ಕಾರ್ಲೋಸ್ ಅಲ್ಕರಾಜ್
(ರಾಯಿಟರ್ಸ್ ಚಿತ್ರ)
ನ್ಯೂಯಾರ್ಕ್: ಅಮೆರಿಕ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಆಘಾತಕಾರಿ ಸೋಲು ಅನುಭವಿಸಿರುವ ಸ್ಪೇನ್‌ನ ಯುವ ತಾರೆ ಕಾರ್ಲೋಸ್ ಅಲ್ಕರಾಜ್ ಕೂಟದಿಂದಲೇ ನಿರ್ಗಮಿಸಿದ್ದಾರೆ.
ಪುರುಷರ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ವಿಶ್ವ ನಂ.3 ರ‍್ಯಾಂಕ್‌ನ ಅಲ್ಕರಾಜ್ ಅವರು ವಿಶ್ವ ನಂ. 74ನೇ ರ‍್ಯಾಂಕ್‌ನ ನೆದರ್ಲೆಂಡ್ಸ್‌ನ ಬೋಟಿಕ್ ವ್ಯಾನ್ ಡಿ ಝಾಂಡ್‌ಸ್ಚುಲ್ಪ್ ವಿರುದ್ಧ 6-1, 7-5, 6-4ರ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.
ಇದರೊಂದಿಗೆ ಪ್ರಸಕ್ತ ಋತುವಿನಲ್ಲಿ ಮೂರನೇ ಹಾಗೂ ಒಟ್ಟಾರೆಯಾಗಿ ವೃತ್ತಿಜೀವನದ ಐದನೇ ಗ್ರ್ಯಾನ್‌ಸ್ಲಾಮ್ ಗೆಲ್ಲುವ ಅಲ್ಕರಾಜ್ ಅವರ ಕನಸು ಭಗ್ನಗೊಂಡಿದೆ. ಅಲ್ಲದೆ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಸತತ 15ನೇ ಗೆಲುವು ದಾಖಲಿಸಿದ್ದ ಅಲ್ಕರಾಜ್ ಅಜೇಯ ಓಟಕ್ಕೆ ತೆರೆ ಬಿದ್ದಿದೆ.
ಈ ಸೋಲಿನೊಂದಿಗೆ ಓಪನ್ ಯುಗದಲ್ಲಿ ಒಂದೇ ವರ್ಷ ಮೂರು ಗ್ರ್ಯಾನ್‌ಸ್ಲಾಮ್ ಗೆದ್ದಿದ್ದ ರಾಡ್ ಲೇವರ್ ಮತ್ತು ರಫೆಲ್ ನಡಾಲ್ ಸಾಧನೆಯನ್ನು ಸರಿಗಟ್ಟುವ ಅವಕಾಶದಿಂದ 21 ವರ್ಷದ ಅಲ್ಕರಾಜ್ ವಂಚಿತರಾದರು.
ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಬೋಟಿಕ್, 'ನನಗೆ ಪದಗಳೇ ಸಿಗುತ್ತಿಲ್ಲ. ಅರ್ಥರ್ ಸ್ಟೇಡಿಯಂನಲ್ಲಿ ಇಂದು ರಾತ್ರಿ ಕೆಲವೊಂದು ನಂಬಲಾಗದ ರೀತಿಯಲ್ಲಿ ಪಾಯಿಂಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ತಾಳ್ಮೆಯಿಂದ ಇರಲು ಪ್ರಯತ್ನಿಸಿದ್ದೇನೆ' ಎಂದು ಹೇಳಿದ್ದಾರೆ.
ಬೋಟಿಕ್ ಅವರು 1991ರ ಬಳಿಕ ಅಗ್ರ ಮೂರು ಶ್ರೇಯಾಂಕಿತ ಆಟಗಾರರನ್ನು ಮಣಿಸಿದ ಡಚ್‌ನ ಮೊದಲ ಆಟಗಾರ ಎನಿಸಿದ್ದಾರೆ.
ಬೋಟಿಕ್ ವ್ಯಾನ್ ಡಿ ಝಾಂಡ್‌ಸ್ಚುಲ್ಪ್
2021ರ ವಿಂಬಲ್ಡನ್ ಟೂರ್ನಿಯಲ್ಲಿ ಅಲ್ಕರಾಜ್ ಎರಡನೇ ಸುತ್ತಿನಲ್ಲಿ ಹೊರಬಿದ್ದಿದ್ದರು. ಅಲ್ಲದೆ ಕಳೆದ ಮೂರು ವರ್ಷಗಳಲ್ಲಿ ಅಮೆರಿಕನ್ ಓಪನ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಬಾರಿ ತಮ್ಮ ಲಯ ಕಂಡುಕೊಳ್ಳುವಲ್ಲಿ ವಿಫಲರಾದರು.
2024ರಲ್ಲಿ ಅಲ್ಕರಾಜ್ ಅವರು ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಕಿರೀಟ ಎತ್ತಿ ಹಿಡಿದಿದ್ದರು. ಅಲ್ಲದೆ ಪ್ಯಾರಿಸ್ ಒಲಿಂಪಿಕ್ಸ್ ಟೆನಿಸ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ವಿರುದ್ಧ ಪರಾಭವಗೊಂಡು ಬೆಳ್ಳಿ ಪದಕ ಜಯಿಸಿದ್ದರು.
2022ರಲ್ಲಿ ಅಲ್ಕರಾಜ್ ಅವರು ಅಮೆರಿಕ್ ಓಪನ್ ಚಾಂಪಿಯನ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.