ADVERTISEMENT

ರಫೆಲ್‌ ನಡಾಲ್‌‌ ಆದರ್ಶ; ಸೆಬಾಸ್ಟಿಯನ್‌ ಕೊರ್ಡಾ ಧನ್ಯತಾಭಾವ..

ಬಸವರಾಜ ದಳವಾಯಿ
Published 6 ಅಕ್ಟೋಬರ್ 2020, 19:30 IST
Last Updated 6 ಅಕ್ಟೋಬರ್ 2020, 19:30 IST
ಸೆಬಾಸ್ಟಿಯನ್‌ ಕೊರ್ಡಾ- ರಫೆಲ್‌ ನಡಾಲ್‌‌
ಸೆಬಾಸ್ಟಿಯನ್‌ ಕೊರ್ಡಾ- ರಫೆಲ್‌ ನಡಾಲ್‌‌    

ಎದುರಾಳಿಯ ವಿರುದ್ಧ ಹೀನಾಯವಾಗಿ ಸೋತ ಆಟಗಾರನೊಬ್ಬ ಪಂದ್ಯದ ಫಲಿತಾಂಶವನ್ನು ‘ಅತ್ಯದ್ಭುತ, ಇದು ನನ್ನ ಜೀವನದ ಅತ್ಯುತ್ತಮ ಕ್ಷಣ’ ಎಂದು ಹೇಳುವುದುಂಟೆ?

ಉಂಟು; ಅಂತಹದ್ದೊಂದು ಅಪರೂಪ ಎನ್ನಿಸಬಹುದಾದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಈ ಬಾರಿಯ ಫ್ರೆಂಚ್‌ ಓಪನ್‌ ಟೂರ್ನಿ. ಟೂರ್ನಿಯ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ವಿಶ್ವದ ಎರಡನೇ ಕ್ರಮಾಂಕದ ಆಟಗಾರ ರಫೆಲ್‌ ನಡಾಲ್‌ ಗೆದ್ದರೂ, ಟೆನಿಸ್‌ ಅಭಿಮಾನಿಗಳ ಮನಸ್ಸು ಕದ್ದಿದ್ದು ಅಮೆರಿಕ ಆಟಗಾರ ಸೆಬಾಸ್ಟಿಯನ್‌ ಕೊರ್ಡಾ.

ತಾನು ಬಾಲ್ಯದಿಂದಲೇ ಧೇನಿಸುತ್ತಿದ್ದ ಆಟಗಾರನ ಎದುರಾಗಿ ಕಣಕ್ಕಿಳಿಯುವ ಅವಕಾಶ ಪಡೆದು 1–6, 1–6, 2–6 ಸೆಟ್‌ಗಳಿಂದ ಮಣಿದ ಸೆಬಾಸ್ಟಿಯನ್‌, ಪಂದ್ಯದ ಬಳಿಕ ನಡಾಲ್ ಅವರ ಹಸ್ತಾಕ್ಷರ ಇರುವ ಟಿ–ಶರ್ಟ್‌ ಪಡೆದು ಧನ್ಯತೆಯ ಭಾವ ಅನುಭವಿಸಿದರು.

ADVERTISEMENT

ನಡಾಲ್ ವೃತ್ತಿಪರ ಟೆನಿಸ್‌ಗೆ ಪದಾರ್ಪಣೆ ಮಾಡಿದಾಗ (2001) ಸೆಬಾಸ್ಟಿಯನ್‌ ಕೊರ್ಡಾ ವರ್ಷದ ಕೂಸು. ಸ್ಪೇನ್‌ ಆಟಗಾರ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ (2005ರ ಫ್ರೆಂಚ್‌ ಓಪನ್‌)‌ ಜಯಿಸಿದ ವೇಳೆ ಸೆಬಾಸ್ಟಿಯನ್‌ಗೆ ಐದರ ಪ್ರಾಯ. ನಡಾಲ್‌ ಈಗ13ನೇ ಬಾರಿ ಫ್ರೆಂಚ್‌ ಓಪನ್‌ ಟ್ರೋಫಿ ಗೆಲ್ಲುವತ್ತ ದಾಪುಗಾಲಿಟ್ಟಿದ್ದಾರೆ.

2000ನೇ ಇಸ್ವಿಯ ಜುಲೈನಲ್ಲಿ ಜನಿಸಿದ ಸೆಬಾಸ್ಟಿಯನ್‌, ಕ್ರೀಡಾ ಕುಟುಂಬದ ಕುಡಿ. ತಂದೆ ಪೆಟರ್‌ ಕೊರ್ಡಾ ಟೆನಿಸ್‌ನಲ್ಲೇ ಹೆಸರು ಮಾಡಿದವರು. 1998ರ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ವಿಜೇತ ಆಟಗಾರ. ಅಲ್ಲದೆ 1992ರ ಫ್ರೆಂಚ್‌ ಓಪನ್‌ನಲ್ಲಿ ರನ್ನರ್‌ಅಪ್‌ ಸ್ಥಾನವೂ ಅವರಿಗೆ ಒಲಿದಿತ್ತು. ತಾಯಿ ರೆಜಿನಾ ಸಿಂಗಲ್ಸ್‌ ವಿಭಾಗದ ರ‍್ಯಾಂಕಿಂಗ್‌ನಲ್ಲಿ ಅಗ್ರ 30ರಲ್ಲಿ ಸ್ಥಾನ ಗಳಿಸಿದ್ದರು. ಅಕ್ಕಂದಿರಾದ ಜೆಸ್ಸಿಕಾ ಹಾಗೂ ನೆಲ್ಲಿ ವೃತ್ತಿಪರ ಗಾಲ್ಫ್‌ನಲ್ಲಿ ಪಳಗಿದವರು.

‘ಚಿಕ್ಕವನಿದ್ದಾಗಿನಿಂದಲೂ ರಫೆಲ್‌ ನಡಾಲ್‌ ನನಗೆ ಪ್ರಿಯ ವ್ಯಕ್ತಿ. ಅವರು ಯಾವ ಟೂರ್ನಿ ಆಡುತ್ತಿದ್ದಾರೆ, ಅವರ ಎದುರಾಳಿ ಯಾರು ಎಂಬುದು ನನಗೆ ಮುಖ್ಯವಾಗುವುದೇ ಇಲ್ಲ; ಅವರಾಡುವ ಪ್ರತಿ ಪಂದ್ಯವನ್ನೂ ವೀಕ್ಷಿಸಿದ್ದೇನೆ. ಈ ಪಂದ್ಯವನ್ನು ವರ್ಣಿಸಲು ಪದಗಳೇ ಸಾಲದು‘ ಎಂದು ಪಂದ್ಯದ ಬಳಿಕ ಸೆಬಾಸ್ಟಿಯನ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.