
ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮಹಿಳೆಯರ ಐಟಿಎಫ್ ಟೆನಿಸ್ ಟೂರ್ನಿಯ ಪಂದ್ಯದಲ್ಲಿ ಭಾರತದ ವೈಷ್ಣವಿ ಅಡ್ಕರ್ ಆಟದ ಪರಿ
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ: ಚುರುಕಿನ ಆಟವಾಡಿದ ವೈಷ್ಣವಿ ಅಡ್ಕರ್, ಐಟಿಎಫ್ ಕಲಬುರಗಿ ಓಪನ್ ಮಹಿಳೆಯರ ಟೆನಿಸ್ ಟೂರ್ನಿಯಲ್ಲಿ ಸುಲಭ ಗೆಲುವಿನೊಡನೆ ಶುಭಾರಂಭ ಮಾಡಿದರು.
ಇಲ್ಲಿನ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡಬ್ಲ್ಯು–35 ದರ್ಜೆಯ ಟೂರ್ನಿಯ ಸಿಂಗಲ್ಸ್ ಮೊದಲ ಸುತ್ತಿನ ಹಣಾಹಣಿಯಲ್ಲಿ ಭಾರತದ ಆಟಗಾರ್ತಿ ಮಂಗಳವಾರ 6–0, 6–3ರಿಂದ ಸ್ವದೇಶದ ಚೆವಿಕಾ ರೆಡ್ಡಿ ಸಮಾ ಅವರನ್ನು ಪರಾಭವಗೊಳಿಸಿದರು.
ಮೊದಲ ಸೆಟ್‌ನ ಆರಂಭದಿಂದಲೇ ವೇಗದ ಆಟಕ್ಕೆ ತೊಡಗಿಕೊಂಡ ಪುಣೆಯ 21 ವರ್ಷ ವಯಸ್ಸಿನ ಆಟಗಾರ್ತಿ ಸೆಟ್ ಉದ್ದಕ್ಕೂ ಎದುರಾಳಿಗೆ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಚುರುಕಿನ ಪಾದ ಚಲನೆ ಹಾಗೂ ವೇಗದ ಸರ್ವ್‌ಗಳಿಂದ ಗಮನ ಸೆಳೆದರು. ಅವರ ಫೋರ್‌ಹ್ಯಾಂಡ್ ಹೊಡೆತಗಳೂ ಆಕರ್ಷಕವಾಗಿದ್ದವು.
ಎರಡನೇ ಸೆಟ್‌ನಲ್ಲಿ ಮಾತ್ರ ಚೆವಿಕಾ ಸ್ವಲ್ಪ ಪ್ರತಿರೋಧ ತೋರಿದರು. ಮೊದಲ ಗೇಮ್ ಗೆದ್ದು ಪೈಪೋಟಿ ನಡೆಸುವ ನಿರೀಕ್ಷೆ ಮೂಡಿಸಿದ್ದರು. ಆದರೆ, ಎರಡು ಮತ್ತು ಮೂರನೇ ಗೇಮ್ ಗೆದ್ದ ವೈಷ್ಣವಿ ತಿರುಗೇಟು ನೀಡಿದರು. ಬಳಿಕ ನಾಲ್ಕು ಮತ್ತು ಏಳನೇ ಗೇಮ್ ಗೆಲ್ಲಲಷ್ಟೇ ತೆಲಂಗಾಣದ ಚೆವಿಕಾ ಅವರಿಗೆ ಸಾಧ್ಯವಾಯಿತು.
ಪ್ರೀಕ್ವಾರ್ಟರ್‌ಫೈನಲ್ ತಲುಪಿರುವ ವೈಷ್ಣವಿ, ಈಚೆಗೆ ಬೆಂಗಳೂರಿನಲ್ಲಿ ನಡೆದ ಐಟಿಎಫ್ ಡಬ್ಲ್ಯು100 ಟೂರ್ನಿಯಲ್ಲಿ ರನ್ನರ್ಸ್‌ಅಪ್ ಆಗಿದ್ದರು.
ಲಕ್ಷ್ಮಿಶ್ರೀ ದಿಟ್ಟ ಹೋರಾಟ: ಏಳನೇ ಶ್ರೇಯಾಂಕದ ಜಪಾನ್ ಆಟಗಾರ್ತಿ ಮಿಷಿಕಾ ಒಜೆಕಿ ಎದುರು 4–6, 6–1, 6–2ರಿಂದ ಭಾರತದ ಲಕ್ಷ್ಮಿಶ್ರೀ ದಂಡು ಸೋತರೂ ಹೋರಾಟದಿಂದ ಗಮನಸೆಳೆದರು. ಅರ್ಹತಾ ಸುತ್ತಿನಲ್ಲಿ ಗೆದ್ದು ಅವರು ಪ್ರಧಾನ ಸುತ್ತು ಪ್ರವೇಶಿಸಿದ್ದರು.
ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಎರಡನೇ ಶ್ರೇಯಾಂಕದ, ಥಾಯ್ಲೆಂಡ್‌ನ ಅಂಚಿಸಾ ಚಂತಾ 6–2, 6–0ದಿಂದ ಗ್ರೇಟ್ ಬ್ರಿಟನ್‌ನ ಅಲೆಗ್ರಾ ಕೊರ್ಪಾನೆಕ್ ಡೇವಿಸ್ ವಿರುದ್ಧ, ರಷ್ಯಾದ ಸೋಫಿಯಾ ಮಾರ್ಟಿನೊವಾ 6–4, 6–2ರಿಂದ ಎ. ಲಕ್ಷ್ಮಿ ಪ್ರಭಾ ವಿರುದ್ಧ, ಉಜ್ಬೆಕಿಸ್ತಾನದ ಮಿಲಾನಾ ಮಸ್ಲೆಂಕೊವಾ 6–2, 7–5ರಿಂದ ಜರ್ಮನಿಯ ಅನಸ್ತೇಸಿಯಾ ಕುಪರೆವ್ ವಿರುದ್ಧ, ರಷ್ಯಾದ ಸೋಫಿಯಾ ಸುಸ್ಲೊವಾ 6–4, 6–7 (3), 6–3ರಿಂದ ಸ್ವದೇಶದ ಎಕಟೆರಿನಾ ಯಶಿನಾ ವಿರುದ್ಧ ಗೆದ್ದು 16ರ ಘಟ್ಟ ಪ್ರವೇಶಿಸಿದರು.
ಕರ್ನಾಟಕದ ಅಮೋದಿನಿ ನಾಯಕ್ 0–6, 1–6 ರಿಂದ ಇಸ್ರೇಲ್‌ನ ಮಾಯನ್ ಲಾರೆನ್ ಅವರಿಗೆ ಸುಲಭವಾಗಿ ಸೋತರು.
ಆಕಾಂಕ್ಷಾ– ಸೋಹಾಗೆ ಜಯ
ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಭಾರತದ ಆಕಾಂಕ್ಷಾ ದಿಲೀಪ್ ನಿಟ್ಟೂರೆ– ಸೋಹಾ ಸಾದಿಕ್ ಜೋಡಿಯು 6–2 5–7 11–9ರಿಂದ ಅಲೆಗ್ರಾ ಕರ್ಪಾನೆಕ್ ಡೇವಿಸ್– ಸಿಂಗಪುರದ ಎವಾ ಮರಿಯಾ ಡೆಸ್ವಿನ್ಸ್ ಎದುರು ಗೆದ್ದಿತು.
ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ– ನೆದರ್ಲೆಂಡ್ಸ್‌ನ ಯಾಸ್ಮಿನ್ ಜಿಂಬ್ರೆರೆ 6–4 6–4ರಿಂದ ಥಾಯ್ಲೆಂಡ್‌ನ ಅಂಚಿಸಾ ಚಂತಾ ಥಾಸ್‌ಪಾರ್ನ್ ನಾಕ್ಲೊ ಎದುರು ಜಯಿಸಿದರು.
ಭಾರತದ ಕಶಿಶ್ ಭಾಟಿಯಾ ಹಾಗೂ ವಂಶಿತಾ ಪಠಾಣಿಯಾ ಜೋಡಿಯು 3–6 4–6ರಿಂದ ರಷ್ಯಾದ ಇವಾಜೆನ್ಯಾ ಬರ್ಡ್‌ಲಾನಾ– ಸೋಫಿಯಾ ಮಾರ್ಟಿನೊವಾ ಜೋಡಿಗೆ ಶರಣಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.