
ಕಾರ್ಲೋಸ್ ಅಲ್ಕರಾಜ್
ಮೆಲ್ಬರ್ನ್: ಅಗ್ರ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ ಮತ್ತು ಅರಿನಾ ಸಬಲೆಂಕಾ ಅವರು ಭಾನುವಾರ ಆರಂಭಗೊಂಡ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಅಮೆರಿಕದ ತಾರೆ ವೀನಸ್ ವಿಲಿಯಮ್ಸ್ ಅವರು ಮೊದಲ ಸುತ್ತಿನಲ್ಲೇ ಅಭಿಯಾನ ಮುಗಿಸಿದರು.
ಮೆಲ್ಬರ್ನ್ ಪಾರ್ಕ್‌ನಲ್ಲಿ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸ್ಪೇನ್‌ನ ಸೂಪರ್‌ಸ್ಟಾರ್ ಅಲ್ಕರಾಜ್ 6-3, 7-6 (7/2), 6-2ರಿಂದ ಆತಿಥೇಯ ದೇಶದ ಭರವಸೆಯ ಆಟಗಾರ ಆ್ಯಡಂ ವಾಲ್ಟನ್ ಅವರನ್ನು ಮಣಿಸಿ, ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು. ಮುಂದಿನ ಸುತ್ತಿನಲ್ಲಿ ಜರ್ಮನಿಯ ಯಾನಿಕ್ ಹ್ಯಾನ್ಫ್‌ಮನ್ ಅವರನ್ನು ಎದುರಿಸಲಿದ್ದಾರೆ.
ಒಂಬತ್ತು ವಾರಗಳ ಬಳಿಕ ಸ್ಪರ್ಧಾ ಕಣಕ್ಕೆ ಮರಳಿರುವ 22 ವರ್ಷದ ಅಲ್ಕರಾಜ್ ಕೆಲವೊಂದು ಲೋಪಗಳನ್ನು ಎಸಗಿದರು. ಅದರ ಲಾಭ ಪಡೆದ 81ನೇ ಕ್ರಮಾಂಕದ ವಾಲ್ಟನ್ ಎರಡನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ನೀಡಿದರು. ಆ ಸೆಟ್ ಅನ್ನು ಅಲ್ಕರಾಜ್ ಟೈಬ್ರೇಕರ್‌ನಲ್ಲಿ ವಶಮಾಡಿಕೊಂಡರು. ಮೊದಲ ಮತ್ತು ಮೂರನೇ ಸೆಟ್‌ಗಳಲ್ಲಿ ಸ್ಪೇನ್ ಆಟಗಾರ ನಿರಾಯಾಸವಾಗಿ ಮೇಲುಗೈ ಸಾಧಿಸಿದರು.
ವಿಶ್ವದ ಅಗ್ರಮಾನ್ಯ ಆಟಗಾರನಾಗಿರುವ ಅಲ್ಕರಾಜ್ ಆರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳಿಗೆ ಒಡೆಯನಾಗಿದ್ದಾರೆ. ಆಸ್ಟ್ರೇಲಿಯನ್ ಓಪನ್ ಹೊರತುಪಡಿಸಿ ಉಳಿದ ಮೂರೂ ಕಿರೀಟಗಳಿಗೆ ಅವರು ಮುತ್ತಿಕ್ಕಿದ್ದಾರೆ. ಇಲ್ಲಿ ಚಾಂಪಿಯನ್ ಆದಲ್ಲಿ ನಾಲ್ಕು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಅತಿ ಕಿರೀಟ ಆಟಗಾರನಾಗುವ ಅವಕಾಶ ಅವರ ಮುಂದಿದೆ.
ಎರಡನೇ ಸುತ್ತಿಗೆ ಜ್ವರೇವ್: ಆರಂಭಿಕ ಸೆಟ್‌ನ ಹಿನ್ನಡೆಯಿಂದ ಚೇತರಿಸಿಕೊಂಡ ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವರೇವ್ 6-7 (1/7), 6-1, 6-4, 6-2ರಿಂದ ಕೆನಡಾದ ಗೇಬ್ರಿಯಲ್ ಡಿಯಲ್ಲೊ ಅವರನ್ನು ಮಣಿಸಿ ಅಭಿಯಾನ ಆರಂಭಿಸಿದರು.
ಸಬಲೆಂಕಾ ಮುನ್ನಡೆ: 2023 ಮತ್ತು 2024ರ ಮಹಿಳಾ ಸಿಂಗಲ್ಸ್ ಚಾಂಪಿಯನ್ ಸಬಲೆಂಕಾ 6-4, 6-1ರಿಂದ ಫ್ರಾನ್ಸ್‌ನ ಚಾನ್ಸುವಾ ಕುತುಮಾಂಗ ಆಜೋನಾ ಅವರನ್ನು ಸುಲಭವಾಗಿ ಮಣಿಸಿ ಮುನ್ನಡೆದರು. ಈ ಪಂದ್ಯಕ್ಕೆ ಟೆನಿಸ್ ದಂತಕತೆಗಳಾದ ರೋಜರ್ ಫೆಡರರ್ ಮತ್ತು ರಾಡ್ ಲೇವರ್ ಸಾಕ್ಷಿಯಾದರು.
ವೀನಸ್‌ಗೆ ನಿರಾಸೆ: 2021ರ ನಂತರ ಮೆಲ್ಬರ್ನ್ ಪಾರ್ಕ್‌ಗೆ ಮೊದಲ ಬಾರಿಗೆ ಭೇಟಿ ನೀಡಿದ ವೀನಸ್ ಅವರಿಗೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು. 45 ವರ್ಷದ ಅವರು 7(5)–6, 3–6, 4–6ರಿಂದ ಸರ್ಬಿಯಾದ ಓಲ್ಗಾ ಡ್ಯಾನಿಲೋವಿಕ್ ಅವರಿಗೆ ಮಣಿದರು. ಅವರು ಟೂರ್ನಿಯ ಮುಖ್ಯಸುತ್ತು ಆಡಿದ ಅತಿ ಹಿರಿಯ ವಯಸ್ಸಿನ ಆಟಗಾರ್ತಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.