ADVERTISEMENT

Australian Open 2025 | ಶ್ವಾಂಟೆಕ್‌ಗೆ ಮ್ಯಾಡಿಸನ್ ಆಘಾತ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಹ್ಯಾಟ್ರಿಕ್‌ ಪ್ರಶಸ್ತಿಯತ್ತ ಸಬಲೆಂಕಾ

ಪಿಟಿಐ
Published 23 ಜನವರಿ 2025, 15:24 IST
Last Updated 23 ಜನವರಿ 2025, 15:24 IST
<div class="paragraphs"><p>ಸಬಲೆಂಕಾ</p></div>

ಸಬಲೆಂಕಾ

   

(ರಾಯಿಟರ್ಸ್ ಚಿತ್ರ)

ಮೆಲ್ಬರ್ನ್‌: ಬೆಲರೂಸ್‌ ಅರಿನಾ ಸಬಲೆಂಕಾ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿ, ಹ್ಯಾಟ್ರಿಕ್‌ ಪ್ರಶಸ್ತಿಗೆ ಮತ್ತಷ್ಟು ಹತ್ತಿರವಾದರು. ಮತ್ತೊಂದೆಡೆ, ಅಮೆರಿಕದ ಮ್ಯಾಡಿಸನ್ ಕೀಸ್ ಅವರು ಪೋಲೆಂಡ್‌ನ ಇಗಾ ಶ್ವಾಂಟೆಕ್‌ಗೆ ಆಘಾತ ನೀಡಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದರು.

ADVERTISEMENT

ರಾಡ್ ಲೇವರ್ ಅರೇನಾದಲ್ಲಿ ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಸಬಲೆಂಕಾ 6-4, 6-2ರಿಂದ ತನ್ನ ಸ್ನೇಹಿತೆ 11ನೇ ಶ್ರೇಯಾಂಕದ ಪಾಲ್ ಬಡೋಸಾ (ಸ್ಪೇನ್‌) ಅವರನ್ನು ನಿರಾಯಾಸವಾಗಿ ಮಣಿಸಿದರು.

26 ವರ್ಷ ವಯಸ್ಸಿನ ಸಬಲೆಂಕಾ ಅವರು ತನ್ನ ನೆಚ್ಚಿನ ಮೆಲ್ಬರ್ನ್‌ ಪಾರ್ಕ್‌ನಲ್ಲಿ ಅಜೇಯ ಓಟವನ್ನು 20 ಪಂದ್ಯಗಳಿಗೆ ವಿಸ್ತರಿಸಿ, ಸತತ ಮೂರನೇ ಬಾರಿ ಫೈನಲ್‌ ತಲುಪಿದರು. ಶನಿವಾರ ನಡೆಯುವ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ 19ನೇ ಶ್ರೇಯಾಂಕದ ಮ್ಯಾಡಿಸನ್ ಅವರ ಸವಾಲನ್ನು ಎದುರಿಸಲಿದ್ದಾರೆ.

ಸಬಲೆಂಕಾ ಹ್ಯಾಟ್ರಿಕ್‌ ಕಿರೀಟ ಮುಡಿಗೇರಿಸಿಕೊಂಡರೆ ಈ ಸಾಧನೆ ಮಾಡಿದ ಆರನೇ ಆಟಗಾರ್ತಿ ಎಂಬ ಹಿರಿಮೆಗೆ ಅವರು ಪಾತ್ರವಾಗುವರು. ಅಲ್ಲದೆ, ಈ ಶತಮಾತನ ಮೊದಲ ಆಟಗಾರ್ತಿ ಎಂಬ ದಾಖಲೆ ಅವರದಾಗಲಿದೆ. ಸ್ವಿಟ್ಜರ್ಲೆಂಡ್ ಮಾರ್ಟಿನಾ ಹಿಂಗಿಸ್ (1997, 1998, 1999) ಕೊನೆಯ ಬಾರಿ ಸತತ ಮೂರು ಬಾರಿ ಚಾಂಪಿಯನ್‌ ಆಗಿದ್ದರು. ಅದಕ್ಕೂ ಮೊದಲು ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್, ಇವೊನ್ನೆ ಗೂಲಾಗಾಂಗ್, ಜರ್ಮನಿಯ ಸ್ಟೆಫಿ ಗ್ರಾಫ್ ಮತ್ತು ಅಮೆರಿಕದ ಮೋನಿಕಾ ಸೆಲೆಸ್ ಅವರು ಹ್ಯಾಟ್ರಿಕ್‌ ಸಾಧನೆ ಮೆರೆದಿದ್ದರು. ಸಬಲೆಂಕಾ ಅವರ ಆಟವನ್ನು ಟೆನಿಸ್‌ ದಂತಕಥೆ ಮಾರ್ಗರೇಟ್ ಕೋರ್ಟ್ ಗುರುವಾರ ಕಣ್ತುಂಬಿಕೊಂಡರು.

‘ನನ್ನ ಆಟದ ಬಗ್ಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಶಕ್ತಿ ನೀಡುತ್ತಿರುವ ನನ್ನ ತಂಡಕ್ಕೆ ಅಭಾರಿಯಾಗಿದ್ದೇನೆ. ಇಲ್ಲಿ ಹೊಸ ಇತಿಹಾಸ ನಿರ್ಮಿಸಲು ಸಾಧ್ಯವಾದರೆ ಅದು ನನಗೆ ಸಿಗುವ ದೊಡ್ಡ ಗೌರವ’ ಎಂದು ಸಬಲೆಂಕಾ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

ಕಳೆದ ವರ್ಷದ ಬಡೋಸಾ ಅವರನ್ನು ಆಪ್ತ ಸ್ನೇಹಿತೆ ಎಂದು ಬಣ್ಣಿಸಿದ್ದ ಸಬಲೆಂಕಾ, ‘ಇಂತಹ ದೊಡ್ಡ ವೇದಿಕೆಯಲ್ಲಿ ನಾವು ಮುಖಾಮುಖಿಯಾಗಿದಕ್ಕೆ ಖುಷಿಯಾಗಿದೆ. ಆಕೆ ಈಗಲೂ ನನ್ನ ಸ್ನೇಹಿತೆ ಎಂದು ಭಾವಿಸುತ್ತೇನೆ’ ಎಂದರು.

ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಮೊದಲ ಬಾರಿ ಸೆಮಿಫೈನಲ್‌ ತಲುಪಿದ್ದ 27 ವರ್ಷ ವಯಸ್ಸಿನ ಬಡೋಸಾ ಕಳೆದ ವರ್ಷ ಟೆನಿಸ್‌ ಬದುಕಿಗೆ ವಿದಾಯ ಹೇಳುವ ಯೋಚನೆ ಮಾಡಿದ್ದರು. ಬೆನ್ನುನೋವಿಗೆ ತುತ್ತಾಗಿದ್ದ ಅವರು ಹಲವು ತಿಂಗಳು ವಿರಾಮ ಪಡೆದು, ಸ್ಪರ್ಧಾ ಕಣಕ್ಕೆ ಮರಳಿದ್ದರು.

ಶ್ವಾಂಟೆಕ್‌ಗೆ ಆಘಾತ: ಐದು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳಿಗೆ ಒಡತಿಯಾಗಿರುವ ಶ್ವಾಂಟೆಕ್‌ ಅವರಿಗೆ ಈ ಬಾರಿಯೂ ಸೆಮಿಫೈನಲ್‌ ದಾಟಲು ಸಾಧ್ಯವಾಗಲಿಲ್ಲ. 29 ವರ್ಷ ವಯಸ್ಸಿನ ಮ್ಯಾಡಿಸನ್ 5-7, 6-1, 7-6 (10-8)ರ ಮೂರು ಸೆಟ್‌ಗಳ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ಶ್ವಾಂಟೆಕ್‌ ಅವರನ್ನು ಹಿಮ್ಮೆಟ್ಟಿಸಿದರು.

ಇಲ್ಲಿ ಫೈನಲ್‌ ಪ್ರವೇಶಿಸುವ ನೆಚ್ಚಿನ ಸ್ಪರ್ಧಿಯಾಗಿದ್ದ ಶ್ವಾಂಟೆಕ್‌ ಉತ್ತಮ ಆರಂಭವನ್ನೂ ಪಡೆದಿದ್ದರು. ಮೊದಲ ಸೆಟ್‌ ನಿರಾಯಾಸವಾಗಿ ವಶಮಾಡಿಕೊಂಡ ಅವರು, ಎರಡನೇ ಸೆಟ್‌ನಲ್ಲಿ ಮುಗ್ಗರಿಸಿದರು. ರೋಚಕವಾಗಿ ಸಾಗಿದ ನಿರ್ಣಾಯಕ ಸೆಟ್‌ನಲ್ಲಿ ಶ್ವಾಂಟೆಕ್‌ ಗೆಲುವಿಗೆ ಒಂದೇ ಪಾಯಿಂಟ್‌ ದೂರದಲ್ಲಿದ್ದರು. ಈ ಹಂತದಲ್ಲಿ ಎಸಗಿದ ತಪ್ಪು ಅವರಿಗೆ ದುಬಾರಿಯಾಯಿತು. ಆ ಸೆಟ್‌ ಅನ್ನು ಟೈಬ್ರೇಕ್‌ನಲ್ಲಿ ಗೆದ್ದುಕೊಂಡ ಮ್ಯಾಡಿಸನ್‌, ಎಂಟು ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ಫೈನಲ್‌ ಪ್ರವೇಶಿಸಿದರು. ಚೊಚ್ಚಲ ಪ್ರಶಸ್ತಿಯನ್ನು ಎದುರು ನೋಡುತ್ತಿರುವ ಅವರು 2017ರ ಅಮೆರಿಕ ಓಪನ್‌ನಲ್ಲಿ ರನ್ನರ್‌ ಅಪ್‌ ಆಗಿದ್ದರು.

ನಾಲ್ಕು ಬಾರಿ ಫ್ರೆಂಚ್‌ ಓಪನ್‌ ಮತ್ತು ಒಂದು ಬಾರಿ ಅಮೆರಿಕ ಓಪನ್‌ ಕಿರೀಟ ಮುಡಿಗೇರಿಸಿಕೊಂಡಿರುವ ಶ್ವಾಂಟೆಕ್‌ ಮೆಲ್ಬರ್ನ್‌ನಲ್ಲಿ ಎರಡನೇ ಬಾರಿ ಸೆಮಿಫೈನಲ್‌ ತಲುಪಿದ್ದರು. 2022ರಲ್ಲೂ ಅವರು ಇದೇ ಹಂತದಲ್ಲಿ ನಿರಾಸೆ ಅನುಭವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.