ADVERTISEMENT

ಆಸ್ಟ್ರೇಲಿಯನ್ ಓಪನ್‌: ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಗೆದ್ದ ಇಟಲಿಯ ಆಟಗಾರ ಸಿನ್ನರ್

ಡೇವ್‌ ರನ್ನರ್‌

ರಾಯಿಟರ್ಸ್
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
<div class="paragraphs"><p>ಇಟಲಿಯ ಯಾನಿಕ್ ಸಿನ್ನರ್ ಆಟದ ಸೊಬಗು</p></div>

ಇಟಲಿಯ ಯಾನಿಕ್ ಸಿನ್ನರ್ ಆಟದ ಸೊಬಗು

   

ಮೆಲ್ಬರ್ನ್: ರಾಡ್‌ ಲೇವರ್ ಕ್ರೀಡಾಂಗಣದಲ್ಲಿ ಭಾನುವಾರ ಇಟಲಿಯ ಹುಡುಗ ಯಾನಿಕ್ ಸಿನ್ನರ್ ಅವರ ಸಂತಸಕ್ಕೆ ಪಾರವೇ ಇರಲಿಲ್ಲ.

 ಮೆಲ್ಬರ್ನ್ ಪಾರ್ಕ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಫೈನಲ್‌ನಲ್ಲಿ ತಮಗಿಂತ ಅನುಭವಿ ಆಟಗಾರ ಡೆನಿಲ್ ಮೆಡ್ವೆಡೇವ್ ವಿರುದ್ಧ ಗೆದ್ದರು. ಇದರೊಂದಿಗೆ ತಮ್ಮ ವೃತ್ತಿಜೀವನದ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ  ಜಯದ ಸಂಭ್ರಮ ಆಚರಿಸಿದರು.

ADVERTISEMENT

22ರ ಯುವಕ ಯಾನಿಕ್ ಕುಣಿದು ಕುಪ್ಪಳಿಸಿದರು. ಕೋರ್ಟ್ ಮೇಲೆ ಅಂಗಾತ ಮಲಗಿ ಬಾನಿನಲ್ಲಿದ್ದ ತಾರೆಗಳನ್ನು ನೋಡುತ್ತ ಮೈಮರೆತರು. ಅವರ ಕಂಗಳಿಂದ ಆನಂದಭಾಷ್ಪ ಹರಿಯಿತು. ಮರುಕ್ಷಣವೇ ಎದ್ದು ಪ್ರೇಕ್ಷಕರ ಗ್ಯಾಲರಿಗೆ ಧಾವಿಸಿದ ಅವರು ತಮ್ಮ ಕೋಚ್, ಕುಟುಂಬದ ಸದಸ್ಯರು, ಸ್ನೇಹಿತರನ್ನು ಆಲಂಗಿಸಿಕೊಂಡರು.

ಸೆಮಿಫೈನಲ್‌ನಲ್ಲಿ ದಿಗ್ಗಜ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿದ್ದ ಸಿನ್ನರ್ ಫೈನಲ್‌ನಲ್ಲಿ ಅಮೋಘ ಆಟವಾಡಿದರು.  ಅವರು 3-6, 3-6, 6-4, 6-4, 6-3 ರಿಂದ ಮೂರನೇ ಶ್ರೇಯಾಂಕದ ಮೆಡ್ವೆಡೇವ್ ಅವರನ್ನು ಮಣಿಸಿದರು. ಈ ಪಂದ್ಯದ ಆರಂಭಿಕ ಎರಡೂ ಸೆಟ್‌ಗಳಲ್ಲಿ ಮೆಡ್ವೆಡೇವ್ ಪ್ರಾಬಲ್ಯ ಮೆರೆದಿದ್ದರು. ಇದರಿಂದಾಗಿ ಅವರೇ ಜಯಿಸುವ ನಿರೀಕ್ಷೆ ಮೂಡಿತ್ತು.

ಆದರೆ ಮೂರನೇ ಸೆಟ್‌ನಲ್ಲಿ ಬಲವಾದ ತಿರುಗೇಟು ನೀಡಿದ ಸಿನ್ನರ್ ಆತ್ಮವಿಶ್ವಾಸ ವೃದ್ಧಿಸಿಕೊಂಡರು. ನಂತರದ ಎರಡೂ ಸೆಟ್‌ಗಳಲ್ಲಿಯೂ ಡೇವ್ ಅವರಿಗೆ ಆಘಾತ ನೀಡಿದರು.

‘ಯಾನಿಕ್ ಸಿನ್ನರ್ ಟೆನಿಸ್ ಇತಿಹಾಸದ ಪುಸ್ತಕದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಅದರಿಂದಾಗಿ ನಾವೆಲ್ಲರೂ ಹೆಮ್ಮೆಪಡುತ್ತಿದ್ದೇವೆ’ ಎಂದು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಪ್ರತ್ರಿಕ್ರಿಯಿಸಿದ ಸಿನ್ನರ್, ‘ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಲು ಮತ್ತು ಈ ಹಂತಕ್ಕೆ ತಲುಪಲು ಅವರ ಬೆಂಬಲವೇ ಪ್ರಮುಖವಾದದ್ದು. ಅದಕ್ಕಾಗಿ ಆಭಾರಿಯಾಗಿರುವೆ’ ಎಂದಿದ್ದಾರೆ.

₹ 19 ಕೋಟಿ : ಸಿಂಗಲ್ಸ್ ಚಾಂಪಿಯನ್
₹ 9.4 ಕೋಟಿ: ಸಿಂಗಲ್ಸ್‌ ರನ್ನರ್ ಅಪ್
ಡಬಲ್ಸ್‌ ಚಾಂಪಿಯನ್: ₹ 4 ಕೋಟಿ
ಡಬಲ್ಸ್ ರನ್ನರ್ಸ್ ಅಪ್: ₹ 2 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.