ADVERTISEMENT

Davis Cup: ಹೊಮ್‌ಗ್ರೇನ್ ಮಣಿಸಿದ ಸುಮಿತ್‌, ಸ್ಪರ್ಧೆಯಲ್ಲಿ ಉಳಿದುಕೊಂಡ ಭಾರತ

ಡೇವಿಸ್‌ ಕಪ್ ಟೆನಿಸ್‌: ಸ್ಪರ್ಧೆಯಲ್ಲಿ ಉಳಿದುಕೊಂಡ ಭಾರತ

ಪಿಟಿಐ
Published 4 ಫೆಬ್ರುವರಿ 2023, 12:19 IST
Last Updated 4 ಫೆಬ್ರುವರಿ 2023, 12:19 IST
ಭಾರತದ ಸುಮಿತ್ ನಗಾಲ್ ಆಟದ ಪರಿ– ಎಎಫ್‌ಪಿ ಚಿತ್ರ
ಭಾರತದ ಸುಮಿತ್ ನಗಾಲ್ ಆಟದ ಪರಿ– ಎಎಫ್‌ಪಿ ಚಿತ್ರ   

ಹಿಲರ್ಡ್‌, ಡೆನ್ಮಾರ್ಕ್‌: ಜಿದ್ದಾಜಿದ್ದಿ ಹೋರಾಟದಲ್ಲಿ ಗೆದ್ದ ಸುಮಿತ್ ನಗಾಲ್ ಅವರು ಡೇವಿಸ್‌ ಕಪ್ ಟೆನಿಸ್‌ ಪಂದ್ಯದಲ್ಲಿ ಭಾರತದ ಸ್ಪರ್ಧೆಯನ್ನು ಜೀವಂತವಾಗುಳಿಸಿದರು.

ಆತಿಥೇಯ ಡೆನ್ಮಾರ್ಕ್ ವಿರುದ್ಧ ನಡೆಯುತ್ತಿರುವ ವಿಶ್ವ ಗುಂಪು 1ರ ಪ್ಲೇ ಆಫ್‌ ಪಂದ್ಯದ ಪುರುಷರ ಸಿಂಗಲ್ಸ್ ಎರಡನೇ ‍ಹಣಾಹಣಿಯಲ್ಲಿ ಸುಮಿತ್‌ 4-6, 6-4, 6-4ರಿಂದ ಆಗಸ್ಟ್ ಹೊಮ್‌ಗ್ರೇನ್ ವಿರುದ್ಧ ಗೆದ್ದರು. ಇದರೊಂದಿಗೆ ಭಾರತ ಪಂದ್ಯದಲ್ಲಿ 1–1ರ ಸಮಬಲ ಸಾಧಿಸಿತು. ಸಿಂಗಲ್ಸ್ ವಿಭಾಗದ ಮೊದಲ ಸೆಣಸಾಟದಲ್ಲಿ ಭಾರತದ ಯೂಕಿ ಭಾಂಬ್ರಿ 2–6, 2–6ರಿಂದ ಹೋಲ್ಗರ್ ರೂನ್ ವಿರುದ್ಧ ಪರಾಭವಗೊಂಡಿದ್ದರು.

‌ಹೊಮ್‌ಗ್ರೇನ್‌ ವಿರುದ್ಧ ಎರಡು ತಾಸು 27 ನಿಮಿಷಗಳ ಕಾಲ ನಡೆದ ಹಣಾಹಣಿಯ ಮೊದಲ ಸೆಟ್‌ನಲ್ಲಿ ಸುಮಿತ್‌ ಹಿನ್ನಡೆ ಅನುಭವಿಸಿದರು. ಮೊದಲ ಗೇಮ್‌ನಲ್ಲಿಯೇ ಸರ್ವ್ ಡ್ರಾಪ್ ಮಾಡಿದರೂ ಛಲಬಿಡದೆ ಆಡಿದರು. ಆದರೂ ಸೆಟ್‌ ಡೆನ್ಮಾರ್ಕ್ ಆಟಗಾರನ ಪಾಲಾಯಿತು.

ADVERTISEMENT

ವಿಶ್ವ ರ‍್ಯಾಂಕಿಂಗ್‌ನಲ್ಲಿ 506ನೇ ಸ್ಥಾನದಲ್ಲಿರುವ ಸುಮಿತ್‌, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಆರಂಭದಲ್ಲಿ 5–2ರಿಂದ ಮುನ್ನಡೆದ ಅವರು ಅದೇ ಲಯದೊಂದಿಗೆ ಗೆಲುವು ಒಲಿಸಿಕೊಂಡರು.

ತೀವ್ರ ಪೈಪೋಟಿಯಿಂದ ಕೂಡಿದ್ದ ಮೂರನೇ ಮತ್ತು ನಿರ್ಣಾಯಕ ಸೆಟ್‌ನ ಆರಂಭದಲ್ಲಿ ಸುಮಿತ್‌ 3–2ರ ಮೇಲುಗೈ ಸಾಧಿಸಿದರು. ಈ ವೇಳೆ ಹೋಮ್‌ಗ್ರೇನ್‌ ಮಾಡಿದ ಫೋರ್‌ಹ್ಯಾಂಡ್‌ ಪ್ರಮಾದವು ಭಾರತದ ಆಟಗಾರನಿಗೆ ಮೂರು ಪಾಯಿಂಟ್ಸ್ ತಂದುಕೊಟ್ಟಿತು. ಆ ಬಳಿಕ ಸೆಟ್‌ ಹಾಗೂ ಪಂದ್ಯವನ್ನು ಸುಮಿತ್ ತಮ್ಮದಾಗಿಸಿಕೊಂಡರು.

ಡಬಲ್ಸ್ ಮತ್ತು ರಿವರ್ಸ್ ಸಿಂಗಲ್ಸ್ ಪಂದ್ಯಗಳು ಇನ್ನೂ ಬಾಕಿ ಇವೆ. ಭಾರತ ಡೆನ್ಮಾರ್ಕ್‌ ಎದುರು ಸೋತರೆ ಎರಡನೇ (ವಿಶ್ವ) ಗುಂಪಿಗೆ ಜಾರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.