಂತಿಮ) ಸ್ಥಾನ ಗಳಿಸಿದರು.

ಪಾರುಲ್ 9ನಿ.22.24 ಸೆ.ಗಳಲ್ಲಿ ಗುರಿ ತಲುಪಿದರು. ಇದು ಅವರ ರಾಷ್ಟ್ರೀಯ ದಾಖಲೆ (9:12.46 ಸೆ.) ಮತ್ತು ಈ ಋತುವಿನ ಶ್ರೇಷ್ಠ ಓಟಕ್ಕಿಂತ (9:12.46 ಸೆ.) ಅವಧಿಗಿಂತ ಕಡಿಮೆ. ಬುಡಾಪೆಸ್ಟ್‌ ಆವೃತ್ತಿಯಲ್ಲಿ ಫೈನಲ್ ಸುತ್ತು ತಲುಪಿದ್ದ ಅವರು 10ನೇ ಸ್ಥಾನ ಗಳಿಸಿದ್ದರು. ಅವರು ಇಲ್ಲಿ ಕಣಕ್ಕಿಳಿಯುವ ಮೂರೂವರೆ ತಿಂಗಳ ಮೊದಲು ಎಲ್ಲೂ ಸ್ಪರ್ಧಿಸಿರಲಿಲ್ಲ. ಅವರ ಕಳಪೆ ನಿರ್ವಹಣೆ ಪ್ರಶ್ನೆಗಳನ್ನು ಮೂಡಿಸಿದೆ.

ಇತರ ದೇಶಗಳ ಅಥ್ಲೀಟುಗಳು ಹಿಂದೆಸರಿದ ಕಾರಣ ಕೊನೆಗಳಿಗೆಯಲ್ಲಿ ಅವಕಾಶ ಪಡೆದ ಅಂಕಿತಾ 10ನಿ.03.22 ಸೆ.ಗಳನ್ನು ತೆಗೆದುಕೊಂಡರು.

ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ರಾಷ್ಟ್ರೀಯ ದಾಖಲೆವೀರ ತೇಜಸ್‌ ಶಿರ್ಸೆ ಎಂಟು ಮಂದಿಯ ಹೀಟ್‌ನಲ್ಲಿ ಆರನೇ ಸ್ಥಾನ ಗಳಿಸಿದ್ದರಿಂದ ಸೆಮಿಫೈನಲ್‌ಗೆ ತೇರ್ಗಡೆಯಾಗಲಿಲ್ಲ. 23 ವರ್ಷದ ಶಿರ್ಸೆ 13.57 ಸೆ.ಗಳಲ್ಲಿ ಗುರಿತಲುಪಿ, ಅವಧಿಯ ಲೆಕ್ಕದಲ್ಲಿ ಒಟ್ಟಾರೆ 29ನೇ ಸ್ಥಾನ ಗಳಿಸಿದರು. ರಾಷ್ಟ್ರೀಯ ದಾಖಲೆ (13.41 ಸೆ.) ಸುಧಾರಿಸಲು ಅವರಿಂದ ಆಗಲಿಲ್ಲ.

ಐದು ಹೀಟ್‌ಗಳಲ್ಲಿ ಮೊದಲ ನಾಲ್ಕು ಸ್ಥಾನ ಪಡೆದವರ ಜೊತೆಗೆ ನಂತರ ನಾಲ್ಕು ವೇಗದ ಅವಧಿಯಲ್ಲಿ ಓಟ ಮುಗಿಸಿದವರು ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸುತ್ತಾರೆ. ವೀಸಾ ಸಮಸ್ಯೆಯಿಂದಾಗಿ ಮಹಾರಾಷ್ಟ್ರದ ತೇಜಸ್‌ ಕೊನೆಯವರಾಗಿ ಟೋಕಿಯೊಕ್ಕೆ ತೆರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.