ADVERTISEMENT

PV Web Exclusive: ಮತ್ತೊಮ್ಮೆ ಪಟ್ಟಾಭಿಷೇಕದತ್ತ ‘ಪ್ಯಾರಿಸ್ ರಾಜ’

ವಿಕ್ರಂ ಕಾಂತಿಕೆರೆ
Published 30 ಮೇ 2021, 9:31 IST
Last Updated 30 ಮೇ 2021, 9:31 IST
ರಫೆಲ್ ನಡಾಲ್
ರಫೆಲ್ ನಡಾಲ್   

ಕೊರೊನಾ ಆತಂಕದ ನಡುವೆಯೇ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌, ದಾಖಲೆಗಳ ಪಂದ್ಯವಾಗಿತ್ತು. ಆಟಗಾರನೊಬ್ಬನ ನೂರನೇ ಜಯ, ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಅತಿ ಹೆಚ್ಚು ಬಾರಿ ಸಿಂಗಲ್ಸ್ ಪ್ರಶಸ್ತಿಯ ಗರಿ, ಆಟಗಾರನೊಬ್ಬನ ಗರಿಷ್ಠ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಗೆಲುವು ಸರಿಗಟ್ಟಿದ ಸಾಧನೆ, ಒಂದೂ ಸೆಟ್ ಸೋಲದೆ ಆಟಗಾರನೊಬ್ಬನಿಗೆ ನಾಲ್ಕು ಬಾರಿ ಪ್ರಶಸ್ತಿ ಮುಂತಾದ ದಾಖಲೆಗಳು ಅಲ್ಲಿ ಮೂಡಿದ್ದವು.

ಈ ಎಲ್ಲ ದಾಖಲೆಗಳ ಒಡೆಯ ಒಬ್ಬರೇ ಆಗಿದ್ದರು. ಅವರು ಆವೆಮಣ್ಣಿನ ಅಂಗಣದ ರಾಜ ಸ್ಪೇನ್‌ನ ರಫೆಲ್ ನಡಾಲ್. ಫೈನಲ್‌ನಲ್ಲಿ ನಡಾಲ್‌ಗೆ ಎದುರಾಳಿಯಾಗಿದ್ದ ಸರ್ಬಿಯಾದ ನೊವಾಕ್ ಜೊಕೊವಿಚ್ ಕೂಡ ದಾಖಲೆಯ ಕನಸು ಹೊತ್ತು ಕಣಕ್ಕೆ ಇಳಿದಿದ್ದರು. ಆ ಪಂದ್ಯದಲ್ಲಿ ಗೆದ್ದಿದ್ದರೆ ಎಲ್ಲ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಖ್ಯಾತಿ ಅವರದಾಗುತ್ತಿತ್ತು. ಆದರೆ ಛಲಗಾರ ನಡಾಲ್ ಎದುರು ಜೊಕೊವಿಚ್ ಕನಸು ಭಗ್ನಗೊಂಡಿತು.

ಈ ಬಾರಿಯೂ ಜೊಕೊವಿಚ್, ರೋಜರ್ ಫೆಡರರ್‌, ಸ್ಟೆಫನೊಸ್ ಸಿಸಿಪಸ್‌, ಅಲೆಕ್ಸಾಂಡರ್ ಜ್ವೆರೆವ್, ಡ್ಯಾನಿಯಲ್ ಮೆಡ್ವೆಡೆವ್‌ ಮುಂತಾದ ಘಟಾನುಘಟಿ ಆಟಗಾರರು ಕಣದಲ್ಲಿದ್ದಾರೆ. ಆದರೆ ರಫೆಲ್ ನಡಾಲ್ ಅವರನ್ನು ಮಣಿಸಿ ಮುನ್ನುಗ್ಗುವ ಛಾತಿ ಇರುವವರು ಯಾರು ಎಂಬ ಕುತೂಹಲಭರಿತ ಸಂದೇಹ ಆಗಲೇ ಟೆನಿಸ್‌ಪ್ರಿಯರಲ್ಲಿ ಮೂಡಿದೆ.

ADVERTISEMENT

ಕಳೆದ ಬಾರಿ ದಾಖಲೆಯ 13ನೇ ಪ್ರಶಸ್ತಿ ಗೆದ್ದ ನಡಾಲ್ ಫ್ರೆಂಚ್ ಓಪನ್‌ನಲ್ಲಿ ನೂರನೇ ಜಯ ಗಳಿಸಿದ ಸಾಧನೆಯನ್ನೂ ಮಾಡಿದ್ದರು. ಅತಿಹೆಚ್ಚು, 20 ಬಾರಿ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ಫೆಡರರ್ ದಾಖಲೆಯನ್ನೂ ಸರಿಗಟ್ಟಿದ್ದರು.

ಈ ಬಾರಿಯೂ ನಡಾಲ್ ದಾಖಲೆಗಳ ಬೆನ್ನುಹತ್ತಿ ಫ್ರೆಂಚ್ ಓಪನ್ ಅಂಗಣಕ್ಕೆ ಇಳಿದಿದ್ದಾರೆ. ಈ ಋತುವಿನ ಆರಂಭ ಅವರಿಗೆ ಪೂರಕವಾಗಿರಲಿಲ್ಲ. ಎಟಿಪಿ ಟೂರ್ನಿಗಳಲ್ಲಿ ಕೂಡ ನಿರೀಕ್ಷಿತ ಸಾಧನೆ ಮಾಡಲಾಗದೆ ನಿರಾಸೆ ಅನುಭವಿದ್ದರು. ಆದರೆ ಫ್ರೆಂಚ್ ಓಪನ್‌ ಟೂರ್ನಿಗೂ ಮೊದಲು ನಡೆದ ರೋಮ್ ಓಪನ್‌ನಲ್ಲಿ ಲಯ ಕಂಡುಕೊಂಡಿದ್ದರು. ಇದು ಕಳೆದ ವರ್ಷದ ಪುನರಾವರ್ತನೆಯಂತೆ ಕಂಡರೂ ಅಚ್ಚರಿ ಇಲ್ಲ. ಹೋದ ಬಾರಿಯೂ ಅವರ ಆರಂಭ ಅಷ್ಟೇನೂ ಚೆನ್ನಾಗಿರಲಿಲ್ಲ. ನಂತರ ಚೇತರಿಸಿಕೊಂಡು ರೊಲ್ಯಾಂಡ್ ಗ್ಯಾರೋಸ್‌ಗೆ ಬರುವಷ್ಟರಲ್ಲಿ ಮರಳಿ ಅರಳಿದ್ದರು.

ಫ್ರೆಂಚ್ ಓಪನ್‌ನಲ್ಲಿ 14ನೇ ಪ್ರಶಸ್ತಿ ಎಂಬುದು ಯಾವುದೇ ಆಟಗಾರನಿಗೂ ಕನಸು ಕಾಣುವುದಕ್ಕೂ ಸಾಧ್ಯವಾಗದ ಸಾಧನೆ. ಆದರೆ ಅದನ್ನು ಸಾಧಿಸಿ ತೋರಿಸಲು ನಡಾಲ್ ಪ್ಯಾರಿಸ್‌ಗೆ ಬಂದಿಳಿದಿದ್ದಾರೆ. 21 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ಆಟಗಾರ ಎಂಬ ಕಿರೀಟ ಮುಡಿಗೇರಿಸಿಕೊಳ್ಳುವ ಭರವಸೆಯೂ ಅವರಲ್ಲಿದೆ.

ಕಳೆದ ಬಾರಿ ಮೊತ್ತಮೊದಲ ಸಲ ಫ್ರೆಂಚ್ ಓಪನ್ ಟೂರ್ನಿಯನ್ನು ಡಿಸೆಂಬರ್‌ನಲ್ಲಿ ಆಯೋಜಿಸಲಾಗಿತ್ತು. ಆದರೆ ನಡಾಲ್ ಮೇಲೆ ಹವಾಮಾನ ಯಾವುದೇ ರೀತಿಯ ಪರಿಣಾಮ ಬೀರಿರಲಿಲ್ಲ. ಈ ಬಾರಿ ಮತ್ತೆ ಬೇಸಿಗೆಯಲ್ಲಿ ಟೂರ್ನಿ ನಡೆಯುತ್ತಿದೆ. ‘ಪ್ಯಾರಿಸ್ ರಾಜ’ನಿಗೆ ಅಲ್ಲಿನ ಬಿಸಿಲ ಝಳ ಕೂಡ ತಂಪು ನೀಡುವ ಸಾಧ್ಯತೆ ಇದೆ.

ಪ್ರೆಂಚ್‌ ಓಪನ್‌ನಲ್ಲಿ ನಡಾಲ್‌ಗೆ ಸಮರ್ಥ ಪ್ರತಿಸ್ಪರ್ಧಿ ನೊವಾಕ್ ಜೊಕೊವಿಚ್‌. ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದ್ದರೂ ಅವರು ಈಗ ಮೊದಲಿನ ಫಾರ್ಮ್‌ನಲ್ಲಿಲ್ಲ. ಟೂರ್ನಿ ಆರಂಭಕ್ಕೆ ಒಂದು ದಿನ ಮೊದಲು ತವರಿನಲ್ಲಿ ನಡೆದ ಬೆಲ್‌ಗ್ರೇಡ್ ಓಪನ್‌ ಫೈನಲ್‌ನಲ್ಲಿ ಜೊಕೊವಿಚ್ ಪ್ರಯಾಸದಿಂದ ಜಯ ಗಳಿಸಿದ್ದರು.

ಈ ಬಾರಿ ನಡಾಲ್ ಮತ್ತು ಜೊಕೊವಿಚ್ ಫೈನಲ್‌ಗೆ ಮೊದಲೇ ಮುಖಾಮುಖಿಯಾಗುವ ಸಾಧ್ಯತೆ ಇದೆ. ಆರಂಭಿಕ ಸುತ್ತುಗಳಲ್ಲಿ ಗೆಲ್ಲುತ್ತ ಸಾಗಿದರೆ ಇವರಿಬ್ಬರು ನಾಲ್ಕರ ಘಟ್ಟದಲ್ಲಿ ಮುಖಾಮುಖಿ ಆಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ ಫೈನಲ್‌ಗೆ ಮೊದಲೇ ಮತ್ತೊಂದು ’ಫೈನಲ್‌‘ಗೆ ವೇದಿಕೆ ಸಜ್ಜಾಗುವುದು ಖಚಿತ.

ನಡಾಲ್ ಭವಿಷ್ಯ ಅಲ್ಲೇ ನಿರ್ಧಾರವಾಗಲಿದೆ. ಆದರೆ ಅವರು ಫೈನಲ್‌ ಪ್ರವೇಶಿಸುವುದರಲ್ಲೂ ಪ್ರಶಸ್ತಿ ಗೆಲ್ಲುವುದರಲ್ಲೂ ದಾಖಲೆ ಬರೆಯುವುದರಲ್ಲೂ ಸಂದೇಹ ಇಲ್ಲ ಎಂದೇ ಟೆನಿಸ್ ಪ್ರಿಯರು ಭರವಸೆ ಇರಿಸಿಕೊಂಡಿದ್ದಾರೆ.

‘ಈ ಬಾರಿಯೂ ರಫೆಲ್ ನಡಾಲ್ ಅವರೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ’ ಎಂಬ ಎರಡು ಬಾರಿಯ ಚಾಂಪಿಯನ್ ಹಾಗೂ ಟೆನಿಸ್ ಚಾನಲ್‌ನ ನಿರೂಪಕ ಜಿಮ್ ಕೊರಿಯರ್ ಅವರ ಹೇಳಿಕೆಗೆ ಪೂರಕವಾಗಿ ನಡಾಲ್ ಮತ್ತೆ ಚಾಂಪಿಯನ್ ಪಟ್ಟಕ್ಕೇರುವರೇ....ಎರಡು ವಾರಗಳ ಆಟದಲ್ಲಿ ಇದಕ್ಕೆ ಉತ್ತರ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.