ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ನೊವಾಕ್‌ ಜೊಕೊವಿಚ್‌ ಶುಭಾರಂಭ

ವಿಕ್ಟೋರಿಯಾ ಅಜರೆಂಕಾ ಪರಾಭವ

ರಾಯಿಟರ್ಸ್
Published 30 ಸೆಪ್ಟೆಂಬರ್ 2020, 15:07 IST
Last Updated 30 ಸೆಪ್ಟೆಂಬರ್ 2020, 15:07 IST
ನೊವಾಕ್‌ ಜೊಕೊವಿಚ್‌ ಆಟದ ವೈಖರಿ–ರಾಯಿಟರ್ಸ್ ಚಿತ್ರ
ನೊವಾಕ್‌ ಜೊಕೊವಿಚ್‌ ಆಟದ ವೈಖರಿ–ರಾಯಿಟರ್ಸ್ ಚಿತ್ರ   

ಪ್ಯಾರಿಸ್‌: ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್‌ ಕೊಕೊವಿಚ್‌ ಅವರು ಫ್ರೆಂಚ್‌ ಓಪನ್‌ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಮಂಗಳವಾರ ರಾತ್ರಿ ನಡೆದ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು 6–0, 6–3, 6–2ರಿಂದ ಮೈಕೆಲ್‌ ವೈಮರ್ ಎದುರು ಗೆದ್ದರು.

ಅಮೆರಿಕ ಓಪನ್‌ ಟೂರ್ನಿಯಲ್ಲಿ ತಮ್ಮ ಉದ್ವೇಗಕ್ಕೊಳಗಾಗಿ ಲೈನ್‌ ಅಂಪೈರ್‌ಗೆ ಚೆಂಡು ಹೊಡೆದು ಅನರ್ಹಗೊಂಡಿದ್ದ ಸರ್ಬಿಯಾ ಆಟಗಾರ, ಇಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು. 80ನೇ ಕ್ರಮಾಂಕದ ಸ್ವೀಡನ್‌ ಆಟಗಾರನಿಗೆ ಸುಲಭವಾಗಿ ಸೋಲುಣಿಸಿದರು.

ಮೂರನೇ ಸುತ್ತಿಗೆ ಸ್ವಿಟೊಲಿನಾ: ಮೂರನೇ ಶ್ರೇಯಾಂಕದ ಆಟಗಾರ್ತಿ ಎಲಿನಾ ಸ್ವಿಟೊಲಿನಾ ಟೂರ್ನಿಯ ಮೂರನೇ ಸುತ್ತಿಗೆ ಕಾಲಿಟ್ಟರು. ಬುಧವಾರ ಎರಡನೇ ಸುತ್ತಿನ ಸೆಣಸಾಟದಲ್ಲಿ ಅವರು 6–3, 0–6, 6–2ರಿಂದ ಅರ್ಹತಾ ಸುತ್ತಿನಿಂದ ಬಂದ ಆಟಗಾರ್ತಿ ಮೆಕ್ಸಿಕೊದ ರೆನೆಟಾ ಜರಾಜುವಾ ಎದುರು ಗೆದ್ದರು.

ADVERTISEMENT

ವಿಶ್ವ ಕ್ರಮಾಂಕದಲ್ಲಿ 178ನೇ ಸ್ಥಾನದಲ್ಲಿರುವ ಜರಾಜುವಾ ಎರಡನೇ ಸೆಟ್‌ ಗೆದ್ದುಕೊಂಡು ಸ್ವಿಟೋಲಿನಾ ಅವರಲ್ಲಿ ಆತಂಕ ಮೂಡಿಸಿದ್ದರು. ಆದರೆ ಸ್ವಿಟೊಲಿನಾ ಬಳಿಕ ಪಾರಮ್ಯ ಮೆರೆದರು.

ಅಜರೆಂಕಾ ಪರಾಭವ: ಪ್ಯಾರಿಸ್‌ನ ಚಳಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಪರದಾಡುತ್ತಿದ್ದ ಬೆಲಾರಸ್‌ನ ವಿಕ್ಟೋರಿಯಾಅಜರೆಂಕಾ ಅವರ ಅಭಿಯಾನ ಕೊನೆಗೊಂಡಿತು. ಬುಧವಾರ ನಡೆದ ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 2–6, 2–6ರಿಂದ ಸ್ಲೋವಾಕಿಯಾದ ಅನ್ನಾ ಕರೋಲಿನಾ ಸ್ಮಿಡ್ಲೊವಾ ಅವರಿಗೆ ಮಣಿದರು.

ಅಜರೆಂಕಾ ಅವರು ಈ ಬಾರಿಯ ಅಮೆರಿಕ ಓಪನ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದರು.ಮೊದಲ ಸುತ್ತಿನ ಹಣಾಹಣಿಯಲ್ಲಿ ಸ್ಮಿಡ್ಲೊವಾ ಅವರು ವೀನಸ್‌ ವಿಲಿಯಮ್ಸ್ ಅವರಿಗೆ ಸೋಲುಣಿಸಿದ್ದರು.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಮಂಗಳವಾರ ಕ್ರಿಸ್ಟಿಯನ್‌ ಗರಿನ್‌ ಅವರು 6–4, 4–6, 6–1, 6–4ರಿಂದ ಫಿಲಿಪ್‌ ಕೋಹ್ಲ್‌ಶ್ರೆಬರ್‌ ವಿರುದ್ಧ, ಡೆನಿಸ್‌ ಶಪವಲೊವ್‌ 6–2, 7–5, 5–7ರಿಂದ ಗಿಲ್ಲೆಸ್‌ ಸಿಮೊನ್‌ ಎದುರು ಜಯದ ನಗೆ ಬೀರಿದರು.

ವಿಮಾನದ ಭಾರಿ ಸಪ್ಪಳಕ್ಕೆ ಆಟಗಾರ ಗಲಿಬಿಲಿ: ಯುದ್ಧ ವಿಮಾನವೊಂದು ಹೊರಡಿಸಿದ ಭಾರೀ ಶಬ್ಧವು‌ ಅಂಗಣದಲ್ಲಿ ಸರ್ವ್‌ ಮಾಡಲು ಮುಂದಾಗಿದ್ದ ಆಟಗಾರನೊಬ್ಬನ್ನು ಗಲಿಬಿಲಿಗೊಳಿಸಿತು. ಪಶ್ಚಿಮ ಪ್ಯಾರಿಸ್‌ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಈ ಸಪ್ಪಳವು ಆತಂಕಕ್ಕೂ ಕಾರಣವಾಗಿತ್ತು. ಜನರನ್ನು ಸ್ಥಳಾಂತರಿಸುವ ಸಾಧ್ಯತೆಯೊಂದಿಗೆ ಪೊಲೀಸರು ಅಂಗಣವನ್ನು ಸುತ್ತುವರಿದಿದ್ದರು. ಆದರೆ ಘಟನೆಗೆ ನಿಜವಾದ ಕಾರಣ ತಿಳಿದಾಗ ಪೊಲೀಸರು ನಿಟ್ಟುಸಿರುಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.