ಟೇಲರ್ ಫ್ರಿಟ್ಜ್ ಮತ್ತು ಜಾಸ್ಮಿನ್ ಪಾವ್ಲೀನಿ ಅವರಿಗೆ ಸಿಂಗಲ್ಸ್‌ನಲ್ಲಿ ಆಘಾತ ನೀಡಿದ ಫ್ರಾನ್ಸ್‌ನ ಗೇಲ್ ಮೊನ್ಫಿಲ್ಸ್ ಮತ್ತು ಅವರ ಪತ್ನಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ
ಮೆಲ್ಬರ್ನ್: ಗೆಲುವಿನ ನಾಗಾಲೋಟದಲ್ಲಿರುವ ಇಟಲಿಯ ಯಾನಿಕ್ ಸಿನ್ನರ್ ಮತ್ತು ಪೋಲೆಂಡ್‌ನ ಇಗಾ ಶ್ವಾಂಟೆಕ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶನಿವಾರ ಪ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿದರು.
ಪುರುಷರ ಸಿಂಗಲ್ಸ್‌ನ ನಾಲ್ಕನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಮತ್ತು ಮಹಿಳೆಯರ ಸಿಂಗಲ್ಸ್‌ನ ನಾಲ್ಕನೇ ಶ್ರೇಯಾಂಕಿತೆ ಜಾಸ್ಮಿನ್ ಪಾವ್ಲೀನಿ ಮೂರನೇ ಸುತ್ತಿನಲ್ಲೇ ಹೊರಬಿದ್ದರು. ಅವರಿಬ್ಬರನ್ನು ಸೋಲಿಸಿದ್ದು ದಂಪತಿ ಜೋಡಿ ಎಂಬುದು ಸ್ವಾರಸ್ಯದ ವಿಷಯವಾಯಿತು.
ರಾಡ್ ಲೇವರ್ ಅರೇನಾದಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್, ವಿಶ್ವದ ಅಗ್ರಮಾನ್ಯ ಆಟಗಾರ ಸಿನ್ನರ್ 6-3, 6-4, 6-2ರಿಂದ ಶ್ರೇಯಾಂಕ ರಹಿತ ಆಟಗಾರ ಮಾರ್ಕೋಸ್ ಗಿರಾನ್ ಅವರನ್ನು ಹಿಮ್ಮೆಟ್ಟಿಸಿದರು. ಇಟಲಿಯ ಆಟಗಾರ ಮುಂದಿನ ಸುತ್ತಿನಲ್ಲಿ 13ನೇ ಶ್ರೇಯಾಂಕದ ಹೋಲ್ಗರ್ ರೂನ್ (ಡೆನ್ಮಾರ್ಕ್) ಅವರನ್ನು ಎದುರಿಸಲಿದ್ದಾರೆ.
ಫ್ರಾನ್ಸ್‌ನ ಅನುಭವಿ ಆಟಗಾರ ಗೇಲ್ ಮಾನ್ಫಿಲ್ಸ್ ಅವರು ಅಮೆರಿಕದ ಟೇಲರ್‌ಗೆ ಆಘಾತ ನೀಡಿದರು. 38 ವರ್ಷ ವಯಸ್ಸಿನ ಶ್ರೇಯಾಂಕರಹಿತ ಮಾನ್ಫಿಲ್ಸ್ 3-6, 7-5, 7-6 (7/1), 6-4ರಿಂದ ಗೆಲುವು ಸಾಧಿಸಿದರು.
ಪ್ರಸ್ತುತ 41ನೇ ಕ್ರಮಾಂಕ ಹೊಂದಿರುವ ಮಾನ್ಫಿಲ್ಸ್, 2016ರಲ್ಲಿ ವೃತ್ತಿಜೀವನದ ಅತ್ಯುನ್ನತ ಆರನೇ ರ‍್ಯಾಂಕ್ ತಲುಪಿದ್ದರು. ವಾರದ ಹಿಂದೆ ಆಕ್ಲೆಂಡ್ ಕ್ಲಾಸಿಕ್‌ನಲ್ಲಿ ಪ್ರಶಸ್ತಿ ಗೆದ್ದು, ಎಟಿಪಿ ಟೂರ್ ಇತಿಹಾಸದಲ್ಲಿ ಸಿಂಗಲ್ಸ್ ಕಿರೀಟ ಮುಡಿಗೇರಿಸಿಕೊಂಡ ಅತಿ ಹಿರಿಯ ಆಟಗಾರ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದರು.
ಮಹಿಳೆಯರ ಸಿಂಗಲ್ಸ್‌ನ ಪಂದ್ಯದಲ್ಲಿ ಮಾನ್ಫಿಲ್ಸ್ ಅವರ ಪತ್ನಿ ಎಲಿನಾ ಸ್ವಿಟೋಲಿನಾ ಅವರು ಜಾಸ್ಮಿನ್ ಅವರಿಗೆ ಆಘಾತ ನೀಡಿದರು. ಉಕ್ರೇನ್‌ನ ಆಟಗಾರ್ತಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 2-6, 6-4, 6-0ರಿಂದ ಜಯ ಸಾಧಿಸಿದರು. 30 ವರ್ಷ ವಯಸ್ಸಿನ ಎಲಿನಾ ಅವರನ್ನು 2020ರಲ್ಲಿ ಗೇಲ್ ಮದುವೆಯಾಗಿದ್ದಾರೆ.
ಕಳೆದ ಬಾರಿಯ ರನ್ನರ್ ಅಪ್ ಡೇನಿಯಲ್ ಮೆಡ್ವೆಡೇವ್ ಅವರಿಗೆ ಆಘಾತ ನೀಡಿ ಮೂರನೇ ಸುತ್ತು ಪ್ರವೇಶಿಸಿದ್ದ ಕ್ವಾಲಿಫೈಯರ್, 19 ವರ್ಷ ವಯಸ್ಸಿನ ಲರ್ನರ್ ಟಿಯನ್ ಗೆಲುವಿನ ಓಟವನ್ನು ವಿಸ್ತರಿಸಿದರು. ಅಮೆರಿಕದ ಲರ್ನರ್ 7-6 (12/10), 6-3, 6-3ರಿಂದ ಫ್ರಾನ್ಸ್‌ನ ಕೊರೆಂಟಿನ್ ಮೊಟೆಟ್ ಅವರನ್ನು ಮಣಿಸಿದರು.2005ರ ಬಳಿಕ ನಾಲ್ಕನೇ ಸುತ್ತು ಪ್ರವೇಶಿಸಿದ ಅತಿ ಕಿರಿಯ ಆಟಗಾರ ಎಂಬ ಹಿರಿಮೆಗೆ ಲರ್ನರ್ ಪಾತ್ರವಾದರು. 20 ವರ್ಷಗಳ ಹಿಂದೆ 18 ವರ್ಷ ವಯಸ್ಸಿನಲ್ಲಿ ನಡಾಲ್ ಈ ಸಾಧನೆ ಮಾಡಿದ್ದರು.
ಶ್ವಾಂಟೆಕ್ ಮುನ್ನಡೆ:
ಎರಡನೇ ಶ್ರೇಯಾಂಕದ ಶ್ವಾಂಟೆಕ್ 6-1, 6-0ರಿಂದ ಇಂಗ್ಲೆಂಡ್‌ನ ಎಮ್ಮಾ ರಾಡುಕಾನು ಅವರನ್ನು ಹಿಮ್ಮೆಟ್ಟಿಸಿದರು.
ಹೊರಬಿದ್ದ ಬಾಲಾಜಿ– ಮಿಗೆಲ್ ಭಾರತದ ಎನ್.ಶ್ರೀರಾಮ್ ಬಾಲಾಜಿ ಮತ್ತು ಮೆಕ್ಸಿಕೊದ ಅವರ ಜೊತೆಗಾರ ಮಿಗೆಲ್ ಏಂಜೆಲ್ ರೇಯೆಸ್–ವರೆಲಾ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಹೊರಬಿದ್ದಿದ್ದಾರೆ.
ಮೆಡ್ವೆಡೇವ್‌ಗೆ ₹65.79 ಲಕ್ಷ ದಂಡ
ಕಳೆದ ಬಾರಿಯ ರನ್ನರ್ ಅಪ್ ಡೇನಿಯಲ್ ಮೆಡ್ವೆಡೇವ್ ಅವರು ಪಂದ್ಯದ ವೇಳೆ ತೋರಿದ್ದ ಅನುಚಿತ ವರ್ತನೆಗಾಗಿ ₹65.79 ಲಕ್ಷ ದಂಡ ವಿಧಿಸಲಾಗಿದೆ.
ಮೆಡ್ವೆಡೇವ್ ಅವರು ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಕಸಿದಿತ್ ಸಮ್ರೇಜ್ ವಿರುದ್ಧ ಪಂದ್ಯದಲ್ಲಿ ರ‍್ಯಾಕೆಟ್ ಅನ್ನು ನೆಲಕ್ಕೆ ಕುಕ್ಕಿ ಹಾಳುಗೆಡವಿದ್ದರು. ಅಲ್ಲದೆ, ನೆಟ್ ಕ್ಯಾಮೆರಾವನ್ನು ನಾಶಗೊಳಿಸಿದ್ದರು. ಇದಕ್ಕಾಗಿ ₹8.65 ಲಕ್ಷ ದಂಡ ವಿಧಿಸಲಾಗಿದೆ. ಎರಡನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಲರ್ನರ್ ಟಿಯೆನ್ ವಿರುದ್ಧ ಸೋತ ಅವರು ರಾಕೆಟ್ ಅನ್ನು ಎಸೆದಿದ್ದಾರೆ. ಅಂಪೈರ್ ಜೊತೆ ಪದೇಪದೇ ವಾದ ನಡೆಸಿದ್ದ ಅವರು, ಪಂದ್ಯದ ನಂತರದ ಪತ್ರಿಕಾಗೋಷ್ಠಿಯನ್ನು ತಪ್ಪಿಸಿಕೊಂಡಿದ್ದರು. ಈ ಕಾರಣಕ್ಕಾಗಿ ₹57,14 ದಂಡ ಹಾಕಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.