ನೊವಾಕ್ ಜೊಕೊವಿಚ್, ಕಾರ್ಲೋಸ್ ಅಲ್ಕರಾಜ್
(ರಾಯಿಟರ್ಸ್ ಚಿತ್ರ)
ನ್ಯೂಯಾರ್ಕ್: ಘಟಾನುಘಟಿಗಳಾದ ಕಾರ್ಲೋಸ್ ಅಲ್ಕರಾಜ್ ಮತ್ತು ನೊವಾಕ್ ಜೊಕೊವಿಚ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಕ್ವಾರ್ಟರ್‌ಫೈನಲ್ ಪ್ರವೇಶಿಸಿ ದರು. ಹಾಲಿ ಚಾಂಪಿಯನ್ ಅರಿನಾ ಸಬಲೆಂಕಾ ಸಹ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟರು.
ಎರಡನೇ ಶ್ರೇಯಾಂಕದ ಅಲ್ಕರಾಜ್ ಮತ್ತು ಏಳನೇ ಶ್ರೇಯಾಂಕದ ಜೊಕೊವಿಚ್ ಅವರು ಸೆಮಿಫೈನಲ್ ಮುಖಾಮುಖಿಯಾಗುವತ್ತ ಸಾಗಿದ್ದಾರೆ. ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ಇಬ್ಬರೂ ನೇರ ಸೆಟ್‌ಗಳ ಗೆಲುವನ್ನು ದಾಖಲಿಸಿದರು.
ಐದು ಪ್ರಶಸ್ತಿ ಗೆದ್ದಿರುವ ಅಲ್ಕರಾಜ್ 7–6 (7–3), 6–3, 6–4 ರಿಂದ ಫ್ರಾನ್ಸ್‌ನ ಆರ್ಥರ್ ರಿಂಡಕ್‌ನೆಷ್ ಅವರನ್ನು ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು. ಈ ಬಾರಿಯ ಅಭಿಯಾನದಲ್ಲಿ ಸ್ಪೇನ್‌ನ ಆಟಗಾರ ಒಂದೂ ಸೆಟ್ ಬಿಟ್ಟುಕೊಟ್ಟಿಲ್ಲ.
22 ವರ್ಷ ವಯಸ್ಸಿನ ಅಲ್ಕರಾಜ್, ಮಂಗಳವಾರ ನಡೆಯುವ ಕ್ವಾರ್ಟರ್‌ಫೈನಲ್‌ನಲ್ಲಿ 20ನೇ ಶ್ರೇಯಾಂಕದ ಜಿರಿ ಲೆಹೆಕಾ ಅವರನ್ನು ಎದುರಿಸಲಿದ್ದಾರೆ. ಝೆಕ್ ಆಟಗಾರ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಅಡ್ರಿಯಾನ್ ಮನ್ನಾರಿನೊ ಅವರನ್ನು 7–6 (7/4), 6–4, 2–6, 6–2 ರಿಂದ ಸೋಲಿಸಿದರು. ಜಿರಿ ಅವರು ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಎಂಟರ ಘಟ್ಟಕ್ಕೆ ತಲುಪುತ್ತಿರುವುದು ಇದು ಎರಡನೇ ಸಲ.
ಜೊಕೊ ಮುನ್ನಡೆ: ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗೆ ಇನ್ನಿಲ್ಲದ ಯತ್ನದಲ್ಲಿರುವ 38 ವರ್ಷ ವಯಸ್ಸಿನ ಜೊಕೊವಿಚ್ 6–3, 6–3, 6–2 ರಿಂದ ಶ್ರೇಯಾಂಕರಹಿತ ಜಾನ್–ಲೆನಾರ್ಡ್ ಸ್ಟ್ರುಫ್ (ಜರ್ಮನಿ) ಅವರನ್ನು ಹಿಮ್ಮೆಟ್ಟಿಸಿದರು.
ಮಂಗಳವಾರ ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೊವಿಚ್, ನಾಲ್ಕನೇ ಶ್ರೇಯಾಂಕದ ಟೇಲರ್ ಫ್ರಿಟ್ಝ್ ಅವರನ್ನು ಎದುರಿಸಲಿದ್ದಾರೆ. ಕಣದಲ್ಲುಳಿದಿರುವ ಅಮೆರಿಕದ ಏಕೈಕ ಆಟಗಾರ ಫ್ರಿಟ್ಝ್ 6–4, 6–3, 6–3 ರಿಂದ ಝೆಕ್ ರಿಪಬ್ಲಿಕ್‌ನ ಥಾಮಸ್ ಮಚಾಕ್ ಅವರನ್ನು ಸೋಲಿ ಸಲು 1 ಗಂಟೆ 38 ನಿ. ತೆಗೆದುಕೊಂಡರು.
ಜೊಕೊವಿಚ್ ಅವರು ಹತ್ತು ಬಾರಿ ಫ್ರಿಟ್ಝ್ ಅವರಿಗೆ ಮುಖಾಮುಖಿಯಾಗಿದ್ದು, ಒಮ್ಮೆಯೂ ಸೋತಿಲ್ಲ.
ಸಬಲೆಂಕಾಗೆ ಜಯ: ಮಹಿಳಾ ವಿಭಾಗ ದಲ್ಲಿ ಸಬಲೆಂಕಾ ಹೆಚ್ಚಿನ ತಲೆನೋವಿಲ್ಲದೇ 6–1, 6–4 ರಿಂದ ಸ್ಪೇನ್‌ನ ಕ್ರಿಸ್ಟಿನಾ ಬುಕ್ಸಾ ಅವರನ್ನು ಸೋಲಿಸಿದರು. ಮಾಲ್ಡೋವಾ ಸಂಜಾತೆ ಕ್ರಿಸ್ಟಿನಾ ವಿಶ್ವ ಕ್ರಮಾಂಕದಲ್ಲಿ 95ನೇ ಸ್ಥಾನದಲ್ಲಿದ್ದಾರೆ.
ಸಬಲೆಂಕಾ ಅವರು ಸತತ 12ನೇ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಅಥವಾ ಅದಕ್ಕಿಂತ ಮೇಲೇರಿದ ಸಾಧನೆಗೆ ಪಾತ್ರರಾದರು
ಅವರು ಎಂಟರ ಘಟ್ಟದಲ್ಲಿ ಝೆಕ್ ರಿಪಬ್ಲಿಕ್‌ನ ಮರ್ಕೆತಾ ವಂದ್ರುಸೋವಾ ಅವರನ್ನು ಎದುರಿಸಲಿದ್ದಾರೆ. 2023ರ ವಿಂಬಲ್ಡನ್ ಚಾಂಪಿಯನ್, ಮರ್ಕೆತಾ ಇನ್ನೊಂದು ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಂಬತ್ತನೇ ಶ್ರೇಯಾಂಕದ ಎಲೆನಾ ರಿಬಾಕಿನಾ ಅವರನ್ನು 6–4, 5–7, 6–2 ರಿಂದ ಹೊರದೂಡಿದರು.
ಇನ್ನೊಂದು ರೋಚಕ ಪಂದ್ಯದಲ್ಲಿ ಝೆಕ್ ರಿಪಬ್ಲಿಕ್ ಮತ್ತೊಬ್ಬ ಆಟಗಾರ್ತಿ ಬಾರ್ಬರಾ ಕ್ರಾಚಿಕೋವಾ ಅವರು ಸೋಲಿನ ಸುಳಿಯಿಂದ ಪಾರಾಗಿ ಅಮೆರಿಕದ ಟೇಲರ್ ಟೌನ್ಸೆಂಡ್ ಅವರನ್ನು 1–6, 7–6 (15–13), 6–3ರಿಂದ ಸೋಲಿಸಿದರು. ಶ್ರೇಯಾಂಕರಹಿತ ಬಾರ್ಬರಾ ಎರಡನೇ ಸೆಟ್‌ನ ಒಂದು ಹಂತದಲ್ಲಿ 4–5ರಿಂದ ಹಿಂದೆಯಿದ್ದು, ಏಳು ಸಲ ಮ್ಯಾಚ್ ಪಾಯಿಂಟ್ ಉಳಿಸಿಕೊಂಡರು.
ಕ್ರಾಚಿಕೋವಾ, ಎಂಟರ ಘಟ್ಟದಲ್ಲಿ ನಾಲ್ಕನೇ ಶ್ರೇಯಾಂಕದ ಜೆಸಿಕಾ ಪೆಗುಲಾ (ಅಮೆರಿಕ) ಅವರನ್ನು ಎದುರಿಸಲಿದ್ದಾರೆ. ಕಳೆದ ಬಾರಿ ಫೈನಲ್ ತಲುಪಿದ್ದ ಜೆಸಿಕಾ ಆರ್ಥರ್ ಆ್ಯಷ್ ಕೋರ್ಟ್‌ನಲ್ಲಿ 6–1, 6–2 ರಿಂದ ಸ್ವದೇಶದ ಆ್ಯನ್ ಲಿ ಅವರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.