ADVERTISEMENT

Australian Open 2025 | ಸೋಲಿನಿಂದ ಪಾರಾದ ಡೇನಿಯಲ್ ಮೆಡ್ವೆಡೇವ್‌

ಏಜೆನ್ಸೀಸ್
Published 14 ಜನವರಿ 2025, 23:51 IST
Last Updated 14 ಜನವರಿ 2025, 23:51 IST
<div class="paragraphs"><p>ಡೇನಿಯಲ್ ಮೆಡ್ವೆಡೇವ್</p></div>

ಡೇನಿಯಲ್ ಮೆಡ್ವೆಡೇವ್

   

(ರಾಯಿಟರ್ಸ್ ಚಿತ್ರ)

ಮೆಲ್ಬರ್ನ್: ಹೋದ ಸಲದ ರನ್ನರ್‌ ಅಪ್ ಡೇನಿಯಲ್ ಮೆಡ್ವೆಡೇವ್ ಅವರು ಹತಾಶೆಯಲ್ಲಿ ರ‍್ಯಾಕೆಟ್‌ಅನ್ನು ನೆಲಕ್ಕೆ ಕುಕ್ಕಿ ಹಾಳುಗೆಡವಿದರು. ಮಂಗಳವಾರ ಥಾಯ್ಲೆಂಡ್‌ನ ಆಟಗಾರನೆದುರು ಕೊನೆಗೂ ಸಂಯಮ ಕಾಯ್ದುಕೊಂಡ ರಷ್ಯದ ಆಟಗಾರ ಸೋಲಿನ ಸುಳಿಯಿಂದ ಹೊರಬಂದು ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಟೂರ್ನಿಯ ಎರಡನೇ ಸುತ್ತನ್ನು ತಲುಪಿದರು.

ADVERTISEMENT

ಉಳಿದಂತೆ, ನಾಲ್ಕನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್‌ ಮತ್ತು 30ನೇ ಶ್ರೇಯಾಂಕದ ಗೇಲ್ ಮಾನ್‌ಫಿಲ್ಸ್‌ ಅವರು ಮೊದಲ ಸುತ್ತಿನಲ್ಲಿ ಅಧಿಕಾರಯುತ ಜಯಗಳಿಸಿದರು. ಮಹಿಳೆಯರ ವಿಭಾಗದಲ್ಲಿ ನಾಲ್ಕನೇ ಶ್ರೇಯಾಂಕದ ಜಾಸ್ಮಿನ್‌ ಪಾವ್ಲೀನಿ, ಆರನೇ ಶ್ರೇಯಾಂಕದ ಎಲೆನಾ ರಿಬಾಕಿನಾ ಕೂಡ ಗೆಲ್ಲಲು ಕಷ್ಟಪಡಲಿಲ್ಲ.

ಈ ಹಿಂದಿನ ನಾಲ್ಕು ವರ್ಷಗಳಲ್ಲಿ ಮೂರು ಬಾರಿ ಫೈನಲ್‌ನಲ್ಲಿ ಸೋತಿದ್ದ ಮೆಡ್ವೆಡೇವ್ ಅವರು ರಾಡ್‌ ಲೇವರ್‌ ಅರೇನಾದಲ್ಲಿ 418ನೇ ಕ್ರಮಾಂಕದ ಕಸಿಡಿತ್ ಸಮ್ರೆಜ್ ಎದುರು ಗೆಲ್ಲುವ ನೆಚ್ಚಿನ ಆಟಗಾರನಾಗಿದ್ದರು. ಆದರೆ ಐದನೇ ಶ್ರೇಯಾಂಕದ ಮೆಡ್ವೆಡೇವ್ ವರ್ಷದ ತಮ್ಮ ಮೊದಲ ಪಂದ್ಯದ ಮಧ್ಯದಲ್ಲಿ ಜಗಳಗಂಟನಂತೆ ಕಂಡರು. ಕೊನೆಗೂ ಶಾಂತಚಿತ್ತರಾದ ಅವರು ಲಯಕ್ಕೆ ಮರಳಿ 3 ಗಂಟೆ 8 ನಿಮಿಷಗಳಲ್ಲಿ ಪಂದ್ಯ ಗೆದ್ದರು.

‘ಎರಡು ಮತ್ತು ಮೂರನೇ ಸೆಟ್‌ನಲ್ಲಿ ಚೆಂಡನ್ನು ಹೊಡೆಯಲಾಗಲೇ ಇಲ್ಲ. ಏನು ಮಾಡಬೇಕೆಂದು ತೋಚಲಿಲ್ಲ’ ಎಂದು 6–2, 4–6, 3–6, 6–1, 6–2 ರಿಂದ ಗೆದ್ದ ಮೆಡ್ವೆಡೇವ್‌ ಪ್ರತಿಕ್ರಿಯಿಸಿದರು. ಮೂರನೇ ಸೆಟ್‌ನಲ್ಲಿ 28 ವರ್ಷ ವಯಸ್ಸಿನ ಆಟಗಾರ ಒಮ್ಮೆ ರ‍್ಯಾಕೆಟನ್ನು ನೆಲಕ್ಕೆ ಕುಕ್ಕಿ ತುಂಡುಮಾಡಿದರು. ನೆಟ್‌ಗೆ ಅಳವಡಿಸಿದ್ದ ಕ್ಯಾಮೆರಾಕ್ಕೂ ಹಾನಿಯಾಯಿತು. ವೈಲ್ಡ್‌ಕಾರ್ಡ್‌ ಪಡೆದಿದ್ದ ಸಮ್ರೆಜ್‌ಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಾಗಿತ್ತು.

ನಾಲ್ಕನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ (ಅಮೆರಿಕ) ಅವರು 6–2, 6–0, 6–4 ರಿಂದ ಸ್ವದೇಶದ ಜೆನ್ಸನ್ ಬ್ರೂಕ್ಸ್‌ಬಿ ಎದುರು ಜಯಗಳಿಸಿದರು. ಫ್ರೆಂಚ್ ಆಟಗಾರರ ವ್ಯವಹಾರವಾಗಿದ್ದ ಇನ್ನೊಂದು ಪಂದ್ಯದಲ್ಲಿ, 38 ವರ್ಷ ವಯಸ್ಸಿನ ಗೇಲ್ ಮಾನ್ಫಿಲ್ಸ್‌ 7–6, 6–3, 6–7, 6–7, 6–4 ರಿಂದ 21 ವರ್ಷ ವಯಸ್ಸಿನ ಗಿಯೊವನಿ ಪೆರಿಕಾರ್ಡ್‌ ಅವರನ್ನು ಸೋಲಿಸಿದರು.

ರುಬ್ಲೇವ್‌ಗೆ ಆಘಾತ:

ಬ್ರೆಜಿಲ್‌ನ ಹದಿಹರೆಯದ ಆಟಗಾರ ಜಾವೊ ಫೊನ್ಸೆಕಾ ಅವರು ಮೊದಲ ಸುತ್ತಿನಲ್ಲಿ 7–6 (7–1), 6–3, 7–6 (7–5) ರಿಂದ ಒಂಬತ್ತನೇ ಶ್ರೇಯಾಂಕದ ಆ್ಯಂಡ್ರಿ ರುಬ್ಲೇವ್ ಅವರಿಗೆ ಆಘಾತ ನೀಡಿದರು. 18 ವರ್ಷ ವಯಸ್ಸಿನ ಫೊನ್ಸೆಕಾ ಅವರಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಟೂರ್ನಿ.

13ನೇ ಶ್ರೇಯಾಂಕದ ಹೋಲ್ಗರ್ ರೂನ್ (ಡೆನ್ಮಾರ್ಕ್) 4–6, 6–3, 6–4, 3–6, 6–4ರಿಂದ ಚೀನಾದ ಝಾಂಗ್‌ ಜಿಝೆನ್ ಅವರನ್ನು ಸೋಲಿಸಿದರು.

ಪಾವೊಲಿನಿ ಮುನ್ನಡೆ:

ಇಟಲಿಯ ಪಾವ್ಲೀನಿ 6–0, 6–4 ರಿಂದ ವೀ ಸೀಜಿಯಾ (ಚೀನಾ) ಅವರನ್ನು ಹಿಮ್ಮೆಟ್ಟಿಸಿದರು. 29 ವರ್ಷ ವಯಸ್ಸಿನ ಆಟಗಾರ್ತಿ ಕಳೆದ ವರ್ಷ ರೋಲಂಡ್ ಗ್ಯಾರೋಸ್ ಮತ್ತು ವಿಂಬಲ್ಡನ್‌ನಲ್ಲಿ ಫೈನಲ್ ತಲುಪಿದ್ದರು. ಆರನೇ ಶ್ರೇಯಾಂಕದ ರಿಬಾಕಿನಾ (ಕಜಕಸ್ತಾನ) 6–1, 6–1 ರಿಂದ 16 ವರ್ಷ ವಯಸ್ಸಿನ ಎಮರ್ಸನ್‌ ಜೋನ್ಸ್ (ಆಸ್ಟ್ರೇಲಿಯಾ) ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.