
ಅಮೆರಿಕದ ಮ್ಯಾಡಿಸನ್ ಕೀಸ್ ಅವರ ಫೋರ್‌ಹ್ಯಾಂಡ್ ಹೊಡೆತ ಎಎಫ್‌ಪಿ ಚಿತ್ರ
ಮೆಲ್ಬರ್ನ್: ಇಟಲಿಯ ತಾರೆ ಯಾನಿಕ್ ಸಿನ್ನರ್ ಮತ್ತು ಅಮೆರಿಕದ ಆಟಗಾರ್ತಿ ಮ್ಯಾಡಿಸನ್ ಕೀಸ್ ಅವರು ಮಂಗಳವಾರ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಸುಲಭ ಗೆಲುವಿನೊಡನೆ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನ ಆರಂಭಿಸಿದರು.
ಮೆಲ್ಬರ್ನ್ ಪಾರ್ಕ್‌ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸಿನ್ನರ್ 6-2, 6-1ರಿಂದ ಮುನ್ನಡೆಯಲ್ಲಿದ್ದಾಗ ಎದುರಾಳಿ ಆಟಗಾರ, ಫ್ರಾನ್ಸ್‌ನ ಹ್ಯೂಗೊ ಗ್ಯಾಸ್ಟನ್ ಅವರು ಗಾಯಾಳಾಗಿ ಆಟದಿಂದ ಹಿಂದೆ ಸರಿದರು. ಎರಡನೇ ಶ್ರೇಯಾಂಕದ ಸಿನ್ನರ್ ಅವರು ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಆತಿಥೇಯ ದೇಶದ ಜೇಮ್ಸ್ ಡಕ್ವರ್ಥ್ ಅವರನ್ನು ಎದುರಿಸಲಿದ್ದಾರೆ.
2024ರಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿದ್ದ ಸಿನ್ನರ್, ಕಳೆದ ವರ್ಷ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ಮಣಿಸಿ ಪ್ರಶಸ್ತಿ ಯನ್ನು ಉಳಿಸಿಕೊಂಡಿದ್ದರು. ಅವರು ಈ ಬಾರಿಯೂ ಕಿರೀಟ ಗೆದ್ದರೆ ಓಪನ್ ಯುಗದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವರು. ಸರ್ಬಿಯಾದ ದಿಗ್ಗಜ ನೊವಾಕ್ ಜೊಕೊವಿಚ್ ಈ ಸಾಧನೆ ಮಾಡಿದ ಮೊದಲ ಆಟಗಾರ.
ಮ್ಯಾಡಿಸನ್ ಮುನ್ನಡೆ: ಮಹಿಳೆಯರ ಸಿಂಗಲ್ಸ್‌ನಲ್ಲಿ ಒಂಬತ್ತನೇ ಶ್ರೇಯಾಂಕದ ಕೀಸ್ ಮೊದಲ ಸುತ್ತಿನಲ್ಲಿ 7-6 (6), 6-1ರಿಂದ ಉಕ್ರೇನ್‌ನ ಒಲೆಕ್ಸಾಂಡ್ರಾ ಒಲಿನಿಕೋವಾ ಅವರನ್ನು ಮಣಿಸಿದರು. ಎರಡನೇ ಸುತ್ತಿನಲ್ಲಿ ಅವರಿಗೆ ಸ್ವದೇಶದ ಆಶ್ಲಿನ್ ಕ್ರೂಗರ್ ಎದುರಾಳಿಯಾಗಿದ್ದಾರೆ.
30 ವರ್ಷದ ಮ್ಯಾಡಿಸನ್ ಅವರಿಗೆ ಇದು 50ನೇ ಗ್ರ್ಯಾನ್‌ಸ್ಲಾಮ್ ಟೂರ್ನಿಯಾಗಿದೆ. ಕಳೆದ ವರ್ಷದ ಫೈನಲ್‌ನಲ್ಲಿ ಬೆಲರೂಸ್‌ನ ಅರಿನಾ ಸಬಲೆಂಕಾ ಅವರಿಗೆ ಆಘಾತ ನೀಡಿ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು. ಅಮೆರಿಕದ ಆಟಗಾರ್ತಿ 0–4 ಹಿನ್ನಡೆಯಿಂದ ಅಮೋಘವಾಗಿ ಚೇತರಿಸಿಕೊಂಡು ಟೈಬ್ರೇಕರ್‌ನಲ್ಲಿ
ಮೊದಲ ಸೆಟ್ ಗೆದ್ದರು. ಎರಡನೇ ಸೆಟ್‌ನಲ್ಲಿ ಮ್ಯಾಡಿಸನ್ ಪಾರಮ್ಯ ಸಾಧಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ಎಂಟನೇ ಶ್ರೇಯಾಂಕದ ಬೆನ್ ಶೆಲ್ಟನ್, ಒಂಬತ್ತನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಪ್ರಯಾಸದ ಗೆಲುವಿನೊಡನೆ ಮುನ್ನಡೆದರು. ಅಮೆರಿಕದ ಶೆಲ್ಟನ್ 6-3, 7-6 (7/2), 7-6 (7/5)ರಿಂದ ಫ್ರಾನ್ಸ್‌ನ ಉಗೊ ಹಂಬರ್ಟ್ ವಿರುದ್ಧ; ಟೇಲರ್ 7-6 (7/5), 5-7, 6-1, 6-3ರಿಂದ ಫ್ರಾನ್ಸ್‌ನ ವ್ಯಾಲೆಂಟಿನ್ ರೋಯರ್ ವಿರುದ್ಧ ಗೆಲುವು ಸಾಧಿಸಿದರು.
ಭಾರತದ ಸಂಜಾತ, ಅಮೆರಿಕದ ನಿಶೇಶ್ ಬಸವರೆಡ್ಡಿ ಅವರು ಐದು ಸೆಟ್‌ಗಳ ರೋಚಕ ಹಣಾಹಣಿಯಲ್ಲಿ ಗೆದ್ದು ಎರಡನೇ ಸುತ್ತು ಪ್ರವೇಶಿಸಿದರು. ಅವರು 4-6, 7-6 (9/7), 6-7 (3/7), 6-2, 6-3 ರಿಂದ ಆಸ್ಟ್ರೇಲಿಯಾದ ಕ್ರಿಸ್ಟೋಫರ್ ಒ‘ಕಾನೆಲ್ ಅವರನ್ನು ಮಣಿಸಿದರು.
ಫ್ರಾನ್ಸ್‌ನ ಅನುಭವಿ ಆಟಗಾರ ಗೇಲ್ ಮಾನ್ಫಿಲ್ಸ್ ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದರು. ಆಸ್ಟ್ರೇಲಿಯಾದ ಡೇನ್ ಸ್ವೀನಿ 6-7 (3/7), 7-5, 6-4, 7-5ರಿಂದ ಮಾನ್ಫಿಲ್ಸ್ ಅವರನ್ನು ಮಣಿಸಿದರು. ಈ ಸೋಲಿನೊಂದಿಗೆ ಫ್ರಾನ್ಸ್ ಆಟಗಾರ ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳಿದರು.
ಮಹಿಳೆಯರ ವಿಭಾಗದಲ್ಲಿ ಐದನೇ ಶ್ರೇಯಾಂಕದ ಎಲೆನಾ ರಿಬಾಕಿನಾ (ಕಜಾಕಸ್ತಾನ) 6-4, 6-3ರಿಂದ ಸ್ಲೊವೇನಿಯಾದ ಕಾಯಾ ಜುವಾನ್ ಎದುರು; 10ನೇ ಶ್ರೇಯಾಂಕದ ಬೆಲಿಂಡಾ ಬೆನ್ಸಿಕ್ (ಉಕ್ರೇನ್) 6-0, 7-5ರಿಂದ ಬ್ರಿಟನ್‌ನ ಕೇಟಿ ಬೌಲ್ಟರ್ ಎದುರು ಜಯ ಸಾಧಿಸಿದರು. 2019 ಮತ್ತು 2021ರ ಚಾಂಪಿಯನ್ ಜಪಾನ್‌ನ ನವೋಮಿ ಒಸಾಕಾ 6-3, 3-6, 6-4ರಿಂದ ಆಂಟೋನಿಯಾ ರುಜಿಕ್ (ಕ್ರೊವೇಷ್ಯಾ) ಅವರನ್ನು ಮಣಿಸಿದರು.
ಪೂಣಚ್ಚ– ಇಸಾರೊ ಜೋಡಿ ನಿರ್ಗಮನ
ಮೆಲ್ಬರ್ನ್: ಭಾರತದ ನಿಕಿ ಪೂಣಚ್ಚ ಮತ್ತು ಅವರ ಥಾಯ್ಲೆಂಡ್‌ನ ಜೊತೆಗಾರ ಪ್ರುಚ್ಯ ಇಸಾರೊ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ಮೊದಲ ಸುತ್ತಿನಲ್ಲಿ ಹೊರಬಿದ್ದರು. ಈ ಜೋಡಿ ತೀವ್ರ ಪೈಪೋಟಿಯ ಪಂದ್ಯದಲ್ಲಿ ಪೆಡ್ರೊ ಮಾರ್ಟಿನೆಝ್– ಜೇಮ್ ಮುನಾರ್ ಅವರೆದುರು ಮಂಗಳವಾರ ಸೋಲನುಭವಿಸಿತು.
ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ಭಾರತ– ಥಾಯ್ಲೆಂಡ್ ಆಟಗಾರರ ಜೋಡಿ 6–7 (3), 5–7 ರಲ್ಲಿ ಸೋಲನುಭವಿಸಿತು. ಪಂದ್ಯದಲ್ಲಿ ಉತ್ತಮ ಹೋರಾಟ ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.