ADVERTISEMENT

ಟೆನಿಸ್‌: ಸಾನಿಯಾ ಮಿರ್ಜಾಗೆ ಡಬಲ್ಸ್ ಕಿರೀಟ

ತಾಯಿಯಾದ ಬಳಿಕ ಮೊದಲ ಬಾರಿ ಕಣಕ್ಕಿಳಿದಿದ್ದ ಭಾರತದ ಆಟಗಾರ್ತಿ

ಪಿಟಿಐ
Published 18 ಜನವರಿ 2020, 19:30 IST
Last Updated 18 ಜನವರಿ 2020, 19:30 IST
ಪ್ರಶಸ್ತಿಯೊಂದಿಗೆ ಸಾನಿಯಾ ಮಿರ್ಜಾ ಹಾಗೂ ನಾದಿಯಾ ಕಿಚೆನೊಕ್‌
ಪ್ರಶಸ್ತಿಯೊಂದಿಗೆ ಸಾನಿಯಾ ಮಿರ್ಜಾ ಹಾಗೂ ನಾದಿಯಾ ಕಿಚೆನೊಕ್‌   

ಹೋಬರ್ಟ್‌: ಎರಡು ವರ್ಷದ ವಿರಾಮದ ಬಳಿಕ ಅಂಗಣಕ್ಕಿಳಿದಿದ್ದ ಭಾರತದ ಸಾನಿಯಾ ಮಿರ್ಜಾ ಮೋಡಿ ಮಾಡಿದರು. ಹೋಬರ್ಟ್‌ ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಶನಿವಾರ ಅವರು ಪ್ರಶಸ್ತಿಗೆ ಮುತ್ತಿಕ್ಕಿದರು.

ಫೈನಲ್‌ ಪಂದ್ಯದಲ್ಲಿ ಶ್ರೇಯಾಂಕರಹಿತ ಜೋಡಿ ಸಾನಿಯಾ ಹಾಗೂ ಉಕ್ರೇನ್‌ನ ನಾದಿಯಾ ಕಿಚೆನೊಕ್‌ ಅವರು ಎರಡನೇ ಶ್ರೇಯಾಂಕದ ಚೀನಾದ ಶುಯಿ ಪೆಂಗ್‌–ಶುಯಿ ಜಂಗ್‌ ಎದುರು 6–4, 6–4ರಿಂದ ಜಯದ ನಗೆ ಬೀರಿದರು. ಒಂದು ತಾಸು 21 ನಿಮಿಷಗಳಲ್ಲಿ ಪಂದ್ಯ ಮುಗಿಯಿತು.

ಪುತ್ರ ಇಜಾನ್‌ಗೆ ಜನ್ಮ ನೀಡಿದ ಬಳಿಕ ಸಾನಿಯಾ ಆಡಿದ ಮೊದಲ ಟೂರ್ನಿ ಇದು. ಇಲ್ಲಿನ ಜಯದೊಂದಿಗೆ 33 ವರ್ಷದ ಹೈದರಾಬಾದ್‌ ಆಟಗಾರ್ತಿ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿದರು. ಸಾನಿಯಾ ಮುಡಿಗೇರಿದ 42ನೇ ಡಬ್ಲ್ಯುಟಿಎ ಡಬಲ್ಸ್ ಗರಿ ಇದು. 2017ರಲ್ಲಿ ಬ್ರಿಸ್ಬೇನ್‌ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಅಮೆರಿಕದ ಬೆಥನಿ ಮ್ಯಾಟ್ಟೆಕ್‌ ಜೊತೆಗೂಡಿ ಕೊನೆಯ ಬಾರಿ ಟ್ರೋಫಿ ಗೆದ್ದಿದ್ದರು.

ADVERTISEMENT

ಪಾಕಿಸ್ತಾನ ಕ್ರಿಕೆಟಿಗ ಶೊಯಬ್‌ ಮಲಿಕ್‌ ಅವರನ್ನು ವರಿಸಿರುವ ಸಾನಿಯಾ 2018 ಹಾಗೂ 2019ರಲ್ಲಿ ಟೆನಿಸ್‌ನಿಂದ ದೂರ ಇದ್ದರು.

ಜಿದ್ದಾಜಿದ್ದಿ ಪೈಪೋಟಿ: ಸಾನಿಯಾ ಜೋಡಿಯು ಫೈನಲ್‌ ಹಣಾಹಣಿಯ ಮೊದಲ ಗೇಮ್‌ನಲ್ಲಿ ಚೀನಾ ಆಟಗಾರ್ತಿಯರ ಸರ್ವ್‌ ಮುರಿದರು. ಬಳಿಕ ಸೆಟ್‌ 4–4 ಸಮಬಲದತ್ತ ಸಾಗಿತ್ತು. ಬಳಿಕ ಎರಡು ಗೇಮ್‌ಗಳಲ್ಲಿ ಜಯದ ನಗೆ ಬೀರಿದ ಭಾರತ–ಉಕ್ರೇನ್‌ ಜೋಡಿ ಸೆಟ್‌ ವಶಪಡಿಸಿಕೊಂಡಿತು.

ಎರಡನೇ ಸೆಟ್‌ ಕೂಡ ಜಿದ್ದಾಜಿದ್ದಿಯಿಂದ ಕೂಡಿತ್ತು. ಸಾನಿಯಾ ಹಾಗೂ ನಾದಿಯಾ 4–2 ಮುನ್ನಡೆ ಪಡೆದಿದ್ದರು. ತಿರುಗೇಟು ನೀಡಿದ ಎದುರಾಳಿಗಳು 4–4 ಸಮಬಲ ಸಾಧಿಸಿದರು. ಛಲಬಿಡದ ಭಾರತ–ಉಕ್ರೇನ್‌ ಆಟಗಾರ್ತಿಯರು ಮತ್ತೆರಡು ಗೇಮ್‌ಗಳಲ್ಲಿ ಗೆದ್ದು ಸೆಟ್‌ ಜೊತೆಗೆ ಟ್ರೋಫಿಯನ್ನೂ ತಮ್ಮದಾಗಿಸಿಕೊಂಡರು.

ಸಾನಿಯಾ ಹಾಗೂ ನಾದಿಯಾ ಸುಮಾರು ₹ 9 ಲಕ್ಷ 60 ಸಾವಿರ (13,580 ಅಮೆರಿಕನ್‌ ಡಾಲರ್‌) ಬಹುಮಾನ ಮೊತ್ತವನ್ನು ಹಂಚಿಕೊಂಡರು. ಅಲ್ಲದೆ ತಲಾ 280 ರ‍್ಯಾಂಕಿಂಗ್‌ ಪಾಯಿಂಟ್‌ಗಳನ್ನು ಗಳಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.