ADVERTISEMENT

PV Web Exclusive | ಟೆನಿಸ್: ಐದಡಿ ಹತ್ತಿಂಚಿನ ಮಿಂಚು

ವಿಶಾಖ ಎನ್.
Published 14 ಅಕ್ಟೋಬರ್ 2020, 6:08 IST
Last Updated 14 ಅಕ್ಟೋಬರ್ 2020, 6:08 IST
ಈಗಾ (ರಾಯಿಟರ್ಸ್ ಚಿತ್ರ)
ಈಗಾ (ರಾಯಿಟರ್ಸ್ ಚಿತ್ರ)   

ಟೆನಿಸ್‌ ಮಹಿಳೆಯರ ಸಿಂಗಲ್ಸ್‌ನಲ್ಲಿ ಮಿಂಚುಹುಳುಗಳೇ ಹೆಚ್ಚಾಗಿ ಕಾಣುತ್ತಿವೆ. ತಾನೊಂದು ಜ್ಯೋತಿಯಾಗಬೇಕು ಎಂಬ ಗುರಿಯನ್ನು ಅರ್ಥವತ್ತಾದ ಮಾತಿನ ಮೂಲಕವೇ ಅರುಹಿರುವ ಪೋಲೆಂಡ್‌ನ ಈಗಾ ಸದ್ಯದ ಸಂಚಲನ. ಫ್ರೆಂಚ್‌ ಓಪನ್‌ ಚಾಂಪಿಯನ್ ಆದ ಈ ಹುಡುಗಿ 17ನೇ ರ‍್ಯಾಂಕ್‌ಗೆ ಜಿಗಿದಿದ್ದಾಳೆ. ಅವಳ ಆಟದ ಮಾಟ ಕಣ್ಣುಕೋರೈಸುವಂಥದ್ದು.

***

ಯುಗಾಸ್ಲಾವಿಯಾ ಹಾಗೂ ಅಮೆರಿಕ ದೇಶಗಳನ್ನು ಪ್ರತಿನಿಧಿಸಿದ ಮೋನಿಕಾ ಸೆಲೆಸ್ ವೃತ್ತಿಪರ ಟೆನಿಸ್ ಆಡಲು ಶುರುಮಾಡಿದಾಗ ಇನ್ನೂ ಹದಿನಾರರ ಪ್ರಾಯ. ಇಪ್ಪತ್ತನೇ ಬರ್ತಡೇ ಆಚರಿಸಿಕೊಳ್ಳುವ ಹೊತ್ತಿಗೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಎಂಟು ಗ್ರ್ಯಾಂಡ್‌ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದು ಆಗಿತ್ತು. ಹದಿನೇಳು, ಹದಿನೆಂಟರ ವಯಸ್ಸಿನಲ್ಲೇ ನಂಬರ್ ಒನ್ ಆಟಗಾರ್ತಿ ಎನಿಸಿಕೊಂಡಿದ್ದ ಹುಡುಗಿ. 1993ರಲ್ಲಿ ಆಡುತ್ತಿರುವಾಗಲೇ ದುಷ್ಕರ್ಮಿಯೊಬ್ಬ ಅಂಗಳಕ್ಕೆ ನುಗ್ಗಿ ಒಂಬತ್ತು ಇಂಚು ಉದ್ದದ ಚೂರಿಯಿಂದ ಬೆನ್ನಿಗೆ ಇರಿದುಬಿಟ್ಟ. ಆಮೇಲೆ ಎರಡು ವರ್ಷ ಅವಳಿಗೆ ಟೆನಿಸ್ ಆಡಲು ಆಗಿರಲಿಲ್ಲ. 1995ರಲ್ಲಿ ಮತ್ತೆ ರ‍್ಯಾಕೆಟ್ ಹಿಡಿದರೂ ಮುಂದಿನ ವರ್ಷ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಎತ್ತಿಹಿಡಿಯಲಾಯಿತಷ್ಟೆ. 2003ರಲ್ಲಿ ಕೊನೆಯ ಸಲ ಸೆಲೆಸ್ ಆಡುವ ಹೊತ್ತಿಗೆ ವಯಸ್ಸು ಮೂವತ್ತಾಗಿತ್ತು. 1992ರಲ್ಲಿ ಫ್ರೆಂಚ್ ಓಪನ್ ಸಿಂಗಲ್ಸ್ ಪ್ರಶಸ್ತಿ ಗೆದ್ದಾಗ ಸೆಲೆಸ್‌ ವಯಸ್ಸು ಹದಿನೆಂಟು ವರ್ಷ ನೂರಾಎಂಬತ್ತೇಳು ದಿನ. ಅಷ್ಟು ಚಿ‌ಕ್ಕಪ್ರಾಯದಲ್ಲಿ ಯಾರೂ ಕಪ್‌ ಎತ್ತಿಹಿಡಿದಿರಲಿಲ್ಲ. ಇದೇ ಅಕ್ಟೋಬರ್ 10ರಂದು ಪೋಲೆಂಡ್‌ನ ಈಗಾ ಶ್ಫೀಆಟೆಕ್‌ (ಇಂಗ್ಲಿಷ್‌ನಲ್ಲಿ Iga Swiatek ಎಂದು ಬರೆದರೂ, ಹೆಸರಿನ ಉಚ್ಚಾರ ಹೀಗಿದೆ. ಪೋಲೆಂಡ್‌ನಲ್ಲಿ ಹೀಗೆ ಬರೆಯುವುದೇ ಬೇರೆ, ಉಚ್ಚಾರವೇ ಬೇರೆ ಎನ್ನುವುದು ಸಾಮಾನ್ಯ) ಫ್ರೆಂಚ್‌ ಓಪನ್ ಗೆದ್ದಳು. ಆ ದಿನಕ್ಕೆ ಸರಿಯಾಗಿ ಅವಳ ವಯಸ್ಸು ಹತ್ತೊಂಬತ್ತು ವರ್ಷ ನೂರಾ ಮೂವತ್ತೆರಡು ದಿನ. ಸೆಲೆಸ್ ನಂತರ ಈ ಪ್ರಶಸ್ತಿ ಗೆದ್ದ ಚಿಕ್ಕಪ್ರಾಯದ ಹುಡುಗಿ ಎಂಬ ಅಪರೂಪದ ಗೌರವ ಸಂದಿತು. ಅದಕ್ಕಿಂತ ಮಿಗಿಲಾಗಿ ಪೋಲೆಂಡ್‌ನ ಯಾರೊಬ್ಬರೂ ಇದುವರೆಗೆ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿಲ್ಲ.

ADVERTISEMENT

ಸೆಲೆಸ್ ಚೆಂಡನ್ನು ಹೊಡೆಯುವಾಗ ದೊಡ್ಡ ಶಬ್ದ ಹೊಮ್ಮಿಸುತ್ತಿದ್ದುದನ್ನು ಟೆನಿಸ್ ಅಭಿಮಾನಿಗಳೆಲ್ಲ ಕೇಳಿದ್ದಾರೆ. ಅದು 94.3 ಡೆಸಿಬಲ್‌ನಷ್ಟು ತೀವ್ರವಾದ ಶಬ್ದ. ಈ ಸಲ ಫ್ರೆಂಚ್ ಓಪನ್ ಫೈನಲ್ಸ್‌ನಲ್ಲಿ ಈಗಾ ಎದುರು ಆಡಿದ ಅಮೆರಿಕದ ಸೋಫಿಯಾ ಕೆನಿನ್ ಕೂಡ ಚೆಂಡು ಹೊಡೆಯುವಾಗ ಶಬ್ದ ಹೊಮ್ಮಿಸುವ ಹುಡುಗಿಯೇ. ಆದರೆ, ಆ ಶಬ್ದದಿಂದ ಪೋಲೆಂಡ್‌ನ ಎದುರಾಳಿ ತುಸುವೂ ವಿಚಲಿತಳಾಗಲಿಲ್ಲ. 6–4, 6–1ರಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಳು. ಮೊದಲ ಸೆಟ್‌ನ ನಡುಘಟ್ಟದಲ್ಲೇ ಕೆಲವು ನಿಮಿಷ ಬ್ರೇಕ್ ಕೇಳಿಕೊಂಡು, ನೋವುನೀಗುವ ದಪ್ಪ ಪಟ್ಟಿಯನ್ನು ಎಡ ತೊಡೆಯ ಮೇಲೆ ಅಂಟಿಸಿಕೊಂಡು ಬಂದ ಕೆನಿನ್ ತನಗಿಂತ ಎರಡು ವರ್ಷ ಕಿರಿಯ ಆಟಗಾರ್ತಿಯ ತಣ್ಣಗಿನ ಚುರುಕುತನ ಕಂಡು ದಂಗಾದಳು. ಇಪ್ಪತ್ತೈದು ‘ವಿನ್ನರ್‌’ಗಳನ್ನು ಈಗಾ ಹಾಕಿದಳು. ಎರಡನೇ ಸೆಟ್‌ ಪ್ರಾರಂಭವಾಗುವ ಹೊತ್ತಿಗಾಗಲೇ ಕೆನಿನ್ ಮಾನಸಿಕವಾಗಿ ಸೋತವಳಂತೆ ಕಂಡಳು. ಆಟ ಮುಗಿಯುವ ಹೊತ್ತಿಗೆ ಎಡಗಾಲಿನ ಮೇಲಿನ ಪಟ್ಟಿ ಇನ್ನೂ ಭಾರ ಎನಿಸಿರಬೇಕು. ಕೆನಿನ್ ಈ ವರ್ಷ ಟೆನಿಸ್‌ ಅಂಗಳದಲ್ಲಿ ಇನ್ನಿಲ್ಲದಂತೆ ಮೆರೆದವಳು. ಆಡಿರುವ ಹದಿನೆಂಟು ಪಂದ್ಯಗಳಲ್ಲಿ ಹದಿನಾರರಲ್ಲಿ ಗೆದ್ದಿರುವ ಪ್ರತಿಭಾವಂತೆ. ಆಸ್ಟ್ರೇಲಿಯಾ ಓಪನ್ ಪ್ರಶಸ್ತಿಯನ್ನು ಇದೇ ವರ್ಷ ಗೆದ್ದ ಹುರುಪೂ ಜತೆಗಿತ್ತು. ಹಾಗಿದ್ದೂ ಹತ್ತೊಂಬತ್ತರ ಹುಡುಗಿಯ ಸಪೂರ ದೇಹದ ಶರವೇಗದ ಚಲನೆಗೆ ಅವಳು ನಿರುತ್ತರಳಾಗದೇ ವಿಧಿಯಿರಲಿಲ್ಲ. ಒಂದು ನಿರ್ದಿಷ್ಟ ಬ್ರೇಕ್‌ ಪಾಯಿಂಟ್ ಪಡೆಯಲೆಂದು ಹತ್ತೊಂಬತ್ತು ಸ್ಟ್ರೋಕ್‌ಗಳ ರ‍್ಯಾಲಿ ನಡೆಯಿತು. ಪಂದ್ಯದ ಅತಿ ದೀರ್ಘ ರ‍್ಯಾಲಿ ಅದು. ಐದನೇ ಸಲ ‘ಅಡ್ವಾಂಟೇಜ್, ಶ್ಫೀಆಟೆಕ್‌’ ಎಂಬ ಪ್ರಕಟಣೆ ಕೇಳಿದ ಮೇಲೆ ಕೆನಿನ್‌ನತ್ತ ಫೋರ್‌ಹ್ಯಾಂಡ್‌ನ ಭಲೇ ಹೊಡೆತವೊಂದು ನುಗ್ಗಿಬಂತು. 5–3ರಲ್ಲಿ ಅದಾಗಲೇ ಸೆಟ್‌ನಲ್ಲಿ ಮುಂದಿದ್ದ ಈಗಾ ಶ್ಫೀಆಟೆಕ್‌ಗೆ ಪಂದ್ಯ ಗೆಲ್ಲಲು ಬೇಕಾದ ಇಂಧನವಾಗಿ ಆ ರ‍್ಯಾಲಿ ಒದಗಿಬಂತು.

ಈಗಾ ಫ್ರೆಂಚ್ ಓಪನ್‌ ಗೆಲ್ಲುವ ಹಾದಿಯಲ್ಲಿ ಒಂದೂ ಸೆಟ್‌ ಸೋಲಲಿಲ್ಲ. 2007ರಲ್ಲಿ ಜಸ್ಟಿನ್ ಹೆನಿನ್ ಹಾರ್ಡಿನ್ ಇದೇ ಸ್ಥಳದಲ್ಲಿ ಇಂಥದೊಂದು ದಾಖಲೆ ಬರೆದಿದ್ದಳು. ಇವೊನ್ ಗೂಲಗಾಂಗ್, ಕ್ರಿಸ್ ಎವರ್ಟ್, ಸ್ಟೆಫಿ ಗ್ರಾಪ್ ಮಾತ್ರ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಒಂದೂ ಸೆಟ್‌ ಬಿಟ್ಟುಕೊಡದೆ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಪ್ರೌಢವಯಸ್ಕರೆನಿಸಿಕೊಂಡಿದ್ದರು. ಆ ಪಟ್ಟಿಗೀಗ ಈಗಾ ಶ್ಫೀಆಟೆಕ್‌ ಹೊಸ ಸೇರ್ಪಡೆ.

ಈಗಾ ಶ್ಫೀಆಟೆಕ್‌ಗೆ ಮೊದಲ ಸುತ್ತಿನಲ್ಲೇ ಈ ಸಲ ಎದುರಾದದ್ದು ಕಳೆದ ಬಾರಿಯ ರನ್ನರ್ ಅಪ್, ಕೆನಡಾದ ಮಾರ್ಕೆಟಾ ವೊಂಡ್ರೊವ್‌ಸೊವಾ.6–1, 6–2ರಲ್ಲಿ ಇಪ್ಪತ್ತಾರು ವಯಸ್ಸಿನ ಆ ಆಟಗಾರ್ತಿಯನ್ನು ಮಣಿಸಿದ್ದಾಯಿತು. ಹದಿನಾರರ ಘಟ್ಟಕ್ಕೆ ಬಂದಾಗ ರೊಮೇನಿಯಾದ ಸಿಮೊನಾ ಹೆಲೆಪ್ ಸವಾಲು ಎದುರಲ್ಲಿತ್ತು. ಇಪ್ಪತ್ತೊಂಬತ್ತು ವರ್ಷ ವಯಸ್ಸಿನ ಸಿಮೊನಾ ಅನುಭವಿ. ಅದಕ್ಕೂ ಮಿಗಿಲಾಗಿ ಕಳೆದ ವರ್ಷ ಇಂಥದ್ದೇ ಘಟ್ಟದಲ್ಲಿ ಕೇವಲ ಮುಕ್ಕಾಲು ಗಂಟೆಯಲ್ಲಿ ಈಗಾಳನ್ನು ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಸೋಲಿಸಿದ್ದಳು. ಆ ಪಂದ್ಯದಲ್ಲಿ ಮಾಡಿದ ತಪ್ಪನ್ನು ಇಲ್ಲಿ ಈಗಾ ಮಾಡಲಿಲ್ಲ. ಒಂದೂ ಸೆಟ್‌ ಕೊಡದೆ ಹೆಲೆಪ್‌ ಕೂಡ ಗಂಟೂಮೂಟೆ ಕಟ್ಟುವಂತೆ ಆಡಿದಳು. ತನಗಿಂತ ಎಲ್ಲರೂ ದೊಡ್ಡ ವಯಸ್ಸಿನವರೇ. ಅವರೆಲ್ಲರನ್ನೂ ಸೋಲಿಸಿ ‍ಪ್ರಶಸ್ತಿ ಗೆದ್ದದ್ದು ಅಡಿಗೆರೆ ಎಳೆಯಬೇಕಾದ ಇನ್ನೊಂದು ಸಂಗತಿ.

ಹೋದವರ್ಷ ಹೆಲೆಪ್ ಎದುರು ಬರೀ ಒಂದು ಗೇಮ್ ಗೆದ್ದು, ಪಂದ್ಯ ಸೋತಮೇಲೆ ಈಗಾ ತನ್ನ ಹೈಸ್ಕೂಲ್‌ಗೆ ಮರಳಿದ್ದಳು. ಆರೇಳು ಟೆಸ್ಟ್‌ಗಳನ್ನು ಬರೆದು, ಪಾಠ–ಪ್ರವಚನದಲ್ಲಿ ಮನಸ್ಸು ನೆಟ್ಟಳು. ವಿಂಬಲ್ಡನ್‌ನಲ್ಲಿ ಆಡಲು ವಿಮಾನ ಹತ್ತುವ ಮೊದಲು ಓದೋ, ಆಟವೋ ಎಂಬ ಜಿಜ್ಞಾಸೆ ಇತ್ತು. ಕೊರೊನಾ ಸೋಂಕು ಕಾಣಿಸಿಕೊಂಡ ಮೇಲೆ ಎರಡು ವರ್ಷಗಳಲ್ಲಿ ಡಿಗ್ರಿ ಮುಗಿಸಿದರಾಯಿತು ಎಂದುಕೊಂಡಿದ್ದಳು. ಹತ್ತರ ರ‍್ಯಾಂಕ್‌ನೊಳಗೆ ಪ್ರವೇಶಿಸಿದರೆ ಬರೀ ಟೆನಿಸ್‌ನದ್ದೇ ಧ್ಯಾನ. ಇಲ್ಲವಾದರೆ, ಓದಿನ ಕಡೆಗೆ ಲಕ್ಷ್ಯ ಎನ್ನುವುದು ಇವತ್ತಿಗೂ ಈಗಾ ಸಂಕಲ್ಪ.

ಫ್ರೆಂಚ್ ಓಪನ್ ಶುರುವಾಗುವ ಮೊದಲು 54ನೇ ರ‍್ಯಾಂಕಿಂಗ್ ಆಟಗಾರ್ತಿಯಾಗಿದ್ದ ಪೋಲೆಂಡ್‌ನ ಹುಡುಗಿ ಈಗ 17ನೇ ರ‍್ಯಾಂಕ್‌ಗೆ ಜಿಗಿದಿದ್ದಾಳೆ. ಘಟಾನುಘಟಿ ಆಟಗಾರರಾಗಿ ಗುರುತಿಸಿಕೊಂಡಿದ್ದ ರಾಡ್‌ ಲೆವರ್, ಕ್ರಿಸ್ ಎವರ್ಟ್, ಪಾಮ್‌ ಶ್ರೈವರ್ ಎಲ್ಲರೂ ಈಗಾ ಆಟವನ್ನು ಕೊಂಡಾಡಿದ್ದಾರೆ. ಈಗಾ ಹಾಗೂ ಕೆನಿನ್‌ ಇಬ್ಬರೂ ಶ್ರೇಷ್ಠ ಟೆನಿಸ್‌ ಆಡಬಲ್ಲ ಈ ಹೊತ್ತಿನ ಆಟಗಾರ್ತಿಯರು ಎಂದು ಶ್ಲಾಘಿಸಿದ್ದಾರೆ.

ಮೂವತ್ತೊಂಬತ್ತು ವಯಸ್ಸಿನ ಸೆರೆನಾ ವಿಲಿಯಮ್ಸ್ ಪದೇ ಪದೇ ಗಾಯ, ನೋವಿನ ಸಮಸ್ಯೆ ಎದುರಿಸುತ್ತಾ ನಿವೃತ್ತಿಯ ಅಂಚಿಗೆ ಬಂದಿರುವಾಗ ಮಹಿಳೆಯರ ಸಿಂಗಲ್ಸ್‌ನಲ್ಲಿ ನೆಲೆಯೂರುವ ಮುಖ ಯಾವುದು ಎಂಬ ಪ್ರಶ್ನೆ ಇದೆ. ಕಳೆದ ಹದಿನಾಲ್ಕು ಟೂರ್ನಿಗಳಲ್ಲಿ ಒಂಬತ್ತು ಬೇರೆ ಬೇರೆ ಆಟಗಾರ್ತಿಯರು ಚಾಂಪಿಯನ್‌ಗಳಾಗಿ ಹೊಮ್ಮಿರುವುದರಿಂದ ಹೊಸಕಾಲದ ಹುಡುಗಿಯರು ಮಿಂಚುಹುಳುಗಳಂತೆ ಕಾಣುತ್ತಿದ್ದಾರೆ. ಈ ಕುರಿತು ಈಗಾ ಪ್ರಜ್ಞಾವಂತೆಯಂತೆ ಮಾತನಾಡಿದ್ದಾಳೆ. ‘ಮಹಿಳೆಯರ ಟೆನಿಸ್‌ನಲ್ಲಿ ಯಾರೂ ದೀರ್ಘ ಕಾಲ ಮೆರೆಯುವಂತೆ ಆಡುತ್ತಿಲ್ಲದಿರುವುದು ಚಿಂತಿಸಬೇಕಾದ ವಿಷಯ. ರಫೆಲ್ ನಡಾಲ್, ರೋಜರ್ ಫೆಡರರ್, ನೊವಾಕ್ ಜೊಕೊವಿಚ್ ಪುರುಷರ ಟೆನಿಸ್‌ಗೆ ದೀರ್ಘಾವಧಿಯ ಶ್ರೇಷ್ಠತೆ ದಕ್ಕಿಸಿಕೊಟ್ಟಂತೆ ನಮ್ಮ ಆಟದಲ್ಲಿ ಆಗುತ್ತಿಲ್ಲ. ಅದನ್ನು ಆಗಿಸಬೇಕು ಎಂಬ ಕನಸೇನೋ ಇದೆ. ಎದುರಲ್ಲಿ ಸಾಕಷ್ಟು ಸವಾಲುಗಳೂ ಉಂಟು’ ಎನ್ನುವ ಅವಳ ಮಾತು ತೂಕದ್ದು.

ಈಗಾ ತುಂಬಾ ತಣ್ಣಗಿನ ಹುಡುಗಿ. ಐದಡಿ ಹತ್ತು ಇಂಚಿನ ನೀಳಕಾಯ. ತಾನು ಕುಡಿದ ಹಾಲಿನ ಪಸೆಯಿನ್ನೂ ಗಲ್ಲದ ಮೇಲೆ ಹಾಗೆಯೆ ಇದೆಯೇನೋ ಎನ್ನುವಂತೆ ಕಾಣುತ್ತಾಳೆ. ಸಣ್ಣ ಕಣ್ಣುಗಳಲ್ಲಿ ಕೆಚ್ಚು ಅದೆಲ್ಲಿ ಹುದುಗಿದೆಯೋ? ಕೆನಿನ್ ತರಹ ನೋಡಲು ಸುಂದರಿಯಲ್ಲ. ಬಿಳಿ ಬಟ್ಟೆ ಹಾಕುವುದೇ ಹೆಚ್ಚು. ಮಂಡಿಯಿಂದ ಕೆಳಗಿನವರೆಗೆ ಬಿಗಿದಪ್ಪುವ ಥ್ರೀಫೋರ್ತ್ ಧರಿಸಿ, ಅಚ್ಚುಕಟ್ಟಾದ ಟೋಪಿಯನ್ನೂ ತೊಟ್ಟು ಕಣಕ್ಕಿಳಿಯುವುದು ಅಭ್ಯಾಸ.

ಪ್ರಶಸ್ತಿ ಗೆದ್ದಮೇಲೆ ಮಾತನಾಡಲೆಂದು ಮೈಕ್ ಎದುರು ಬಂದುನಿಂತ ಅವಳು ಹೇಳಿದ್ದು: ‘ಇದೊಂದು ಭಾವುಕ ಗಳಿಗೆ. ತಲೆಯೊಳಗೆ ಏನೇನೋ ಆಗುತ್ತಿದೆ. ನನಗೆ ಮಾತೇ ಹೊರಡುತ್ತಿಲ್ಲ’.

ಅವಳ ಅಪ್ಪ ತೊಮಜ್ 1988ರ ಸೋಲ್ ಒಲಿಂಪಿಕ್ಸ್‌ನಲ್ಲಿ ರೋವರ್ ಆಗಿ ಸ್ಪರ್ಧಿಸಿದ್ದವರು. ಅಮ್ಮ ಡೊರೈಟಾ ವೈದ್ಯೆ. ಅಕ್ಕ ಅಗಾಟಾ. ಮಕ್ಕಳು ಅಥ್ಲೀಟ್‌ಗಳಾಗಬೇಕು ಎನ್ನುವುದು ಅಪ್ಪನ ಬಯಕೆಯಾಗಿತ್ತು. ಈಗಾಳಿಗಿಂತ ಮೂರು ವರ್ಷ ದೊಡ್ಡವಳಾದ ಅಗಾಟಾ ಮೊದಲು ಈಜುಗಾರ್ತಿಯಾಗಲು ಪ್ರಯತ್ನಿಸಿದಳು. ಆಮೇಲೆ ಟೆನಿಸ್‌ ಆಡತೊಡಗಿದಳು. 2013–15ರ ಅವಧಿಯಲ್ಲಿ ಐಟಿಎಫ್ ಜೂನಿಯರ್ ಟೂರ್ನಿಗಳಲ್ಲಿ ಆಡಿದಳಾದರೂ ಗಾಯ, ನೋವಿನ ಸಮಸ್ಯೆಗಳಿಂದಾಗಿ ಅಲ್ಲಿಂದ ಮೇಲೇರಲು ಸಾಧ್ಯವಾಗಲಿಲ್ಲ. ಅಕ್ಕನನ್ನು ಸೋಲಿಸಬೇಕು ಎಂದು ತಾನೂ ಟೆನಿಸ್‌ ಆಡಲಾರಂಭಿಸಿದ ಈಗಾ ಈ ಹೊತ್ತು ಎಲ್ಲರ ಕಣ್ಮಣಿ. 2018ರಲ್ಲಿ ವಿಂಬಲ್ಡನ್ ಗರ್ಲ್ಸ್ ಚಾಂಪಿಯನ್ ಆಗಿದ್ದ ಅವಳು 2016ರಲ್ಲಿ ದೇಶಕ್ಕೆ ಫೆಡ್‌ ಕಪ್‌ ಕೂಡ ಗೆದ್ದು ಕೊಟ್ಟಿದ್ದಳು.

ಟೆನಿಸ್‌ ಸುಂದರಿಯರು, ಮಾತಿನ ಜಾಣೆಯರ ನಡುವೆ ಈಗಾ ಬೇರೆಯದೇ ಬೆಳ್ಳಿಗೆರೆಯಂತೆ ಕಾಣುತ್ತಿದ್ದಾಳೆ. ಜಸ್ಟಿನ್ ಹೆನಿನ್ ಹಾರ್ಡಿನ್‌ ಇದ್ದದ್ದೂ ಹೀಗೆಯೇ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.