ಪಂದ್ಯ ಗೆದ್ದ ಸಂದರ್ಭದಲ್ಲಿ ಫೆಲಿಕ್ಸ್ ಓಜೆ ಆಲಿಯಾಸೀಮ್ ಹರ್ಷಚಿತ್ತರಾಗಿದ್ದು ಹೀಗೆ... ಎಎಫ್‌ಪಿ ಚಿತ್ರ
ನ್ಯೂಯಾರ್ಕ್: ಹಾಲಿ ಚಾಂಪಿಯನ್ ಯಾನಿಕ್ ಸಿನ್ನರ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಅಮೆರಿಕದ ಅಮಂಡಾ ಅನಿಸಿಮೋವಾ ಅವರು ಇಗಾ ಶ್ವಾಂಟೆಕ್ ಅವರನ್ನು ಮಹಿಳೆಯರ ಎಂಟರ ಘಟ್ಟದ ಪಂದ್ಯದಲ್ಲಿ ಮಣಿಸುವ ಮೂಲಕ ವಿಂಬಲ್ಡನ್ ಫೈನಲ್‌ನಲ್ಲಿ ಅನುಭವಿಸಿದ ಮುಖಭಂಗಕ್ಕೆ ಸೇಡು ತೀರಿಸಿಕೊಂಡರು.
ಗ್ರ್ಯಾನ್‌ಸ್ಲಾಮ್ ಇತಿಹಾಸದಲ್ಲೇ ಮೊದಲ ಬಾರಿ ಇಟಲಿಯನ್ನರು ಎದುರಾಳಿಗಳಾಗಿದ್ದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಸಿನ್ನರ್ 6–1, 6–4, 6–2 ರಿಂದ ಹತ್ತನೇ ಶ್ರೇಯಾಂಕದ ಲೊರಂಜೆ ಮುಸೆಟ್ಟಿ ಅವರನ್ನು ಸೋಲಿಸಿದರು.
‘ಆಟ ಅಮೋಘ ಪ್ರದರ್ಶನಗಿತ್ತು. ನಾನು ಅತ್ಯುತ್ತಮ ರೀತಿಯಲ್ಲಿ ಪಂದ್ಯ ಆರಂಭಿಸಿದೆ’ ಎಂದು 24 ವರ್ಷ ವಯಸ್ಸಿನ ಸಿನ್ನರ್ ಪ್ರತಿಕ್ರಿಯಿಸಿದರು. ಅವರು ಶುಕ್ರವಾರ ನಡೆಯುವ ಸೆಮಿಫೈನಲ್‌ನಲ್ಲಿ 25ನೇ ಶ್ರೇಯಾಂಕದ ಫೆಲಿಕ್ಸ್ ಓಜೆ ಆಲಿಯಾಸೀಮ್ ಅವರನ್ನುಎದುರಿಸಲಿದ್ದಾರೆ.
ಓಜೆ ಆಲಿಯಾಸೀಮ್ ಅವರು ಸಿನ್ನರ್ ಜೊತೆಗಿನ ಈ ಹಿಂದಿನ ಮೂರು ಮುಖಾಮುಖಿಗಳಲ್ಲಿ ಎರಡರಲ್ಲಿ ಜಯಗಳಿಸಿದ್ದಾರೆ. ಆದರೆ ಅಮೆರಿಕದ ಸಿನ್ಸಿನಾಟಿಯಲ್ಲಿ ಆಗಸ್ಟ್‌ನಲ್ಲಿ ನಡೆದ ಟೂರ್ನಿಯಲ್ಲಿ ಸಿನ್ನರ್, ಕೆನಡಾ ಆಟಗಾರನನ್ನು ಸದೆಬಡಿದಿದ್ದರು. 25 ವರ್ಷ ವಯಸ್ಸಿನ ಆಲಿಯಾಸೀಮ್ ತೀವ್ರ ಹೋರಾಟದ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೋರ್ ಅವರನ್ನು 4–6, 7–6 (9–7), 7–5, 7–6 (7–4) ರಿಂದ ಸೋಲಿಸಿ ಎರಡನೇ ಬಾರಿ ಅಮೆರಿಕ ಓಪನ್ ಸೆಮಿಫೈನಲ್ ತಲುಪಿದರು. 2021ರಲ್ಲಿ ಕೆನಡಾದ ಆಟಗಾರ ಮೊದಲ ಬಾರಿ ನಾಲ್ಕರ ಘಟ್ಟ ತಲುಪಿದ್ದರು. 26 ವರ್ಷದ ಆಸ್ಟ್ರೇಲಿಯಾದ ಆಟಗಾರ ಈಗ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್‌ಫೈನಲ್‌ಗಳಲ್ಲಿ ಆರೂ ಬಾರಿ ಸೋತಂತಾಗಿದೆ.
ಇಗಾ ಶ್ವಾಂಟೆಕ್ ವಿರುದ್ಧ ಪಂದ್ಯದಲ್ಲಿ ಚೆಂಡನ್ನು ಮರಳಿ ಹೊಡೆಟ್ಟುತ್ತಿರುವ ಅಮಂಡಾ ಅನಿಸಿಮೋವಾ
ಅನಿಸಿಮೋವಾ ಸೇಡು: ಎರಡು ತಿಂಗಳ ಹಿಂದೆ ವಿಂಬಲ್ಡನ್ ಫೈನಲ್‌ನಲ್ಲಿ ಶ್ವಾಂಟೆಕ್ ಕೈಲಿ ಅನಿಸಿಮೋವಾ ಅವರು 6–0, 6–0 ಸೋಲನುಭವಿಸಿದ್ದರು. ಆದರೆ ಅಮೆರಿಕದ ಆಟಗಾರ್ತಿ ತವರಿನಲ್ಲಿ 6–4, 6–3 ರಿಂದ ಎರಡನೇ ಶ್ರೇಯಾಂಕದ ಪೋಲೆಂಡ್ ಆಟಗಾರ್ತಿಯನ್ನು ಸೋಲಿಸಿ ಪ್ರತೀಕಾರ ತೀರಿಸಿಕೊಂಡರು.
‘ಈ ಹಂತಕ್ಕೆ ತಲುಪಿರುವುದು ಕನಸಿನಂತಾಗಿದೆ. ವಿಂಬಲ್ಡನ್‌ನಲ್ಲಿ ಆ ರೀತಿ ಸೋತು ಚೇತರಿಸಿರುವುದು ನನ್ನ ಪಾಲಿಗೆ ವಿಶೇಷವೆನಿಸಿದೆ’ ಎಂದು 24 ವರ್ಷ ವಯಸ್ಸಿನ ಅಮಂಡಾ ಹೇಳಿದರು.
ಆರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಒಡತಿ ಶ್ವಾಂಟೆಕ್ ಬುಕ್ಕೀಗಳ ಪಾಲಿಗೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದರು. ವಿಂಬಲ್ಡನ್ ನಂತರ ಸಿನ್ಸಿನಾಟಿಯಲ್ಲೂ ಪೋಲೆಂಡ್ ತಾರೆ ಜಯ ಗಳಿಸಿದ್ದರು.
ಶ್ವಾಂಟೆಕ್ ಮೊದಲ ಸೆಟ್‌ನ ಮೊದಲ ಗೇಮ್‌ನಲ್ಲೇ ಎದುರಾಳಿಯ ಸರ್ವ್ ಬ್ರೇಕ್ ಮಾಡಿದರು. ಆದರೆ ಎದಿರೇಟು ನೀಡಲು ಅಮಂಡಾ ತಡಮಾಡಲಿಲ್ಲ. ಎರಡನೇ ಸೆಟ್‌ನಲ್ಲೂ ಆರಂಭದ ಹಿನ್ನಡೆಯಿಂದ ಅವರು ಚೇತರಿಸಿಕೊಂಡರು. ಡಬಲ್‌ಫಾಲ್ಟ್‌ನೊಡನೆ ಶ್ವಾಂಟೆಕ್ ಪಂದ್ಯ ಸೋತರು.
ಅನಿಸಿಮೋವಾ ಅವರ ಮುಂದಿನ ಎದುರಾಳಿ ಜಪಾನ್‌ನ ನವೋಮಿ ಒಸಾಕಾ. ಅವರು ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ 11ನೇ ಶ್ರೇಯಾಂಕದ ಕರೋಲಿನಾ ಮುಚೋವಾ (ಝೆಕ್ ರಿಪಬ್ಲಿಕ್) ಅವರನ್ನು 6–4, 7–6 (7–3) ರಿಂದ ಸೋಲಿಸಿದರು. 2023ರಲ್ಲಿ ಹೆಣ್ಣುಮಗುವಿಗೆ ತಾಯಿಯಾದ ನಂತರ ಪ್ರಮುಖ ಟೂರ್ನಿಯೊಂದರಲ್ಲಿ ಒಸಾಕಾ ಮೊದಲ ಸಲ ನಾಲ್ಕರ ಘಟ್ಟ ತಲುಪಿದ್ದಾರೆ.
2018 ಮತ್ತು 2020ರಲ್ಲಿ ಚಾಂಪಿಯನ್ ಆಗಿದ್ದ ಜಪಾನ್ ತಾರೆ 30 ವಿನ್ನರ್‌ಗಳನ್ನು ಸಿಡಿಸಿದರು.
ಒಸಾಕಾ ಹಿಂದಿನ ಎರಡು ಮುಖಾಮುಖಿಗಳಲ್ಲಿ– 2022ರ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್– ಅಮಂಡಾಗೆ ಮಣಿದಿದ್ದರು.
ನಾಲ್ಕರ ಲಗ್ಗೆಯಿಟ್ಟ ಯುಕಿ ಭಾಂಬ್ರಿ
ನ್ಯೂಯಾರ್ಕ್: ಭಾರತದ ಯುಕಿ ಭಾಂಬ್ರಿ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಸೆಮಿಫೈನಲ್‌ಗೆ ಮುನ್ನಡೆದರು. ಅಮೆರಿಕ ಓಪನ್ ಪುರುಷರ ಡಬಲ್ಸ್‌ನಲ್ಲಿ ನ್ಯೂಜಿಲೆಂಡ್‌ನ ಮೈಕೆಲ್ ವೀನಸ್ ಜೊತೆಗೂಡಿದ ಅವರು ಬುಧವಾರ ರಾತ್ರಿ 11ನೇ ಶ್ರೇಯಾಂಕದ ಎದುರಾಳಿಗಳ ಮೇಲೆ ಜಯಗಳಿಸಿದರು.
ಕೋರ್ಟ್ ನಂಬರ್ 17ರಲ್ಲಿ ಭಾಂಬ್ರಿ– ಮೈಕೆಲ್ ಜೋಡಿ 6–3, 6–7 (8), 6–3 ರಿಂದ ಕ್ರೊವೇಷ್ಯಾದ ಮೆಟ್ಕಿಕ್– ಅಮೆರಿಕದ ರಾಜೀವ್ ರಾಮ್ ಜೋಡಿಯನ್ನು ಸೋಲಿಸಿತು. ಇದಕ್ಕೆ ಮೊದಲು ಇಂಡೊ–ನ್ಯೂಜಿಲೆಂಡ್ ಜೋಡಿ 16ರ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಕೆವಿನ್ ಕ್ರಾವಿಟ್ಝ್–ಟಿಮ್ ಪುಯೆಟ್ಝ್ ಜೋಡಿಯನ್ನು ಮಣಿಸಿತ್ತು.
ಸೆಮಿಫೈನಲ್‌ನಲ್ಲಿ ಭಾಂಬ್ರಿ– ಮೈಕೆಲ್ ಜೋಡಿ ಆರನೇ ಶ್ರೇಯಾಂಕದ ಜೋ ಸ್ಯಾಲಿಸ್ಬರಿ– ನೀಲ್ ಸ್ಕುಪ್‌ಸ್ಕಿ (ಬ್ರಿಟನ್) ಜೋಡಿಯನ್ನು ಎದುರಿಸಲಿದೆ.
33 ವರ್ಷದ ಭಾಂಬ್ರಿ ಅವರಿಗೆ ಈ ಯಶಸ್ಸು ವೃತ್ತಿಜೀವನದ ಮಹತ್ವದ ಮೈಲಿಗಲ್ಲು ಆಯಿತು. ಗಾಯದ ಸಮಸ್ಯೆ ಎದುರಿಸಿದ್ದ ಮತ್ತು ಸಿಂಗಲ್ಸ್‌ನಿಂದ ಡಬಲ್ಸ್ ಆಟಗಾರನಾಗಿ ಪರಿವರ್ತನೆಗೊಂಡ ನಂತರ ಈ ವರ್ಷ ಅವರು ಸುಧಾರಿತ ಪ್ರದರ್ಶನ ನೀಡಿದ್ದಾರೆ. ಭಾಂಬ್ರಿ ಮೊದಲ ಬಾರಿ ಸೀನಿಯರ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಅತ್ಯುತ್ತಮ ಫಲಿತಾಂಶ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.