
ಬೆಂಗಳೂರು: ವೈಲ್ಡ್‌ಕಾರ್ಡ್ ಮೂಲಕ ಟೂರ್ನಿಯಲ್ಲಿ ಆಡುವ ಅರ್ಹತೆ ಗಳಿಸಿದ ಭಾರತದ ವೈಷ್ಣವಿ ಅಡ್ಕರ್, ತಮಗಿಂತ ಮೇಲಿನ ಕ್ರಮಾಂಕದ ಆಟಗಾರ್ತಿಯರ ವಿರುದ್ಧ ಗೆಲುವಿನ ಓಟವನ್ನು ಮುಂದುವರಿಸಿದರು. ಶುಕ್ರವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು ನಾಲ್ಕನೇ ಶ್ರೇಯಾಂಕದ ಟೇಲಾ ಪ್ರೆಸ್ಟನ್ ಅವರನ್ನು ಸೋಲಿಸಿ ಕೆಪಿಬಿ ಟ್ರಸ್ಟ್ ಐಟಿಎಫ್ ಮಹಿಳಾ ಓಪನ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.
ಅದೃಷ್ಟಗಳ ಏರಿಳಿತ ಕಂಡ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 21 ವರ್ಷ ವಯಸ್ಸಿನ ವೈಷ್ಣವಿ 6–3, 1–6, 6–4 ರಿಂದ ಆಸ್ಟ್ರೇಲಿಯಾದ ಆಟಗಾರ್ತಿಯನ್ನು ಸೋಲಿಸಿದರು. ಪುಣೆಯ ವೈಷ್ಣವಿ ವಿಶ್ವ ಕ್ರಮಾಂಕದಲ್ಲಿ 690ನೇ ಸ್ಥಾನ ಪಡೆದಿದ್ದರೆ, ಆಸ್ಟ್ರೇಲಿಯಾದ 20 ವರ್ಷ ವಯಸ್ಸಿನ ಆಟಗಾರ್ತಿ 148ನೇ ಸ್ಥಾನದಲ್ಲಿದ್ದಾರೆ.
ಗುರುವಾರ ನಡೆದ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 220ನೇ ಸ್ಥಾನದಲ್ಲಿರುವ ಮಾಯಿ ಹೊಂಟಮಾ (ಜಪಾನ್) ಅವರನ್ನು ಹಿಮ್ಮೆಟ್ಟಿಸಿದ್ದರು.
ಕಬ್ಬನ್ ಪಾರ್ಕ್‌ನ ಎಸ್.ಎಂ.ಕೃಷ್ಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ವೈಷ್ಣವಿ ಅವರು ಶನಿವಾರ ಎರಡನೇ ಶ್ರೇಯಾಂಕದ ಲನ್ಲಾನಾ ತರಾರುಡೀ ಅವರನ್ನು ಎದುರಿಸಲಿದ್ದಾರೆ. ಥಾಯ್ಲೆಂಡ್‌ನ ಆಟಗಾರ್ತಿ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಎಂಟನೇ ಶ್ರೇಯಾಂಕದ ಎಲಿನಾ ಪ್ರಿಡನ್ಕಿನಾ ಅವರನ್ನು 6–1, 6–3 ರಿಂದ ಮಣಿಸಿದರು.
‘ಟೇಲಾ ನನಗಿಂತ ಮೇಲಿನ ರ್‍ಯಾಂಕಿನ ಆಟಗಾರ್ತಿಯಾಗಿದ್ದರೂ, ನಾನು ಒತ್ತಡಕ್ಕೆ ಸಿಲುಕಿದ
ಭಾವನೆ ಮೂಡಲಿಲ್ಲ. ಏಕೆಂದರೆ ನಾನೇನೂ ಕಳಪೆಯಾಗಿ ಆಡಲಿಲ್ಲ’ ಎಂದು ವೈಷ್ಣವಿ ಪಂದ್ಯದ ನಂತರ ಪ್ರತಿಕ್ರಿಯಿಸಿದರು.
‘ಅವರು (ಟೇಲಾ) ಆರಂಭದಲ್ಲಿ ಉತ್ತಮವಾಗಿ ಆಡಿದರು. ಹೊಡೆತಗಳು ಗುರಿ ತಪ್ಪುತ್ತಿರಲಿಲ್ಲ. ಹೀಗಾಗಿ ನಾನು ಅವರ ಮಟ್ಟಕ್ಕೆ ಅಥವಾ ಇನ್ನೂ ಉತ್ತಮವಾಗಿ ಆಡಬೇಕಾಗಿತ್ತು. ಒಂದೊಂದೇ ಪಾಯಿಂಟ್ ಪಡೆಯುವತ್ತ ಗಮನಹರಿಸಿದೆ. ಬೇರಾವುದರ ಯೋಚನೆ ಮಾಡಲಿಲ್ಲ. ಇದು ನನನ್ನ ಮೊದಲ ಡಬ್ಲ್ಯು 100 ಮಟ್ಟದ ಸ್ಪರ್ಧೆ. ತವರಿನಲ್ಲಿ ಸೆಮಿಫೈನಲ್ ತಲುಪಿದ್ದು ನನಗೆ ಸಂತಸ ಮೂಡಿಸಿದೆ’ ಎಂದರು.
ತಾಲಿಯಾ ನಿರ್ಗಮನ: ದಿನದ ಇನ್ನೊಂದು ಅನಿರೀಕ್ಷಿತ ಫಲಿತಾಂಶದಲ್ಲಿ ಐದನೇ ಶ್ರೇಯಾಂಕದ ಪೊಲಿನಾ ಇಯಾಟ್ಸೆಂಕೊ ಅವರು 6–2, 7–5 ರಿಂದ ಗ್ರ ಶ್ರೇಯಾಂಕದ ತಾಲಿಯಾ ಗಿಬ್ಬನ್ (ಆಸ್ಟ್ರೇಲಿಯಾ) ಅವರನ್ನು ಸೊಲಿಸಿದರು. ರಷ್ಯಾದ ಆಟಗಾರ್ತಿ ಪೊಲಿನಾ ಸೆಮಿಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಹ್ಯಾನಿ ವೆಂಡೆವಿಂಕೆಲ್ ಅವರನ್ನು ಎದುರಿಸಲಿದ್ದಾರೆ. ಬೆಲ್ಜಿಯಂನ ಹ್ಯಾನಿ 6–2, 6–2 ರಿಂದ ಚೀನಾದ ಫಾಂಗ್ರಾನ್ ಟಿಯಾನ್ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.