ADVERTISEMENT

ಡೇವಿಸ್ ಕಪ್‌: ಭಾರತಕ್ಕೆ ನಿರಾಸೆ

ಪಿಟಿಐ
Published 2 ಫೆಬ್ರುವರಿ 2019, 20:15 IST
Last Updated 2 ಫೆಬ್ರುವರಿ 2019, 20:15 IST
ಡಬಲ್ಸ್ ವಿಭಾಗದಲ್ಲಿ ಗೆದ್ದ ಭಾರತದ ದಿವಿಜ್ ಶರಣ್‌ (ಎಡ) ಮತ್ತು ರೋಹನ್ ಬೋಪಣ್ಣ ಅವರ ಆಟದ ಶೈಲಿ –ಪಿಟಿಐ ಚಿತ್ರ
ಡಬಲ್ಸ್ ವಿಭಾಗದಲ್ಲಿ ಗೆದ್ದ ಭಾರತದ ದಿವಿಜ್ ಶರಣ್‌ (ಎಡ) ಮತ್ತು ರೋಹನ್ ಬೋಪಣ್ಣ ಅವರ ಆಟದ ಶೈಲಿ –ಪಿಟಿಐ ಚಿತ್ರ   

ಕೋಲ್ಕತ್ತ: ಆತಿಥೇಯ ಭಾರತವನ್ನು 3–1ರಿಂದ ಮಣಿಸಿದ ಇಟಲಿ ತಂಡ ಡೇವಿಸ್ ಕಪ್‌ ಟೆನಿಸ್ ಟೂರ್ನಿಯಲ್ಲಿ ಮೊದಲ ಬಾರಿ ಫೈನಲ್‌ ಹಂತ ಪ್ರವೇಶಿಸಿ ಸಂಭ್ರಮಿಸಿತು. ಕೋಲ್ಕತ್ತ ಸೌತ್ ಕ್ಲಬ್‌ನಲ್ಲಿ ಶುಕ್ರವಾರದ ಎರಡು ಪಂದ್ಯಗಳನ್ನು ಸೋತಿದ್ದ ಭಾರತ ಶನಿವಾರ ನಡೆದ ಡಬಲ್ಸ್‌ ವಿಭಾಗದಲ್ಲಿ ಗೆದ್ದು ಜಯದ ಕನಸು ಕಂಡಿತು. ಆದರೆ ರಿವರ್ಸ್ ಸಿಂಗಲ್ಸ್‌ನಲ್ಲಿ ಸೋತು ನಿರಾಸೆಗೆ ಒಳಗಾಯಿತು.

ಡಬಲ್ಸ್‌ನಲ್ಲಿ ಕಣಕ್ಕೆ ಇಳಿದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್‌ ಜೋಡಿ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಸಿಮೋನ್ ಬೊಲೇಲಿ ಮತ್ತು ಮ್ಯಾಟಿಯೊ ಬೆರೆಟಿನಿ ಎದುರು ಭಾರತದ ಆಟಗಾರರು 4–6, 6–3, 6–4ರಲ್ಲಿ ಗೆದ್ದರು.

ಒಂದು ತಾಸು 43 ನಿಮಿಷಗಳ ಪೈಪೋಟಿಯಲ್ಲಿ ಬೋಪಣ್ಣ–ದಿವಿಜ್ ಶರಣ್ ಜೋಡಿ ಅಮೋಘ ಆಟವಾಡಿ ಪ್ರೇಕ್ಷಕರನ್ನು ರಂಜಿಸಿದರು. ಅನುಭವಿ ರೋಹನ್‌ಗೆ ಉತ್ತಮ ಸಹಕಾರ ನೀಡಿದ ಎಡಗೈ ಆಟಗಾರ ದಿವಿಜ್‌ ಎದುರಾಳಿಗಳನ್ನು ದಿಗಿಲುಗೊಳಿಸಿದರು.

ADVERTISEMENT

ಪ್ರಜ್ಞೇಶ್‌ ಮತ್ತೆ ವೈಫಲ್ಯ: ಮೊದಲ ದಿನ ನಿರೀಕ್ಷೆ ಹುಸಿಗೊಳಿಸಿದ ಪ್ರಜ್ಞೇಶ್ ಗುಣೇಶ್ವರನ್‌ ಮತ್ತೆ ವಿಫಲರಾದರು. 62 ನಿಮಿಷಗಳ ಕಾದಾಟದಲ್ಲಿ ಆ್ಯಂಡ್ರೀಸ್ ಸೆಪ್ಪಿ, ಭಾರತದ ಆಟಗಾರರನ್ನು 6–1, 6–4ರಿಂದ ಮಣಿಸಿದರು.

ಮೊದಲ ಸೆಟ್‌ನಲ್ಲಿ ಸೆಪ್ಪಿ ಎದುರು ಸಪ್ಪೆಯಾದ ಭಾರತದ ಅಗ್ರ ಕ್ರಮಾಂಕದ ಆಟಗಾರ ಎರಡನೇ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿದರು. ಆದರೆ ಸ್ವಯಂ ತಪ್ಪುಗಳನ್ನು ಎಸಗಿ ಪಂದ್ಯ ಕೈಚೆಲ್ಲಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 19ನೇ ಸ್ಥಾನದಲ್ಲಿರುವ ಭಾರತ ವರ್ಷದ ಕೊನೆಯಲ್ಲಿ ನಡೆಯಲಿರುವ ವಲಯ ಮಟ್ಟದ ಹಣಾಹಣಿಯಲ್ಲಿ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.