ADVERTISEMENT

ಫೆಡ್‌ ಕಪ್‌ ಟೆನಿಸ್‌| ಭಾರತದ ಚಾರಿತ್ರಿಕ ಸಾಧನೆ; ಮೋಡಿ ಮಾಡಿದ ಅಂಕಿತಾ

ಮೊದಲ ಬಾರಿ ‘ಪ್ಲೇ ಆಫ್‌’ಗೆ ಮಹಿಳಾ ತಂಡ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 14:05 IST
Last Updated 8 ಮಾರ್ಚ್ 2020, 14:05 IST
ಪದಕಗಳೊಂದಿಗೆ ಭಾರತ ತಂಡದ ಆಟಗಾರ್ತಿಯರು ಸಂಭ್ರಮಿಸಿದರು –ಟ್ವಿಟರ್‌ ಚಿತ್ರ
ಪದಕಗಳೊಂದಿಗೆ ಭಾರತ ತಂಡದ ಆಟಗಾರ್ತಿಯರು ಸಂಭ್ರಮಿಸಿದರು –ಟ್ವಿಟರ್‌ ಚಿತ್ರ   

ದುಬೈ: ಭಾರತ ಮಹಿಳಾ ಟೆನಿಸ್‌ ತಂಡ ಶನಿವಾರ ರಾತ್ರಿ ಇಲ್ಲಿನ ದುಬೈ ಡ್ಯೂಟಿ ಫ್ರೀ ಕ್ರೀಡಾಂಗಣದಲ್ಲಿ ಚಾರಿತ್ರಿಕ ಸಾಧನೆ ಮಾಡಿತು.

57 ವರ್ಷಗಳ ಫೆಡ್‌ ಕಪ್‌ ಇತಿಹಾಸದಲ್ಲಿ ಮೊದಲ ಬಾರಿಗೆ ತಂಡವು ‘ಪ್ಲೇ ಆಫ್‌’ಗೆ ಅರ್ಹತೆ ಗಳಿಸಿ ವಿಶ್ವ ಮಹಿಳಾ ದಿನವನ್ನು ಸ್ಮರಣೀಯವಾಗಿಸಿಕೊಂಡಿತು.

ಏಷ್ಯಾ ಒಸೀನಿಯಾ ಗುಂಪು–1ರ ರೌಂಡ್‌ ರಾಬಿನ್‌ ಲೀಗ್‌ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಭಾರತ 2–1ಯಿಂದ ಇಂಡೊನೇಷ್ಯಾವನ್ನು ಮಣಿಸಿತು. ಇದರೊಂದಿಗೆ ಆರು ತಂಡಗಳಿದ್ದ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ‘ಪ್ಲೇ ಆಫ್‌’ಗೆ ಲಗ್ಗೆ ಇಟ್ಟಿತು.

ADVERTISEMENT

ಇಂಡೊನೇಷ್ಯಾ ವಿರುದ್ಧದ ಹಣಾಹಣಿ ಭಾರತದ ಪಾಲಿಗೆ ತುಂಬಾ ಮಹತ್ವದ್ದಾಗಿತ್ತು.

43 ನಿಮಿಷಗಳ ಕಾಲ ನಡೆದ ಮೊದಲ ಸಿಂಗಲ್ಸ್‌ನಲ್ಲಿ ರುತುಜಾ ಬೋಸ್ಲೆ 3–6, 6–0, 3–6ರಲ್ಲಿ ಪ್ರಿಸ್ಕಾ ಮಡೆಲಿನ್‌ ನುಗ್ರೊಹೊ ಎದುರು ಸೋತಿದ್ದರಿಂದ ತಂಡದ ಮೇಲೆ ಆತಂಕದ ಕಾರ್ಮೋಡ ಕವಿದಿತ್ತು.

ಎರಡನೇ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಗೆಲ್ಲಲೇಬೇಕಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಆಡಿದ ಅವರು 6–3, 6–3 ನೇರ ಸೆಟ್‌ಗಳಿಂದ ಅಲದಿಲಾ ಸುತಜಿಯಾದಿ ಅವರನ್ನು ಮಣಿಸಿ ಭಾರತದ ಪಾಳಯದಲ್ಲಿ ಚೈತನ್ಯ ತುಂಬಿದರು.

ನಿರ್ಣಾಯಕ ಎನಿಸಿದ್ದ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ಅಂಕಿತಾ ಮೋಡಿ ಮಾಡಿದರು.

ಈ ಜೋಡಿ 7–6, 6–0ರಲ್ಲಿ ಪ್ರಿಸ್ಕಾ ಮಡೆಲಿನ್‌ ಮತ್ತು ಅಲದಿಲಾ ಅವರನ್ನು ಸೋಲಿಸಿ ತಂಡದ ಸಂಭ್ರಮಕ್ಕೆ ಕಾರಣವಾಯಿತು.

ಮೊದಲ ಸೆಟ್‌ನಲ್ಲಿ 33 ವರ್ಷ ವಯಸ್ಸಿನ ಸಾನಿಯಾ ಮತ್ತು 27ರ ಹರೆಯದ ಅಂಕಿತಾ 1–4ರಿಂದ ಹಿನ್ನಡೆ ಕಂಡಿದ್ದರು. ಇದರಿಂದ ಕಿಂಚಿತ್ತೂ ಎದೆಗುಂದದ ಭಾರತದ ಜೋಡಿ ನಂತರ ಪರಿಣಾಮಕಾರಿ ಆಟ ಆಡಿತು. ‘ಟೈ ಬ್ರೇಕರ್‌’ನಲ್ಲೂ ಚುರುಕಿನ ಸಾಮರ್ಥ್ಯ ತೋರಿ ಗೆಲುವಿನ ತೋರಣ ಕಟ್ಟಿತು.

ಎರಡನೇ ಸೆಟ್‌ನಲ್ಲಿ ಪ್ರಿಸ್ಕಾ ಮತ್ತು ಅಲದಿಲಾ ಅವರು ಸಾನಿಯಾ ಹಾಗೂ ಅಂಕಿತಾಗೆ ಸಾಟಿಯಾಗಲೇ ಇಲ್ಲ. ತಮ್ಮ ಸರ್ವ್‌ಗಳನ್ನು ಉಳಿಸಿಕೊಂಡ ಭಾರತದ ಆಟಗಾರ್ತಿಯರು ಮೂರು ‘ಬ್ರೇಕ್‌ ಪಾಯಿಂಟ್ಸ್‌’ ಕಲೆಹಾಕಿ ಸಂಭ್ರಮಿಸಿದರು.

ಆರಂಭದಲ್ಲಿ ಕಹಿ; ನಂತರ ಸಿಹಿ: ಭಾರತ ತಂಡವು ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ 0–3ಯಿಂದ ಬಲಿಷ್ಠ ಚೀನಾ ತಂಡದ ಎದುರು ಸೋತಿತ್ತು.

ಎರಡನೇ ಹೋರಾಟದಲ್ಲಿ 3–0ಯಿಂದ ಉಜ್ಬೆಕಿಸ್ತಾನವನ್ನು ಮಣಿಸಿ ವಿಶ್ವಾಸ ಮರಳಿ ಪಡೆದಿದ್ದ ತಂಡವು ಬಳಿಕ ದಕ್ಷಿಣ ಕೊರಿಯಾ (2–1) ಹಾಗೂ ಚೀನಾ ತೈಪೆ (2–1) ತಂಡಗಳ ವಿರುದ್ಧ ಗೆಲುವಿನ ಸಿಹಿ ಸವಿದಿತ್ತು.

ಏಪ್ರಿಲ್‌ನಲ್ಲಿ ನಡೆಯುವ ‘ಪ್ಲೇ ಆಫ್‌’ ಪಂದ್ಯದಲ್ಲಿ ಭಾರತ ತಂಡಕ್ಕೆ ಲಾತ್ವಿಯಾ ಅಥವಾ ನೆದರ್ಲೆಂಡ್ಸ್‌ ಸವಾಲು ಎದುರಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.