ADVERTISEMENT

ಅಮೆರಿಕ ಓಪನ್ ಫೈನಲ್‌: ಸೆರೆನಾ ಮಣಿಸಿದ ನವೊಮಿ ಒಸಾಕಗೆ ಮೊದಲ ಗ್ರ್ಯಾನ್‌ ಸ್ಲಾಂ

ಏಜೆನ್ಸೀಸ್
Published 9 ಸೆಪ್ಟೆಂಬರ್ 2018, 5:40 IST
Last Updated 9 ಸೆಪ್ಟೆಂಬರ್ 2018, 5:40 IST
ಸೆರೆನಾ ವಿಲಿಯಮ್ಸ್‌ ಮತ್ತು ನವೊಮಿ ಒಸಾಕ
ಸೆರೆನಾ ವಿಲಿಯಮ್ಸ್‌ ಮತ್ತು ನವೊಮಿ ಒಸಾಕ   

ನ್ಯೂಯಾರ್ಕ್‌:23 ಬಾರಿ ಗ್ರ್ಯಾನ್‌ ಸ್ಲಾಂ ಪಟ್ಟ ಪಡೆದಿರುವ ಸೆರೆನಾ ವಿಲಿಯಮ್ಸ್‌ ವಿರುದ್ಧ ಜಪಾನ್‌ನ ಯುವ ಆಟಗಾರ್ತಿ ನವೊಮಿ ಒಸಾಕಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ ಕದನದಲ್ಲಿ ರೋಚಕ ಗೆಲುವು ಪಡೆದರು.

6–2, 6–4 ನೇರ ಸೆಟ್‌ಗಳಿಂದ ಸೆರೆನಾ ಅವರನ್ನು ಮಣಿಸುವ ಮೂಲಕ ಗ್ರ್ಯಾನ್‌ ಸ್ಲಾಂ ಕಿರೀಟ ಮುಡಿಗೇರಿಸಿದ ಮೊದಲ ಜಪಾನಿ ಮಹಿಳೆ ಎಂಬ ಹೆಗ್ಗಳಿಕೆಗೆ ಒಸಾಕ ಪಾತ್ರರಾದರು. ಪ್ರಾರಂಭದಿಂದಲೇ ಆಕ್ರಮಣಕಾರಿ ಆಟ ಆಡಿದ ಒಸಾಕ ಕೇವಲ 33 ನಿಮಿಷಗಳಲ್ಲಿ ಮೊದಲ ಸೆಟ್‌ ತನ್ನದಾಗಿಸಿಕೊಳ್ಳುವ ಮೂಲಕ 6 ಬಾರಿ ಅಮೆರಿಕ ಓಪನ್‌ ಚಾಂಪಿಯನ್‌ಶಿಪ್‌ ಪಡೆದಿರುವ ಸೆರೆನಾಗೆ ಆಘಾತ ನೀಡಿದರು.

ಎರಡನೇ ಸೆಟ್‌ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದ್ದು ಸೆರೆನಾ ನಿಯಮ ಉಲ್ಲಂಘಿಸಿರುವುದಾಗಿ ಅಂಪೈರ್‌ ನೀಡಿದ ತೀರ್ಪಿನಿಂದ. ಜಿದ್ದಾಜಿದ್ದಿನ ಹೋರಾಟದ ನಡುವೆ, ಸೆರೆನಾ ಅವರ ಕೋಚ್‌ ಕುಳಿತಲ್ಲಿಂದಲೇ ಸಲಹೆಗಳನ್ನು ನೀಡುತ್ತಿದ್ದಾರೆ– ಇದು ನಿಯಮ ಉಲ್ಲಂಘನೆ ಎಂದು ಪ್ರಕಟಿಸಲಾಯಿತು. ಏಕಾಏಕಿ ಕುಪಿತರಾದ ಸೆರೆನಾ ರ್‍ಯಾಕೆಟ್‌ನ್ನು ಕೋರ್ಟ್‌ ಮೇಲೆ ಬಲವಾಗಿ ಕುಕ್ಕಿದ್ದರು. ಇದೂ ಕೂಡ ನಿಯಮ ಉಲ್ಲಂಘನೆಯಾದುದರಿಂದ ಒಸಾಕ ಪಾಲಿಗೆ ಒಂದು ಪಾಯಿಂಟ್‌ ಸೇರ್ಪಡೆಯಾಯಿತು.

ADVERTISEMENT

ಈ ದಿಢೀರ್ ಬೆಳವಣಿಗೆಯನ್ನು ಸಹಿಸಿಕೊಳ್ಳದ ಸೆರೆನಾ ಚೇರ್‌ ಅಂಪೈರ್‌ ಬಳಿ ಬಂದು; ’ನಾನು ಮೋಸ ಮಾಡಿ ಗೆಲುವು ಪಡೆಯುವ ಅವಶ್ಯಕತೆ ಇಲ್ಲ, ಅದಕ್ಕಿಂತಲೂ ನಾನು ಸೋಲು ಅನುಭವಿಸುತ್ತೇನೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ವಾದದ ನಡುವೆ ಸೆರೆನಾಗೆ ಒತ್ತರಿಸಿ ಬಂದ ಕಣ್ಣೀರು ತಡೆದು ಆಟ ಮುಂದುವರಿಸಿದರು. ಈ ಎಲ್ಲವನ್ನೂ ಬಹಳ ತಣ್ಣಗೆ ನೋಡುತ್ತಿದ್ದ ಒಸಾಕ‌ ಎರಡನೇ ಸೆಟ್‌ನಲ್ಲಿಯೂ ಪಾರಮ್ಯ ಸಾಧಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೆರೆನಾ ರನ್ನರ್‌ ಅಪ್‌ ಟ್ರೋಫಿ ಪಡೆಯುವ ವೇಳೆ ಪ್ರೇಕ್ಷಕರಿಂದ ಬೂ...ಉದ್ಗಾರ ಹೆಚ್ಚಾಯಿತು. ಇದೇ ಸಂದರ್ಭದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಸೆರೆನಾ, 'ನಾನು ನಿಮಗೆಲ್ಲ ಒಂದು ಮಾತು ಹೇಳಲು ಬಯಸುತ್ತೇನೆ, ಆಕೆ ಸೊಗಸಾದ ಆಟವಾಡಿದಳು ಮತ್ತು ಇದು ಅವಳ ಮೊದಲ ಗ್ರ್ಯಾನ್‌ ಸ್ಲಾಂ. ನೀವು ಇಲ್ಲಿ ಚೀರುತ್ತಿದ್ದೀರಿ, ನಾನೂ ಸಹ. ಇದನ್ನು ಉತ್ತಮ ಸಂದರ್ಭವಾಗಿಸೋಣ. ಉದ್ಗರಿಸುವುದನ್ನು ನಿಲ್ಲಿಸೋಣ. ನವೊಮಿಗೆ ಶುಭಾಶಯಗಳು. ಇದು ನನಗೆ ಅತ್ಯಂತ ಕಠಿಣ ವರ್ಷ...' ಎಂದು ಮಾತು ಕೊನೆ ಮಾಡಿದರು.

ಕಳೆದ ವರ್ಷ ಹೆಣ್ಣು ಮಗುವಿಗೆಜನ್ಮ ನೀಡಿದ ಸೆರೆನಾ, ಈ ವರ್ಷ ಮತ್ತೆ ಅಂಗಳಕ್ಕೆ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.