ADVERTISEMENT

ಟೆನಿಸ್‌ ತಾರೆ ಡಿಮಿಟ್ರೋವ್‌ಗೆ ಕೋವಿಡ್‌-19

ಏಜೆನ್ಸೀಸ್
Published 22 ಜೂನ್ 2020, 6:22 IST
Last Updated 22 ಜೂನ್ 2020, 6:22 IST
ಗ್ರಿಗರ್‌ ಡಿಮಿಟ್ರೋವ್‌ 
ಗ್ರಿಗರ್‌ ಡಿಮಿಟ್ರೋವ್‌    

ವಾಷಿಂಗ್ಟನ್‌: ಬಲ್ಗೇರಿಯಾದ ಟೆನಿಸ್‌ ಆಟಗಾರ ಗ್ರಿಗರ್‌ ಡಿಮಿಟ್ರೋವ್‌ಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ.

ಭಾನುವಾರ ಡಿಮಿಟ್ರೋವ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿರುವ ಡಿಮಿಟ್ರೋವ್‌ ಅವರು ಹೋದ ವಾರ ನಡೆದಿದ್ದ ಏಡ್ರಿಯನ್‌ ಟೂರ್ ಪ್ರದರ್ಶನ ಟೆನಿಸ್‌ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಸರ್ಬಿಯಾದ ಆಟಗಾರ ನೊವಾಕ್‌ ಜೊಕೊವಿಚ್‌ ಆಯೋಜಿಸಿದ್ದ ಈ ಟೂರ್ನಿಯನ್ನು ಈಗ ರದ್ದು ಮಾಡಲಾಗಿದೆ.

ADVERTISEMENT

ಕೊರೊನಾ ಬಿಕ್ಕಟ್ಟಿನಿಂದಾಗಿ ಈ ವರ್ಷದ ಮಾರ್ಚ್‌ನಲ್ಲಿ ಸ್ಪರ್ಧಾತ್ಮಕ ಟೆನಿಸ್‌ ಟೂರ್ನಿಗಳ ಆಯೋಜನೆಗೆ ‘ಬ್ರೇಕ್‌’ ಬಿದ್ದಿತ್ತು. ಆಗಸ್ಟ್‌ನಿಂದ ಟೆನಿಸ್‌ ಚಟುವಟಿಕೆಗಳನ್ನು ಪುನರಾರಂಭಿಸಲು ಚಿಂತಿಸಲಾಗಿತ್ತು.

‘ದಯವಿಟ್ಟು ಕ್ಷಮಿಸಿ. ನನಗೆ ಕೊರೊನಾ ಸೋಂಕು ತಗುಲಿದೆ. ಹಿಂದಿನ ಕೆಲ ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲಿ ಎಂಬ ಕಾರಣದಿಂದ ಈ ವಿಷಯವನ್ನು ಬಹಿರಂಗಪಡಿಸುತ್ತಿದ್ದೇನೆ’ ಎಂದು ಡಿಮಿಟ್ರೋವ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಲ್ಲಿ ನಡೆದಿದ್ದ ಏಡ್ರಿಯನ್‌ ಟೂರ್ನಿಯ ವೇಳೆ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶ ನೀಡಲಾಗಿತ್ತು. ಅಂತರ ನಿಯಮವನ್ನು ಉಲ್ಲಂಘಿಸಲಾಗಿತ್ತು. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜಾರಿಗೊಳಿಸಿರುವ ಮಾರ್ಗಸೂಚಿಗಳ ಪಾಲನೆಯೂ ಆಗಿರಲಿಲ್ಲ ಎಂಬ ಟೀಕೆಗಳು ಈಗ ವ್ಯ‌ಕ್ತವಾಗುತ್ತಿವೆ.

ಕ್ರೊವೇಷ್ಯಾದಲ್ಲಿ ಆಯೋಜನೆಯಾಗಿದ್ದ ಎರಡನೇ ಲೆಗ್‌ನ ಟೂರ್ನಿಯ ವೇಳೆಯೂ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು ಎಂದೂ ಅನೇಕರು ದೂರಿದ್ದಾರೆ. ಶನಿವಾರ ನಡೆದಿದ್ದ ಈ ಟೂರ್ನಿಯ ಪಂದ್ಯದಲ್ಲಿ ಡಿಮಿಟ್ರೋವ್‌ ಅವರು ಬೋರ್ನಾ ಕೊರಿಕ್‌ ವಿರುದ್ಧ ಆಡಿದ್ದರು.

ಪಂದ್ಯದ ಬಳಿಕ ಸಾಕಷ್ಟು ಆಯಾಸವಾಗುತ್ತಿದೆ ಎಂದು ಅವರು ಆಯೋಜಕರಿಗೆ ತಿಳಿಸಿದ್ದರು. ಹೀಗಾಗಿ ಅವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಜೊಕೊವಿಚ್‌ ಸೇರಿದಂತೆ ವಿಶ್ವದ ಪ್ರಮುಖ ಆಟಗಾರರಾದ ಡಾಮಿನಿಕ್‌‌ ಥೀಮ್‌, ಆ್ಯಂಡ್ರೆ ರುಬ್ಲೆವ್‌ ಹಾಗೂ ಅಲೆಕ್ಸಾಂಡರ್‌ ಜ್ವೆರೆವ್‌ ಅವರೂ ಈ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು.

‘ಕೊರೊನಾ ಹರಡದಂತೆ ತಡೆಯುವ ಸಲುವಾಗಿ ನಾವು ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದೆವು. ಸರ್ಬಿಯಾ ಹಾಗೂ ಕ್ರೊವೇಷ್ಯಾ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳನ್ನೂ ಕಡ್ಡಾಯವಾಗಿ ಪಾಲಿಸಿದ್ದೆವು. ಡಿಮಿಟ್ರೋವ್‌ಗೆ ಕೋವಿಡ್‌ ಇರುವ ಸುದ್ದಿ ತಿಳಿದು ಅಚ್ಚರಿಯಾಗಿದೆ. ದಯವಿಟ್ಟು ಕ್ಷಮಿಸಿ’ ಎಂದು ಜೊಕೊವಿಚ್‌ ಅವರ ಸಹೋದರ ಮತ್ತು ಟೂರ್ನಿಯ ನಿರ್ದೇಶಕ ಜೋರ್ಜ್‌ ಜೊಕೊವಿಚ್‌ ತಿಳಿಸಿದ್ದಾರೆ.

‘ನಾವು ಎಲ್ಲಾ ಬಗೆಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದೇವೆ. ಗ್ರಿಗರ್‌ ಜೊತೆ ಸಂಪರ್ಕದಲ್ಲಿದ್ದ ಎಲ್ಲಾ ಆಟಗಾರರು ಹಾಗೂ ನೆರವು ಸಿಬ್ಬಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದ್ದೇವೆ. ನಾನು ಈಗಾಗಲೇ ಕೆಲ ಆಟಗಾರರು ಹಾಗೂ ಅವರ ಕುಟುಂಬದವರ ಜೊತೆ ಮಾತನಾಡಿದ್ದೇನೆ. ಯಾರಲ್ಲೂ ಕೋವಿಡ್‌ ಲಕ್ಷಣಗಳು ಕಂಡುಬಂದಿಲ್ಲ. ಟೂರ್ನಿಯಲ್ಲಿ ಭಾಗವಹಿಸುವ ಮುನ್ನ ಡಿಮಿಟ್ರೋವ್‌ ಅವರು ಬಲ್ಗೇರಿಯಾದಲ್ಲಿದ್ದರು. ಅಲ್ಲಿ ಅವರಿಗೆ ಸೋಂಕು ತಗುಲಿರಬಹುದೇನೊ’ ಎಂದಿದ್ದಾರೆ.

‘29 ವರ್ಷ ವಯಸ್ಸಿನಡಿಮಿಟ್ರೋವ್‌ಗೆ ಕೊರೊನಾ ಸೋಂಕು ತಗುಲಿರುವ ಸುದ್ದಿ ತಿಳಿದು ಆಘಾತವಾಯಿತು. ಅವರ ಜೊತೆ ಸಂಪರ್ಕದಲ್ಲಿದ್ದವರೆಲ್ಲಾ ಸ್ವಯಂ ಪ್ರೇರಣೆಯಿಂದ ಕೋವಿಡ್‌ ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು’ ಎಂದು ಜೊಕೊವಿಚ್‌ ಅವರ ಕೋಚ್‌ ಗೋರನ್‌ ಇವಾನಿಸೆವಿಚ್‌ ಹೇಳಿದ್ದಾರೆ.

ಡಿಮಿಟ್ರೋವ್‌ ಅವರು ವಿಂಬಲ್ಡನ್‌ (2014), ಆಸ್ಟ್ರೇಲಿಯಾ ಓಪನ್‌ (2017) ಹಾಗೂ ಅಮೆರಿಕ ಓಪನ್‌ (2019) ಟೂರ್ನಿಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.