ಸ್ವಿಜರ್ಲೆಂಡ್‌ನ ಬೆಲಿಂಡಾ ಬೆನ್ಸಿಕ್ ವಿರುದ್ಧ ಜಯಗಳಿಸಿದ ಕೊಕೊ ಗಾಫ್ ಸಂಭ್ರಮ...
ಮೆಲ್ಬರ್ನ್ : ನೊವಾಕ್ ಜೊಕೊವಿಚ್ ಅವರು ನೇರ ಸೆಟ್‌ಗಳ ಗೆಲುವಿನೊಡನೆ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ತಲುಪಿ, ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಎದುರು ಬಹುನಿರೀಕ್ಷಿತ ಮುಖಾಮುಖಿಗೆ ಸಜ್ಜಾದರು. ಮಹಿಳೆ ಯರ ವಿಭಾಗದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಕೂಡ ಭಾನುವಾರ ಅಧಿಕಾರಯುತ ಗೆಲುವು ಸಾಧಿಸಿದರು.
ಎರಡು ವರ್ಷಗಳಿಂದ ಇಲ್ಲಿ ಚಾಂಪಿ ಯನ್ ಆಗಿರುವ ಸಬಲೆಂಕಾ ಮತ್ತು ಪ್ರಸ್ತುತ ಒಳ್ಳೆಯ ಲಯಲ್ಲಿರುವ ವಿಶ್ವದ ಮೂರನೇ ಕ್ರಮಾಂಕದ ಆಟಗಾರ್ತಿ ಕೊಕೊ ಗಾಫ್ ಸೆಮಿಫೈನಲ್‌ನಲ್ಲಿ ಮುಖಾ ಮುಖಿಯಾಗುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದಾರೆ. ಇದಕ್ಕೆ ಇಬ್ಬರೂ ಕ್ವಾರ್ಟರ್‌ಫೈನಲ್ ಪಂದ್ಯಗಳನ್ನು ಗೆಲ್ಲಬೇಕಷ್ಟೇ.
ರಾಡ್ ಲೇವರ್ ಅರೇನಾದಲ್ಲಿ 37 ವರ್ಷ ವಯಸ್ಸಿನ ಜೊಕೊವಿಚ್ 6–3, 6–4, 7–6 (7–4) ರಿದ 24ನೇ ಕ್ರಮಾಂ ಕದ ಜಿರಿ ಲೆಹೆಕಾ (ಝೆಕ್ ರಿಪಬ್ಲಿಕ್) ಅವರನ್ನು ಮಣಿಸಿದರು.
ಮೆಲ್ಬರ್ನ್‌ನಲ್ಲಿ ಭಾನುವಾರ ಅತಿ ಹೆಚ್ಚು ಬಿಸಿಲಿದ್ದು, 34 ಡಿಗ್ರಿ ಸೆಲ್ಷಿಯಸ್‌ನಲ್ಲಿ ಆಡಿದ 21 ವರ್ಷ ವಯಸ್ಸಿನ ಕಾರ್ಲೊಸ್ ಅಲ್ಕರಾಜ್ ಅವರಿಗೆ ಬ್ರಿಟನ್‌ನ ಜಾಕ್ ಡ್ರೇಪರ್ ಅರ್ಧದಲ್ಲೇ ಪಂದ್ಯ ಬಿಟ್ಟುಕೊಟ್ಟರು. ಆಗ ಮೂರನೇ ಶ್ರೇಯಾಂಕದ ಅಲ್ಕರಾಜ್ 7–5, 6–1 ರಿಂದ ಮುಂದಿದ್ದರು.
23 ವರ್ಷ ವಯಸ್ಸಿನ ಡ್ರೇಪರ್ ಈ ಹಿಂದಿನ ಮೂರೂ ಪಂದ್ಯಗಳಲ್ಲಿ ಗೆಲುವಿಗೆ ಐದು ಸೆಟ್‌ಗಳನ್ನು ತೆಗೆದುಕೊಂಡಿದ್ದರು. ಅದೂ 1–2 ಹಿನ್ನಡೆಯಿಂದ ಚೇತರಿಸಿದ್ದರು. ದೀರ್ಘ ಪಂದ್ಯಗಳ ದಣಿವು ಅವರ ದೇಹದ ಮೇಲೆ ಪರಿಣಾಮ ಬೀರಿದಂತೆ ಕಂಡಿತು. ಅವರನ್ನು ಕೆಳಬೆನ್ನು ನೋವು ಕಾಡಿತು.
ದಾಖಲೆಯ 11ನೇ ಪ್ರಶಸ್ತಿ ಮತ್ತು ಚಾರಿತ್ರಿಕ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಜೊಕೊ ವಿಚ್ ನೇರ ಸೆಟ್‌ಗಳ ಗೆಲುವು ಪಡೆಯುತ್ತಿರುವುದು ಎದುರಾಳಿಗಳಿಗೆ ಎಚ್ಚ ರಿಕೆಯ ಗಂಟೆಯಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಒಂದೊಂದು ಸೆಟ್ ಕಳೆದುಕೊಂಡಿದ್ದ ಸರ್ಬಿಯಾದ ತಾರೆ ಕೊನೆಯ ಎರಡು ಪಂದ್ಯಗಳನ್ನು ನೇರ ಸೆಟ್‌ಗಳಿಂದ ಗೆದಿದ್ದಾರೆ.
ಜೊಕೊವಿಚ್ ಮತ್ತು ಅಲ್ಕರಾಜ್ ಒಟ್ಟು ಏಳು ಬಾರಿ ಮುಖಾಮುಖಿ ಆಗಿದ್ದು ಸರ್ಬಿಯಾದ ತಾರೆ 4–3 ಗೆಲುವಿನ ದಾಖಲೆ ಹೊಂದಿದ್ದಾರೆ. ಅಲ್ಕರಾಜ್ ಈವರೆಗೆ ಆಸ್ಟ್ರೇಲಿಯಾದಲ್ಲಿ ಚಾಂಪಿಯನ್ ಆಗಿಲ್ಲ.
12ನೇ ಶ್ರೇಯಾಂಕದ ಟಾಮಿ ಪಾಲ್ (ಅಮೆರಿಕ) ಅವರು ಸ್ಪೇನ್‌ನ ಅಲೆಕ್ಸಾಂಡ್ರೊ ದಾವಿಡೊವಿಚ್ ಅವರನ್ನು ಹಿಮ್ಮೆಟ್ಟಿಸಿದರು.
ಮುಂದಿನ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ಅವರನ್ನು ಎದುರಿಸಲಿದ್ದಾರೆ. ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜ್ವರೇವ್ 6–1, 2–6, 6–3, 6–2 ರಿಂದ ಫ್ರಾನ್ಸ್‌ನ ಉಗೊ ಹಂಬರ್ಟ್ ಅವರನ್ನು ಸೋಲಿಸಿದರು.
ಸಬಲೆಂಕಾ ಮುನ್ನಡೆ:
ಬೆಲಾರೂಸ್‌ನ ಆಟಗಾರ್ತಿ ಸಬಲೆಂಕಾ ಇನ್ನೊಂದು ಪಂದ್ಯದಲ್ಲಿ 17 ವರ್ಷ ವಯಸ್ಸಿನ ಮಿಯೆರಾ ಆಂದ್ರೀವಾ (ರಷ್ಯಾ) ಅವರನ್ನು 6–1, 6–2 ರಿಂದ ಬಗ್ಗುಬಡಿದರು. ಗೆಲುವಿಗೆ ತೆಗೆದುಕೊಂಡಿದ್ದು 62 ನಿಮಿಷಗಳನ್ನಷ್ಟೇ.
ಸೆಟ್ ಹಿನ್ನಡೆಯಿಂದ ಚೇತರಿಸಿದ ಅಮೆರಿಕದ ಕೊಕೊ ಗಾಫ್ 5–7, 6–2, 6–1 ರಿಂದ ಸ್ವಿಜರ್ಲೆಂಡ್‌ನ ಬೆಲಿಂಡಾ ಬೆನ್ಸಿಕ್ ಅವರನ್ನು ಹಿಮ್ಮೆಟ್ಟಿಸಿದರು. ಅವರ ಮುಂದಿನ ಎದುರಾಳಿ 11ನೇ ಶ್ರೇಯಾಂಕದ ಪೌಲಾ ಬಡೋಸಾ. ಈ ಗೆಲುವಿನೊಡನೆ 20 ವರ್ಷ ವಯಸ್ಸಿನ ಕೊಕೊ ಸತತ 13 ಪಂದ್ಯಗಳನ್ನು ಗೆದ್ದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.