ಲಂಡನ್: ಏಳನೇ ಶ್ರೇಯಾಂಕದ ಜಾಸ್ಮಿನ್ ಪಾವೊಲಿನಿ ಅವರು ಆಲ್ ಇಂಗ್ಲೆಂಡ್ ಕ್ಲಬ್ ಇತಿಹಾಸದಲ್ಲೇ ನಡೆದ ದೀರ್ಘಾವಧಿಯ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 2–6, 6–4, 7–6 (8) ರಿಂದ ಕ್ರೊವೇಷ್ಯಾದ ಡೊನಾ ವೆಕಿಚ್ ಅವರನ್ನು ಸೋಲಿಸಿದರು. ವಿಂಬಲ್ಡನ್ ಫೈನಲ್ ತಲುಪಿದ ಇಟಲಿಯ ಮೊದಲ ಆಟಗಾರ್ತಿ ಎಂಬ ಶ್ರೇಯವೂ ಜಾಸ್ಮಿನ್ ಅವರದಾಯಿತು.
ಫೈನಲ್‌ನಲ್ಲಿ ಸ್ಥಾನ ಪಡೆಯಲು ಇಬ್ಬರ ನಡುವೆ ನಡೆದ ತೀವ್ರ ಹಣಾಹಣಿ ಪ್ರೇಕ್ಷಕರಿಗೆ ರಸದೌತಣ ನೀಡಿತು. 28 ವರ್ಷದ ಆಟಗಾರ್ತಿಯರಿಬ್ಬರು ಇಲ್ಲಿ ಹಿಂದೆಂದೂ ಈ ಹಂತಕ್ಕೆ ತಲುಪಿರಲಿಲ್ಲ.
ವೆಕಿಚ್ ಅವರಿಗೆ ಇದು ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಮೊದಲ ಸೆಮಿಫೈನಲ್. ಪಾವೊಲಿನಿ ಈ ಹಿಂದಿನ ವರ್ಷಗಳಲ್ಲಿ ಹುಲ್ಲಿನಂ ಕಣದಲ್ಲಿ ಒಂದೂ ಪಂದ್ಯ ಗೆದ್ದಿರಲಿಲ್ಲ. ಆದರೆ ಪಾವೊಲಿನಿ ಅವರಿಗೆ ಇದು ಸತತ ಎರಡನೇ ಗ್ರ್ಯಾನ್‌ಸ್ಲಾಮ್ ಫೈನಲ್. ಕಳೆದ ತಿಂಗಳು ಫ್ರೆಂಚ್ ಓಪನ್‌ನಲ್ಲೂ ಫೈನಲ್ ತಲುಪಿದ್ದರು.
ಗ್ರೌಂಡ್‌ಸ್ಟ್ರೋಕ್ ಮತ್ತು ‘ಡ್ರಾಪ್ ಶಾಟ್’ಗಳ ಮಿಶ್ರಣದ ಮೂಲಕ ಕ್ರೊವೇಷ್ಯಾ ಆಟಗಾರ್ತಿ ಹೆಚ್ಚೇನೂ ಪ್ರಯಾಸವಿಲ್ಲದೇ ಮೊದಲ ಸೆಟ್ ತಮ್ಮ ದಾಗಿಸಿಕೊಂಡರು. ಐದು ಮತ್ತು ಏಳನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಬ್ರೇಕ್ ಮಾಡಿದ್ದರು.
ಆದರೆ ಪಾವೊಲಿನಿ ಪ್ರೇಕ್ಷಕರ ಗುಂಪಿನಲ್ಲಿದ್ದ ಹೆಚ್ಚಿನ ಸಂಖ್ಯೆಯ ಇಟಾಲಿಯನ್ನರ
ಹರ್ಷೋದ್ಗಾರಗಳ ಬೆಂಬಲದೊಡನೆ ಚೇತರಿಸಿಕೊಂಡರು. ಆಕ್ರಮಣಕಾರಿಯಾಗಿ ಆಡಿದ ಅವರು ಪದೇ ಪದೇ ನೆಟ್ ಬಳಿಯೂ ಧಾವಿಸಿ ವೆಕಿಚ್ ಅವರನ್ನು ಒತ್ತಡಕ್ಕೆ ಸಿಲುಕಿಸಿದರು. ಇದು ಫಲನೀಡಿ ಪಾವೊಲಿನಿ ಎರಡನೇ ಸೆಟ್ ಪಡೆದರು.
ನಿರ್ಣಾಯಕ ಸೆಟ್‌ನಲ್ಲಿ ಹಲವು ಬ್ರೇಕ್‌ಗಳಾದವು. ಅದರಲ್ಲೂ ವೆಕಿಚ್ ಪಂದ್ಯ ಬೆಳೆದಂತೆ ಬಳಲಿದ ಹಾಗೆ ಕಂಡರು. ಒಂದು ಗೇಮ್ ಅಂತೂ ಹತ್ತು ನಿಮಿಷಗಳನ್ನು ದೀರ್ಘವಾಯಿತು. ಇನ್ನೊಂದೆಡೆ ಪಾವೊಲಿನಿ ಲವಲವಿಕೆಯಿಂದ ಆಡತೊಡಗಿ 2 ಗಂಟೆ 51 ನಿಮಿಷಗಳ ದೀರ್ಘ ಪಂದ್ಯ ಗೆದ್ದುಕೊಂಡರು. ವಿಂಬಲ್ಡನ್‌ನಲ್ಲಿ ಈ ಹಿಂದಿನ ಅತಿ ದೀರ್ಘಾವಧಿಯ ಮಹಿಳಾ ಸಿಂಗಲ್ಸ್ ಪಂದ್ಯ ಸೆರೆನಾ ವಿಲಿಯಮ್ಸ್ ಮತ್ತು ಎಲೆನಾ ಡೆಮೆಂಟಿಯೇವಾ ಮಧ್ಯೆ 2009ರಲ್ಲಿ ನಡೆದಿತ್ತು. ಆ ಪಂದ್ಯ 2 ಗಂಟೆ 50 ನಿಮಿಷ ಸಾಗಿತ್ತು.
ರಿಬಾಕಿನಾಗೆ ಬಾರ್ಬೊರಾ ಆಘಾತ: 31ನೇ ಶ್ರೇಯಾಂಕದ ಬಾರ್ಬೊರಾ ಕ್ರೇಜಿಕೋವಾ ಮತ್ತೊಂದು ಸೆಮಿಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಎಲೆನಾ ರಿಬಾಕಿನಾ ಅವರಿಗೆ ಆಘಾತ ನೀಡಿ, ಪ್ರಶಸ್ತಿ ಸುತ್ತಿಗೆ ಮುನ್ನಡೆದರು. ಶನಿವಾರ ನಡೆಯುವ ಫೈನಲ್‌ನಲ್ಲಿ ಜಾಸ್ಮಿನ್ ಅವರನ್ನು
ಎದುರಿಸಲಿದ್ದಾರೆ.
ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಝೆಕ್ ರಿಪಬ್ಲಿಕ್‌ನ ಬಾರ್ಬೊರಾ 3-6, 6-3, 6-4 ಸೆಟ್‌ಗಳಿಂದ ಕಜಕಸ್ತಾನದ ಆಟಗಾರ್ತಿಯನ್ನು ಸದೆಬಡಿದರು. 2022ರ ಚಾಂಪಿಯನ್ ರಿಬಾಕಿನಾ ಮೊದಲ ಸೆಟ್‌ನಲ್ಲಿ ಹಿಡಿತ ಸಾಧಿಸಿದ್ದರು. ಆದರೆ, ನಂತರದ ಸೆಟ್‌ಗಳಲ್ಲಿ ಬಾರ್ಬೊರಾ ಮೇಲುಗೈ ಸಾಧಿಸಿದರು. ಇವರಿಬ್ಬರ ಹೋರಾಟ ಎರಡು ಗಂಟೆ ಏಳು ನಿಮಿಷಗಳ ಕಾಲ ನಡೆಯಿತು.
28 ವರ್ಷದ ಬಾರ್ಬೊರಾ ಅವರಿಗೆ ಸಿಂಗಲ್ಸ್‌ನಲ್ಲಿ ಇದು ಎರಡನೇ ಗ್ರ್ಯಾನ್‌ಸ್ಲಾಮ್ ಫೈನಲ್ ಆಗಿದೆ. 2021ರಲ್ಲಿ ಅವರು ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಇಂದು ಅಲ್ಕರಾಜ್, ಜೊಕೊವಿಚ್‌ಗೆ ಸವಾಲು
ಲಂಡನ್: ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ತಲುಪಲು ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಮತ್ತು ಏಳು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಪೈಪೋಟಿಯಲ್ಲಿದ್ದಾರೆ.
ಆದರೆ ಸ್ಪೇನ್‌ನ ಅಲ್ಕರಾಜ್ ಇದಕ್ಕಾಗಿ ಸೆಮಿಫೈನಲ್‌ನಲ್ಲಿ ಐದನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೇವ್ ಅವರ ಸವಾಲನ್ನು ಎದುರಿಸಬೇಕಾಗಿದೆ. ಕಳೆದ ವರ್ಷವೂ ಇವರಿಬ್ಬರು ಸೆಮಿಫೈನಲ್ ಎದುರಾಳಿ ಗಳಾಗಿದ್ದರು. ಆಗ ಅಲ್ಕರಾಜ್ ಸುಲಭ
ಜಯ ಗಳಿಸಿದ್ದರು.
ಇನ್ನೊಂದು ಸೆಮಿಫೈನಲ್‌ನಲ್ಲಿ ಸರ್ಬಿಯಾದ ಜೊಕೊವಿಚ್ ಅವರ ಎದುರಾಳಿ ಇಟಲಿಯ ಲೊರೆಂಜೊ ಮುಸೆಟ್ಟಿ. 22 ವರ್ಷ ವಯಸ್ಸಿನ ಮುಸೆಟ್ಟಿ
ಅವರಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.