ADVERTISEMENT

ಭಾರತದ ಅಥ್ಲೀಟ್‌ ರೂಪಲ್‌‌ಗೆ 2ನೇ ಪದಕ; ದಾಖಲೆಯ ರೂವಾರಿ

ವಿಶ್ವ ಯುವ ಅಥ್ಲೆಟಿಕ್ಸ್‌: ಭಾರತದ ಅಥ್ಲೀಟ್‌ಗೆ 2ನೇ ಪದಕ

ಪಿಟಿಐ
Published 5 ಆಗಸ್ಟ್ 2022, 21:00 IST
Last Updated 5 ಆಗಸ್ಟ್ 2022, 21:00 IST
ರೂಪಲ್ ಚೌಧರಿ
ರೂಪಲ್ ಚೌಧರಿ   

ಕ್ಯಾಲಿ, ಕ್ಯಾಲಿಫೋರ್ನಿಯಾ: ಭಾರತದ ರೂಪಲ್ ಚೌಧರಿ 20 ವರ್ಷದೊಳಗಿನವರ ಅಥ್ಲೆಟಿಕ್ಸ್‌ನಲ್ಲಿ ಎರಡು ಪದಕಗಳನ್ನು ಜಯಿಸುವ ಮೂಲಕ ಹೊಸ ದಾಖಲೆ ಬರೆದರು.

ಗುರುವಾರ ತಡರಾತ್ರಿ ನಡೆದ ಮಹಿಳೆಯರ 400 ಮೀಟರ್ಸ್ ಓಟದಲ್ಲಿ ಅವರು ಕಂಚಿನ ಪದಕ ಜಯಿಸಿದರು. ಮೂರು ದಿನಗಳ ಹಿಂದೆ ಅವರು ಇದ್ದ ತಂಡವು 4X400 ಮೀ ರಿಲೆಯಲ್ಲಿ ಬೆಳ್ಳಿ ಪದಕ ಜಯಿಸಿತ್ತು. ಇದರೊಂದಿಗೆ ಈ ಕೂಟದ ಇತಿಹಾಸದಲ್ಲಿ ಎರಡು ಪದಕಗಳನ್ನು ಜಯಿಸಿದ ಭಾರತದ ಮೊದಲ ಅಥ್ಲೀಟ್ ಎಂಬ ಶ್ರೇಯಕ್ಕೆ ಪಾತ್ರರಾದರು.

ಉತ್ತರಪ್ರದೇಶದ ಮೀರಟ್ ಜಿಲ್ಲೆಯ ಶಾಹಪುರ್ ಜೈನಪುರ್ ಗ್ರಾಮದ ರೂಪಲ್ ಅವರದ್ದು ರೈತಾಪಿ ಕುಟುಂಬ. ಅವರ ತಂದೆ ಚಿಕ್ಕ ಪ್ರಮಾಣದ ಜಮೀನು ಹೊಂದಿರುವ ಕೃಷಿಕ. 17 ವರ್ಷದ ರೂಪಲ್ ಸಾಧನೆಯಿಂದಾಗಿ ಇಡೀ ಗ್ರಾಮದಲ್ಲಿಯೇ ಸಂಭ್ರಮ ಮುಗಿಲುಮುಟ್ಟಿದೆ.

ADVERTISEMENT

400 ಮೀ ಓಟದಲ್ಲಿ ರೂಪಲ್ 51.85 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಗ್ರೇಟ್‌ ಬ್ರಿಟನ್‌ನ ಯಮಿ ಮೇರಿ ಜಾನ್ (51.50ಸೆ) ಹಾಗೂ ಕೆನ್ಯಾದ ಡ್ಯಾಮ್ರಿಸ್ ಮುತುಂಗಾ (51.71ಸೆ) ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದರು.

ಸೆಮಿಫೈನಲ್‌ನಲ್ಲಿ ಅವರು 52.27 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಮಯವೂ ಹೌದು. ಈ ಕೂಟದ ಇತಿಹಾಸದಲ್ಲಿ ಮಹಿಳೆಯರ 400 ಮೀ ಓಟದಲ್ಲಿ ಪದಕ ಜಯಿಸಿದ ಭಾರತದ ಎರಡನೇ ಅಥ್ಲೀಟ್ ಆಗಿದ್ದಾರೆ. 2018ರಲ್ಲಿ ಹಿಮಾ ದಾಸ್ ಚಿನ್ನದ ಪದಕ ಜಯಿಸಿದ್ದರು.

2016ರಲ್ಲಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಕೂಡ ಚಿನ್ನದ ಸಾಧನೆ ಮಾಡಿದ್ದರು. ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ ಎಂದೇ ಕರೆಯಲಾಗುವ ಈ ಕೂಟದಲ್ಲಿ ಇದುವರೆಗೆ ಭಾರತದ ಅಥ್ಲೀಟ್‌ಗಳು ಒಟ್ಟು ಒಂಬತ್ತು ಪದಕ ಗೆದ್ದಿದ್ದಾರೆ. ಹೋದ ವರ್ಷ ನೈರೋಬಿಯಲ್ಲಿ ನಡೆದಿದ್ದ ಕೂಟದಲ್ಲಿ ಭಾರತವು ಎರಡು ಬೆಳ್ಳಿ ಹಾಗೂ ಒಂದು ಕಂಚು ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.