ADVERTISEMENT

ವಿಂಬಲ್ಡನ್‌: ಜಬೇರ್ ಸೆಮಿಫೈನಲ್ ತಲುಪಿದ ಮೊದಲ ಅರಬ್ ಮಹಿಳೆ

ಏಜೆನ್ಸೀಸ್
Published 6 ಜುಲೈ 2022, 13:04 IST
Last Updated 6 ಜುಲೈ 2022, 13:04 IST
ಆನ್ಸ್ ಜಬೇರ್ ಆಟದ ಪರಿ– ಎಎಫ್‌ಪಿ ಚಿತ್ರ
ಆನ್ಸ್ ಜಬೇರ್ ಆಟದ ಪರಿ– ಎಎಫ್‌ಪಿ ಚಿತ್ರ   

ವಿಂಬಲ್ಡನ್‌: ಟ್ಯುನಿಷಿಯಾ ಆಟಗಾರ್ತಿ ಆನ್ಸ್ ಜಬೇರ್ ವಿಂಬಲ್ಡನ್ ಟೆನಿಸ್‌ ಟೂರ್ನಿಯಲ್ಲಿ ಚಾರಿತ್ರಿಕ ಸಾಧನೆ ಮಾಡಿದರು. ಇಲ್ಲಿ ನಡೆಯುತ್ತಿರುವ ಟೂರ್ನಿಯ ಸೆಮಿಫೈನಲ್ ತಲುಪುವ ಮೂಲಕ ಈ ಸಾಧನೆ ಮಾಡಿದ ಮೊದಲ ಅರಬ್ ಮಹಿಳೆ ಎನಿಸಿಕೊಂಡರು.

ಮೂರನೇ ಶ್ರೇಯಾಂಕದ ಜಬೇರ್‌, ಇಲ್ಲಿಯ ಸೆಂಟರ್‌ಕೋರ್ಟ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಎಂಟರಘಟ್ಟದ ಹಣಾಹಣಿಯಲ್ಲಿ3-6, 6-1, 6-1ರಿಂದ ಜೆಕ್‌ ಗಣರಾಜ್ಯದ ಮರಿಯಾ ಬೊಜ್ಕೊವಾ ಅವರನ್ನು ಮಣಿಸಿದರು. ಕಳೆದ ವರ್ಷ ಇಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಜಬೇರ್ ತಮ್ಮ ಸಾಧನೆ ಉತ್ತಮಪಡಿಸಿಕೊಂಡರು.

‘ಅರಬ್ಬರು ಯಾವಾಗಲೂ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುವರು ಎಂಬ ಮಾತಿದೆ. ಆ ಸಂಪ್ರದಾಯವನ್ನು ನೀನು ಮುರಿಯಬೇಕು ಎಂದು ಹಿಚಾಮ್ ಅರಾಜಿ (ಮೊರಕ್ಕೊದ ಮಾಜಿ ಆಟಗಾರ) ನನಗೆ ಹೇಳಿದ್ದರು. ಈ ಹಂತಕ್ಕೆ ತಲುಪುತ್ತೇನೆಂಬ ಎಂಬ ವಿಶ್ವಾಸವಿತ್ತು‘ ಎಂದು ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಜಬೇರ್ ಹೇಳಿದ್ದಾರೆ.

ADVERTISEMENT

ಸೆಮಿಫೈನಲ್‌ನಲ್ಲಿ ಜಬೇರ್‌, ಜರ್ಮನಿಯ ತತಿಯಾನ ಮರಿಯಾ ಅವರಿಗೆ ಮುಖಾಮುಖಿಯಾಗುವರು. 34 ವರ್ಷ ತತಿಯಾನ ಮಂಗಳವಾರ ತಮ್ಮದೇ ದೇಶದ ಜೂಲ್‌ ನಿಮಿಯರ್ ಎದುರು ಗೆದ್ದಿದ್ದರು. ಗ್ರ್ಯಾನ್‌ಸ್ಲಾಮ್‌ನಲ್ಲಿ 35ನೇ ಬಾರಿ ಸ್ಪರ್ಧಿಸಿರುವ ಅವರು ಮೊದಲ ಬಾರಿ ಸೆಮಿಫೈನಲ್‌ ತಲುಪಿದ ಶ್ರೇಯ ಗಳಿಸಿದ್ದರು.

ಜಬೇರ್ 2020ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌ ತಲುಪುವ ಮೂಲಕ ಆ ಗೌರವ ಗಳಿಸಿದ,2021ರಲ್ಲಿ ಅಗ್ರ 10 ರ‍್ಯಾಂಕಿಂಗ್‌ ಪಟ್ಟಿಯೊಳಗೆ ಸ್ಥಾನ ಗಳಿಸಿದ ಮೊದಲ ಅರಬ್‌ ಮಹಿಳೆ ಎನಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.