ಯಾನಿಕ್ ಸಿನ್ನರ್ ಅವರನ್ನು ಸಮಾಧಾನಪಡಿಸುತ್ತಿರುವ ಕಾರ್ಲೊಸ್ ಅಲ್ಕರಾಜ್
(ಚಿತ್ರ ಕೃಪೆ: X/@carlosalcaraz)
ಸಿನ್ಸಿನಾಟಿ: 2025ರ ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ ಸಿನ್ಸಿನಾಟಿ ಓಪನ್ ಗೆದ್ದ ಸ್ಪೇನ್‌ನ ಮೂರನೇ ಆಟಗಾರ ಎನಿಸಿದ್ದಾರೆ.
ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತ ಇಟಲಿಯ ಯಾನಿಕ್ ಸಿನ್ನರ್, ಫೈನಲ್‌ನಲ್ಲಿ ಆಟದ ಮಧ್ಯೆ ಅನಾರೋಗ್ಯದಿಂದಾಗಿ ಹಿಂದೆ ಸರಿದಿರುವುದರಿಂದ ಅಲ್ಕರಾಜ್ ಅವರನ್ನು ವಿಜೇತರೆಂದು ಘೋಷಿಸಲಾಯಿತು.
22 ನಿಮಿಷಗಳಿಗಷ್ಟೇ ಸೀಮಿತಗೊಂಡ ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಅಲ್ಕರಾಜ್ ಮೊದಲ ಸೆಟ್‌ನಲ್ಲಿ 5-0ರ ಅಂತರದ ಮುನ್ನಡೆಯಲ್ಲಿದ್ದರು.
ಇತ್ತೀಚೆಗಷ್ಟೇ ಅಂತ್ಯಗೊಂಡ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಫೈನಲ್‌ನಲ್ಲೂ ಅಲ್ಕರಾಜ್ ಹಾಗೂ ಸಿನ್ನರ್ ಮುಖಾಮುಖಿಯಾಗಿದ್ದರು. ಅಂದು ಗೆಲುವು ಸಿನ್ನರ್ ಪಾಲಾಗಿತ್ತು.
'ಸಿನ್ನರ್ ಗಾಯದ ಬಗ್ಗೆ ಅಲ್ಕರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಎದುರಾಳಿ ನಿವೃತ್ತಿ ಹೊಂದಲು ಅದರಲ್ಲೂ ಫೈನಲ್‌ನಲ್ಲಿ ನಿವೃತ್ತಿ ಹೊಂದಲು ಯಾರೂ ಬಯಸುವುದಿಲ್ಲ. ಅವರು ಆದಷ್ಟು ಬೇಗನೇ ಚೇತರಿಸಿಕೊಳ್ಳಲಿ. ಸಿನ್ಸಿನಾಟಿಯಲ್ಲಿ ನನ್ನ ಪ್ರದರ್ಶನದ ಬಗ್ಗೆ ತೃಪ್ತಿಯಿದೆ. ಅಮೆರಿಕನ್ ಓಪನ್ ಗ್ರ್ಯಾನ್‌ಸ್ಲಾಮ್ ಟೂರ್ನಿಗೆ ಸಿದ್ಧವಾಗಿದ್ದೇನೆ' ಎಂದು ಹೇಳಿದ್ದಾರೆ.
'2023ರ ಸಿನ್ಸಿನಾಟಿ ಓಪನ್ ಫೈನಲ್‌ನಲ್ಲಿ ಎದುರಾದ ಸೋಲಿನ ಬಳಿಕ ಇಲ್ಲಿ ಗೆಲ್ಲಲೇ ಬಯಸಿದ್ದೆನು' ಎಂದು ತಿಳಿಸಿದ್ದಾರೆ.
ವಿಶ್ವ ನಂ.2 ರ್‍ಯಾಂಕ್‌ನ ಅಲ್ಕರಾಜ್ ಈಗ ನಂ.1 ರ್‍ಯಾಂಕ್‌ನ ಸಿನ್ನರ್ ವಿರುದ್ಧ 9-5ರ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಫ್ರೆಂಚ್ ಓಪನ್ ಫೈನಲ್‌ನಲ್ಲೂ ಸಿನ್ನರ್ ಮಣಿಸಿ ಅಲ್ಕರಾಜ್ ಪ್ರಶಸ್ತಿ ಗೆದ್ದಿದ್ದರು.
ಮತ್ತೊಂದೆಡೆ ಪ್ರತಿಕ್ರಿಯಿಸಿದ ಸಿನ್ನರ್, 'ನಿನ್ನೆಯಿಂದಲೇ ಬಳಲುತ್ತಿದ್ದೆ. ರಾತ್ರಿ ಚೇತರಿಸಿಕೊಳ್ಳುತ್ತೇನೆ ಎಂದು ಭಾವಿಸಿದ್ದೆ. ಆದರೆ ಹಾಗಾಗಲಿಲ್ಲ. ಅಭಿಮಾನಿಗಳಿಗಾಗಿ ಆಡಲು ಪ್ರಯತ್ನಿಸಿದ್ದೆ. ಆದರೆ ಸಾಧ್ಯವಾಗಲಿಲ್ಲ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.