ನವದೆಹಲಿ: ಭಾರತದ ಸ್ಟಾರ್ ಪ್ಯಾರಾ ಅಥ್ಲೀಟ್‌ಗಳ ಅನುಪಸ್ಥಿತಿಯಲ್ಲಿ ಮೂರು ದಿನಗಳ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾನ್‌ಪ್ರಿ ಕೂಟಕ್ಕೆ ಮಂಗಳವಾರ ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
ಭಾರತ ಆತಿಥ್ಯದ ಈ ಕೂಟದಲ್ಲಿ ಜಾವೆಲಿನ್ ಥ್ರೋಪಟು ಸುಮಿತ್ ಆಂಟಿಲ್ ಮತ್ತು ಡಿಸ್ಕಸ್ ಥ್ರೋಪಟು ಯೋಗೇಶ್ ಕಥುನಿಯಾ ಸೇರಿದಂತೆ ದೇಶದ ಪ್ರಮುಖ ಪ್ಯಾರಾ ಅಥ್ಲೀಟ್‌ಗಳ ಗೈರು ಎದ್ದುಕಂಡಿತು.
ಹಲವು ಅಥ್ಲೀಟ್‌ಗಳು ಆರಂಭದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ದೃಢೀಕರಿಸಿದ್ದರು. ನಂತರ ಬೇರೆ ಬೇರೆ ಕಾರಣಗಳಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ ಕೆಲವು ಸ್ಪರ್ಧಾ ವಿಭಾಗಗಳಲ್ಲಿ ಒಬ್ಬ ಅಥ್ಲೀಟ್ ಮಾತ್ರ ಭಾಗವಹಿಸಿದ್ದು ಕಂಡುಬಂತು.
ಪುರುಷರ ಹೈಜಂಪ್ (T42) ಸ್ಪರ್ಧೆಯಲ್ಲಿ ಭಾರತದ ರಾಮಸಿಂಗ್‌ಭಾಯ್ ಗೋಬಿಂದ್‌ಭಾಯ್ ಪಧಿಯಾರ್ ಅವರೊಬ್ಬರೇ ಪಾಲ್ಗೊಂಡರು. ಲೋಕೇಶ್ ಮಂತ್ರ, ಶೈಲೇಶ್ ಕುಮಾರ್ ಮತ್ತು ವರುಣ್ ಸಿಂಗ್ ಭಾಟಿ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಪುರುಷರ ಜಾವೆಲಿನ್ ಥ್ರೋ (ಎಫ್33, ಎಫ್34) ಸ್ಪರ್ಧೆಯಲ್ಲಿ ಕೇವಲ ಇಬ್ಬರು ಅಥ್ಲೀಟ್‌ಗಳು ಭಾಗವಹಿಸಿದರು. ಉಜ್ಬೇಕಿಸ್ತಾನದ ಓಯ್ಬೆಕ್ ಎಗಮ್ನಜರೋವ್ 18.05 ಮೀಟರ್ ಎಸೆತದೊಂದಿಗೆ ಅಗ್ರಸ್ಥಾನ ಪಡೆದರು. ಭಾರತದ ದೇವಶ್ರೀ ಸಚನ್ (11.34 ಮೀ) ಎರಡನೇ ಸ್ಥಾನ ಪಡೆದರು.
ಪುರುಷರ 100 ಮೀಟರ್ (ಟಿ11, ಟಿ12) ಓಟದಲ್ಲಿ ಬ್ರೆಜಿಲ್‌ನ ಜೋಫರ್ಸನ್ ಮರಿನ್ಹೊ ಡಿ ಒಲಿವೇರಾ 11.17 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಭಾರತದ ವಿಷ್ಣು (12.39 ಸೆ) ಮತ್ತು ಪ್ರಗದೀಶ್ವರ ರಾಜ ಮೂರ್ತಿ (12.94 ಸೆ) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ಈ ವಿಭಾಗದಲ್ಲಿ ಮೂರು ಮಂದಿಯಷ್ಟೇ ಸ್ಪರ್ಧಿಸಿದ್ದರು.
ಸೆಪ್ಟೆಂಬರ್‌ನಲ್ಲಿ ಪ್ಯಾರಾ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಷಿಪ್‌ಗಳು ನಿಗದಿಯಾಗಿರುವುದರಿಂದ ಭಾರತದ ಸ್ಟಾರ್ ಅಥ್ಲೀಟ್‌ಗಳು ಅಂತರರಾಷ್ಟ್ರೀಯ ವೇಳಾಪಟ್ಟಿಯ ಪ್ರಕಾರ ತರಬೇತಿಯಲ್ಲಿದ್ದಾರೆ ಎಂದು ಭಾರತ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ದೇವೇಂದ್ರ ಜಜಾರಿಯಾ ಅವರು ಅಥ್ಲೀಟ್‌ಗಳ ಗೈರಿಗೆ ಸ್ಪಷ್ಟನೆ ನೀಡಿದರು.
ಶುಕ್ರವಾರದವರೆಗೆ ನಡೆಯುವ ಈ ಕೂಟದಲ್ಲಿ 90 ಸ್ಪರ್ಧೆಗಳು ನಡೆಯಲಿವೆ. ಭಾರತದ 145 ಅಥ್ಲೀಟುಗಳ ಜೊತೆ, ಬೇರೆ ದೇಶಗಳ 105 ಸ್ಪರ್ಧಿಗಳು ನೋಂದಣಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.