
ಸಹಜಾ ಯಮಲಪಲ್ಲಿ
ಬೆಂಗಳೂರು: ಪ್ರತಿಷ್ಠಿತ ಬಿಲ್ಲೀ ಜೀನ್ ಕಿಂಗ್ ಕಪ್ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಯ ‘ಜಿ’ ಗುಂಪಿನ ಪ್ಲೇಆಫ್ ಪಂದ್ಯಗಳಿಗೆ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಆತಿಥ್ಯ ವಹಿಸಲಿದೆ.
ಈ ಟೂರ್ನಿಯ ಪಂದ್ಯಗಳು ಭಾರತ ದಲ್ಲಿಯೇ ಮೊದಲ ಬಾರಿಗೆ ನಡೆಯುತ್ತಿವೆ. ನವೆಂಬರ್ 14ರಿಂದ 16ರವರೆಗೆ ಕಬ್ಬನ್ ಪಾರ್ಕ್‌ನಲ್ಲಿರುವ ಎಸ್.ಎಂ.ಕೃಷ್ಣ ಕ್ರೀಡಾಂಗಣದಲ್ಲಿ ನಡೆಯಲಿವೆ.
‘ಬಿಲ್ಲೀ ಜೀನ್ ಕಿಂಗ್ ಕಪ್, ಬೆಂಗಳೂರು ಓಪನ್ ಟೆನಿಸ್ ಹಾಗೂ ಐಟಿಎಫ್ ಟೂರ್ನಿಗಳು ಮುಂಬರುವ ತಿಂಗಳುಗಳಲ್ಲಿ ನಗರದಲ್ಲಿ ಆಯೋಜನೆಗೊಳ್ಳುತ್ತಿವೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಪಂದ್ಯಗಳ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಇದೆ. ತವರಿನಲ್ಲಿ ಪಂದ್ಯಗಳು ನಡೆಯುವ ಕಾರಣ ಭಾರತ ತಂಡಕ್ಕೆ ಒಳ್ಳೆಯ ಅವಕಾಶ ಸಿಗಲಿದೆ’ ಎಂದು ಕೆಎಸ್‌ಎಲ್‌ಟಿಎ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಅವರು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ಲೇ ಆಫ್‌ನಲ್ಲಿ ಒಟ್ಟು 21 ರಾಷ್ಟ್ರಗಳು ಆಡಲಿದ್ದು ತಲಾ ಮೂರರಂತೆ ಏಳು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ನೆದರ್ಲೆಂಡ್ಸ್ ಹಾಗೂ ಸ್ಲೊವೇನಿಯಾ ‘ಜಿ’ ಗುಂಪಿನಲ್ಲಿವೆ. ರೌಂಡ್‌ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಅಂಕಿತಾ ರೈನಾ, ಭಮಿಡಿಪಾಟಿ ಶ್ರೀವಲ್ಲಿ ರಶ್ಮಿಕಾ, ಸಹಜಾ ಯಮಲಪಲ್ಲಿ, ಪ್ರಾರ್ಥನಾ ಜಿ.ಟಿ. ಹಾಗೂ ರಿಯಾ ಭಾಟಿಯಾ ಅವರು ಭಾರತ
ತಂಡದಲ್ಲಿದ್ದಾರೆ. ಭಾರತವು ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆದಿರುವುದು ಇದು ಎರಡನೇ ಬಾರಿ.
ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣವನ್ನು ಈಚೆಗಷ್ಟೇ ನವೀಕರಿಸಲಾಗಿದ್ದು, ಬಿಲ್ಲೀ ಜೀನ್ ಕಿಂಗ್ ಕಪ್ ಟೂರ್ನಿಯ ಆಯೋಜನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.-ಎಂ.ಮಹೇಶ್ವರ ರಾವ್, ಕೆಎಸ್‌ಎಲ್‌ಟಿಎ ಕಾರ್ಯದರ್ಶಿ
ಪ್ಲೇಆಫ್ ಪಂದ್ಯಗಳು
ದಿನ; ಪಂದ್ಯ
ನ.14; ನೆದರ್ಲೆಂಡ್ಸ್– ಸ್ಲೊವೇನಿಯಾ
ನ.15; ಭಾರತ– ಸ್ಲೊವೇನಿಯಾ
ನ.16; ಭಾರತ–ನೆದರ್ಲೆಂಡ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.