ADVERTISEMENT

ಭಾರತಕ್ಕೆ ಸಮಬಲದ ಸಮಾಧಾನ

ಭಾರತದ ಪರ ಗೋಲು ಗಳಿಸಿದ ಹರ್ಮನ್‌ಪ್ರೀತ್‌, ಸಿಮ್ರನ್‌ಜೀತ್‌ ಸಿಂಗ್

ಪಿಟಿಐ
Published 2 ಡಿಸೆಂಬರ್ 2018, 16:57 IST
Last Updated 2 ಡಿಸೆಂಬರ್ 2018, 16:57 IST
ಗೋಲು ಗಳಿಸಿದ ಸಿಮ್ರನ್‌ಜೀತ್ ಸಿಂಗ್ ಸಂಭ್ರಮಿಸಿದ ರೀತಿ –ಪಿಟಿಐ ಚಿತ್ರ
ಗೋಲು ಗಳಿಸಿದ ಸಿಮ್ರನ್‌ಜೀತ್ ಸಿಂಗ್ ಸಂಭ್ರಮಿಸಿದ ರೀತಿ –ಪಿಟಿಐ ಚಿತ್ರ   

ಭುವನೇಶ್ವರ: ‌ಬೆಲ್ಜಿಯಂ ತಂಡದ ಸವಾಲನ್ನು ಸಮರ್ಥವಾಗಿ ಮೆಟ್ಟಿ ನಿಂತ ಭಾರತ ತಂಡ ವಿಶ್ವಕಪ್ ಹಾಕಿ ಟೂರ್ನಿಯ ಎರಡನೇ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ರ‍್ಯಾಂಕಿಂಗ್‌ನಲ್ಲಿ ತನಗಿಂತ ಎರಡು ಸ್ಥಾನಗಳ ಮೇಲೆ ಇರುವ ಬೆಲ್ಜಿಯಂ ಎದುರು ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯ 2–2ರ ಸಮಬಲದಲ್ಲಿ ಮುಕ್ತಾಯಗೊಂಡಿತು.

ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಭರವಸೆಯಿಂದ ಕಣಕ್ಕೆ ಇಳಿದ ಭಾರತಕ್ಕೆ ಬೆಲ್ಜಿಯಂ ಆರಂಭದಲ್ಲೇ ಆಘಾತ ನೀಡಿತು. ಭಾರಿ ಆಕ್ರಮಣಕ್ಕೆ ಮುಂದಾದ ಪ್ರವಾಸಿ ತಂಡದವರು ಮೊದಲ ಕ್ವಾರ್ಟರ್‌ನಲ್ಲಿ ಎರಡು ಬಾರಿ ಭಾರತದ ಆವರಣಕ್ಕೆ ನುಗ್ಗಿದರು. ಆದರೆ ಆತಿಥೇಯರ ರಕ್ಷಣಾ ವಿಭಾಗ ಬಲಿಷ್ಠ ಗೋಡೆ ನಿರ್ಮಿಸಿ ಬೆಲ್ಜಿಯಂಗೆ ನಿರಾಸೆ ಮೂಡಿಸಿತು. ಪೆನಾಲ್ಟಿ ಕಾರ್ನರ್‌ಗಳನ್ನು ಬಿಟ್ಟುಕೊಟ್ಟದ್ದು ಭಾರತಕ್ಕೆ ಮುಳುವಾಯಿತು. ಮೂರು ಪೆನಾಲ್ಟಿ ಕಾರ್ನರ್‌ಗಳ ಪೈಕಿ ಎಂಟನೇ ನಿಮಿಷದಲ್ಲಿ ಲಭಿಸಿದ ಅವಕಾಶವನ್ನು ಹೆನ್ರಿಕ್‌ ಅಲೆಕ್ಸಾಂಡರ್ ಗೋಲಾಗಿ ಪರಿವರ್ತಿಸಿದರು.

ಎರಡನೇ ಕ್ವಾರ್ಟರ್‌ನಲ್ಲೂ ಬೆಲ್ಜಿಯಂ ಆಧಿಪತ್ಯ ಮುಂದುವರಿಯಿತು. ಆ ತಂಡದವರು ಭಾರತದ ಆವರಣಕ್ಕೆ ನಾಲ್ಕು ಬಾರಿ ನುಗ್ಗಿದರೆ, ಭಾರತ ಒಮ್ಮೆ ಮಾತ್ರ ಎದುರಾಳಿ ಆವರಣದಲ್ಲಿ ಆತಂಕ ಸೃಷ್ಟಿಸುವಲ್ಲಿ ಯಶಸ್ವಿಯಾಯಿತು.

ADVERTISEMENT

ಹರ್ಮನ್‌ಪ್ರೀತ್ ಸಿಂಗ್‌ ಮಿಂಚು: ಮೂರನೇ ಕ್ವಾರ್ಟರ್‌ನಲ್ಲಿ ಲಭಿಸಿದ ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಗೋಲು (37ನೇ ನಿಮಿಷ) ಗಳಿಸಿ ಭಾರತಕ್ಕೆ ಸಮಬಲದ ಕಾಣಿಕೆ ನೀಡಿದರು. ನಾಲ್ಕನೇ ಕ್ವಾರ್ಟರ್‌ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಮೋಹಕ ಗೋಲಿನ ಮೂಲಕ ಸಿಮ್ರನ್‌ಜೀತ್‌ ಸಿಂಗ್‌ 47ನೇ ನಿಮಿಷದಲ್ಲಿ ಭಾರತಕ್ಕೆ ಮುನ್ನಡೆ ಗಳಿಸಿಕೊಟ್ಟು ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು.

ಈ ಗೋಲಿನೊಂದಿಗೆ ಜಯದತ್ತ ಹೆಜ್ಜೆ ಹಾಕಿದ ಭಾರತ ತಂಡ ಕೊನೆಯ ನಿಮಿಷಗಳಲ್ಲಿ ಎದುರಾಳಿಗಳ ಆಕ್ರಮಣದಿಂದ ಒತ್ತಡಕ್ಕೆ ಸಿಲುಕಿತು. 56ನೇ ನಿಮಿಷದಲ್ಲಿ ಮನಪ್ರೀತ್ ಸಿಂಗ್ ಬಳಗ ಗೋಲು ಬಿಟ್ಟುಕೊಟ್ಟಿತು. ಸೈಮನ್ ಗಾಂಗಾರ್ಡ್‌ ಚೆಂಡನ್ನು ಗುರಿ ಸೇರಿಸಿದರು. ಆದರೆ ಎದುರಾಳಿಗಳು ಜಯ ಗಳಿಸದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.