
ರೋಹನ್ ಬೋಪಣ್ಣ
-ಪಿಟಿಐ ಚಿತ್ರ
ನವದೆಹಲಿ: ಹಿರಿಯ ಟೆನಿಸ್ ತಾರೆ ರೋಹನ್ ಬೋಪಣ್ಣ ಅವರು 22 ವರ್ಷಗಳ ವೃತ್ತಿಪರ ಆಟಕ್ಕೆ ಶನಿವಾರ ವಿದಾಯ ಘೋಷಿಸಿದರು. ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ದೇಶದ ನಾಲ್ವರು ಆಟಗಾರರಲ್ಲಿ ಬೋಪಣ್ಣ ಒಬ್ಬರು.
ಡಬಲ್ಸ್ ಪರಿಣತರಾದ 45 ವರ್ಷ ವಯಸ್ಸಿನ ಬೋಪಣ್ಣ ಹೋದ ಭಾನುವಾರ ಪ್ಯಾರಿಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಕೊನೆಯ ಬಾರಿಗೆ ಆಡಿದ್ದರು. ಕಜಾಕಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಜೊತೆಗೂಡಿ ಆಡಿದ ಅವರು 32ರ ಸುತ್ತಿನಲ್ಲಿ ಸೋತಿದ್ದರು.
‘ಎ ಗುಡ್‌ಬೈ, ಬಟ್ ನಾಟ್ ದ ಎಂಡ್...’ ಶೀರ್ಷಿಕೆಯಡಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ನಿವೃತ್ತಿ ನಿರ್ಧಾರದ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದಾರೆ. ‘ನಾನು ಅಧಿಕೃತವಾಗಿ ವಿದಾಯ ಹೇಳುತ್ತಿದ್ದೇನೆ. ಬದುಕಿಗೆ ಅರ್ಥ ನೀಡಿದ ಈ ಆಟಕ್ಕೆ ವಿದಾಯ ಹೇಳುವುದಾದರೂ ಹೇಗೆ? ಟೂರ್‌ನಲ್ಲಿ ಮರೆಯಲಾಗದ 20 ವರ್ಷಗಳು. ಆದರೆ ಈಗ ಕಾಲ ಕೂಡಿಬಂದಿದೆ....’ ಎಂದು ಅವರು ಬರೆದಿದ್ದಾರೆ.
‘ಕೊಡಗಿನ ಸಣ್ಣ ಊರಿನಿಂದ ಈ ಪಯಣ ಆರಂಭವಾಯಿತು. ತಾಕತ್ತು ಹೆಚ್ಚಿಸಲು ಕಾಫಿ ಎಸ್ಟೇಟುಗಳಲ್ಲಿ ಜಾಗಿಂಗ್ ಮಾಡುತ್ತ, ಬಿರುಕಾಗಿದ್ದ ಅಂಕಣಗಳಲ್ಲಿ ಆಡಿ ಕನಸುಗಳನ್ನು ಬೆಂಬತ್ತಿ, ಜಗತ್ತಿನ ಅತಿ ದೊಡ್ಡ ಅರೇನಾಗಳಲ್ಲಿ ಹೊನಲುಬೆಳಕಿನಡಿ ನಿಲ್ಲುವ ಅವಕಾಶ. ಎಲ್ಲವೂ ಅತಿವಾಸ್ತವದಂತೆ ಭಾಸವಾಗುತ್ತಿದೆ’ ಎಂದೂ ಬರೆದಿದ್ದಾರೆ.
ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕೊನೆಯ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2023ರಲ್ಲಿ ಲಖನೌದಲ್ಲಿ ಮೊರಾಕೊ ವಿರುದ್ಧ ತಮ್ಮ ಕೊನೆಯ ಡೇವಿಸ್ ಕಪ್ ಪಂದ್ಯ ಆಡಿದ್ದರು.
‘ಬೋಪ್ಸ್’, ‘ಬೋಪ್ಸಿ’ ಎಂದು ಆಪ್ತ ವಲಯದಲ್ಲಿ ಕರೆಸಿಕೊಳ್ಳುತ್ತಿದ್ದ ಅವರು, ತಮ್ಮ ವೃತ್ತಿ ಜೀವನದುದ್ದಕ್ಕೂ ಬೆಂಬಲ ನೀಡಿದ ಕುಟುಂಬವನ್ನೂ ನೆನಪಿಸಿಕೊಂಡಿದ್ದಾರೆ.
2003ರಲ್ಲಿ ವೃತ್ತಿಜೀವನ ಆರಂಭಿಸಿದ ಅವರು ಭಾರತದ ಅತಿ ಯಶಸ್ವಿ ಡಬಲ್ಸ್ ಆಟಗಾರರಾಗಿ ಗುರುತಿಸಿಕೊಂಡರು. ಎಟಿಪಿ ಟೂರ್‌ಗಳಲ್ಲಿ ಪ್ರಬಲ ಸರ್ವ್, ಬತ್ತದ ಉತ್ಸಾಹದಿಂದ ಪ್ರಸಿದ್ಧರಾದವರು. ಭಾರತ ತಂಡವನ್ನು ಡೇವಿಸ್ ಕಪ್, ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ, ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಿದ್ದಾರೆ.
2017ರಲ್ಲಿ ಕೆನಡಾದ ದಬ್ರೋವ್‌ಸ್ಕಿ ಜೊತೆಗೂಡಿ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್‌ನಲ್ಲಿ ಮೊದಲ ಪ್ರಶಸ್ತಿ ಗೆದ್ದಿದ್ದರು. ಪುರುಷರ ಡಬಲ್ಸ್‌ನಲ್ಲಿ ಏಕೈಕ ಪ್ರಶಸ್ತಿಯನ್ನು ಆಸ್ಟ್ರೇಲಿಯಾ ಓಪನ್‌ನಲ್ಲಿ (2024) ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಜಯಿಸಿದ್ದರು. ಮಯಾಮಿಯಲ್ಲಿ 43ನೇ ವಯಸ್ಸಿನಲ್ಲಿ (2023ರಲ್ಲಿ) ಎಬ್ಡೆನ್ ಜೊತೆಗೆ ತಮ್ಮ ಮೊದಲ ಎಟಿಪಿ ಮಾಸ್ಟರ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡ ಅತಿ ಹಿರಿಯ ಆಟಗಾರ ಎನಿಸಿದ್ದರು.
ಬೋಪಣ್ಣ ಅವರು ಅಮೆರಿಕ ಓಪನ್ ಡಬಲ್ಸ್‌ನಲ್ಲಿ ಎರಡು ಬಾರಿ (2010, 2023) ರನ್ನರ್ ಅಪ್ ಆಗಿದ್ದಾರೆ. ಜೊತೆಗೆ ಫ್ರೆಂಚ್ ಓಪನ್ (2022, 2024) ಮತ್ತು ವಿಂಬಲ್ಡನ್‌ನಲ್ಲಿ (2013, 2015, 2023) ಸೆಮಿಫೈನಲ್ ತಲುಪಿದ ಸಾಧನೆ ಅವರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.