ADVERTISEMENT

ತಟಸ್ಥ ತಾಣಕ್ಕಾಗಿ ಭಾರತ ಮನವಿ ಸಾಧ್ಯತೆ

ಭಾರತ–ಪಾಕಿಸ್ತಾನ ನಡುವಣ ಡೇವಿಸ್ ಕಪ್ ಪಂದ್ಯ

ರಾಯಿಟರ್ಸ್
Published 8 ಆಗಸ್ಟ್ 2019, 19:30 IST
Last Updated 8 ಆಗಸ್ಟ್ 2019, 19:30 IST
ಮಹೇಶ್ ಭೂಪತಿ
ಮಹೇಶ್ ಭೂಪತಿ   

ನವದೆಹಲಿ (ರಾಯಿಟರ್ಸ್): ಮುಂದಿನ ತಿಂಗಳು ನಡೆಯಲಿರುವ ಪಾಕಿಸ್ತಾನ ಎದುರಿನ ಡೇವಿಸ್ ಕಪ್ ಟೆನಿಸ್ ಪಂದ್ಯವನ್ನು ಇಸ್ಲಾಮಾಬಾದ್‌ನಿಂದ ಸ್ಥಳಾಂತರಿಸಬೇಕು. ಪಂದ್ಯವನ್ನು ತಟಸ್ಥ ತಾಣದಲ್ಲಿ ಆಯೋಜಿಸಬೇಕು ಎಂದು ಭಾರತ ಟೆನಿಸ್ ಫೆಡರೇಷನ್ ಐಟಿಎಫ್‌ಗೆ ಮನವಿ ಮಾಡಲು ಸಿದ್ಧವಾಗಿದೆ.

ಈಚೆಗೆ ಜಮ್ಮು–ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿರುವ ಭಾರತ ಸರ್ಕಾರವು 370ನೇ ವಿಧಿಯ ವಿಶೇಷಾಧಿಕಾರ ರದ್ದುಗೊಳಿಸಿತ್ತು. ಅದನ್ನು ಪ್ರತಿಭಟಿಸಿರುವ ಪಾಕ್ ಸರ್ಕಾರವು ಭಾರತದೊಂದಿಗೆ ಎಲ್ಲ ವಾಣಿಜ್ಯ ವ್ಯವಹಾರಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಅಲ್ಲದೇ ಪಾಕ್‌ನಲ್ಲಿರುವ ಭಾರತೀಯ ರಾಯಭಾರಿಯನ್ನು ಕೂಡ ಮರಳಿ ಹೋಗುವಂತೆ ಸೂಚಿಸಿತ್ತು. ಇದರಿಂದಾಗಿ ಪರಿಸ್ಥಿತಿಯು ತುಸು ಉದ್ವಿಗ್ನಗೊಂಡಿದೆ. ಈ ಸಂದರ್ಭದಲ್ಲಿ ಉಭಯ ದೇಶಗಳ ತಂಡದ ಪಂದ್ಯವು ಇಸ್ಲಾಮಾಬಾದ್‌ನಲ್ಲಿ ನಡೆಯುವುದು ಕಷ್ಟ ಎಂದು ಭಾರತ ಟೆನಿಸ್ ಫೆಡರೇಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಪ್ಟೆಂಬರ್ 14–15ರಂದು ಭಾರತ–ಪಾಕ್ ನಡುವಣ ಪಂದ್ಯ ನಡೆಯಲಿದೆ. ಮಹೇಶ್ ಭೂಪತಿ ನಾಯಕತ್ವದ ಆರು ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ.

ADVERTISEMENT

‘ಸದ್ಯ ಯಾವುದೇ ಬದಲಾವಣೆ ಇಲ್ಲ. ಇನ್ನು ಕೆಲವು ದಿನಗಳವರೆಗೆ ಕಾದು ನೋಡುತ್ತೇವೆ. ಪರಿಸ್ಥಿತಿಯು ಹೀಗೆ ಮುಂದುವರಿದರೆ ಮುಂದಿನ ಯೋಚನೆ ಮಾಡುತ್ತೇವೆ’ ಎಂದು ಎಐಟಿಎ ಪ್ರಧಾನ ಕಾರ್ಯದರ್ಶಿ ಹಿರಣ್ಮಯ್ ಚಟರ್ಜಿ ಹೇಳಿದ್ದಾರೆ.

‘ನಮ್ಮ ಸಂಸ್ಥೆಯ ಪದಾಧಿಕಾರಿಗಳು ಅಥವಾ ಯಾವುದೇ ಆಟಗಾರರು ಪಾಕ್‌ನಲ್ಲಿ ನಡೆಯುವ ಪಂದ್ಯದ ಬಗ್ಗೆ ಅಥವಾ ಅಲ್ಲಿಯ ಭದ್ರತೆಯ ಕುರಿತು ಯಾವುದೇ ಹೇಳಿಕೆಯನ್ನು ಇದುವರೆಗೂ ನೀಡಿಲ್ಲ. ಅದೆಲ್ಲ ಊಹಾಪೋಹಗಳಷ್ಟೇ’ ಎಂದು ಚಟರ್ಜಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.