ADVERTISEMENT

ICC World Cup 2023 AUS vs SL: ಮೊದಲ ಗೆಲುವಿನ ತವಕದಲ್ಲಿ ಎರಡು ತಂಡಗಳು!

ಲಖನೌನಲ್ಲಿ ಆಸ್ಟ್ರೇಲಿಯಾ–ಶ್ರೀಲಂಕಾ ಹಣಾಹಣಿ ನಾಳೆ; ಮೊದಲೆರಡೂ ಪಂದ್ಯಗಳಲ್ಲಿ ಸೋತಿರುವ ಬಳಗಗಳು

ಪಿಟಿಐ
Published 15 ಅಕ್ಟೋಬರ್ 2023, 12:38 IST
Last Updated 15 ಅಕ್ಟೋಬರ್ 2023, 12:38 IST
<div class="paragraphs"><p>ಆಸ್ಟ್ರೇಲಿಯಾ ತಂಡದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್‌ ಮಾತುಕತೆ&nbsp;  </p></div>

ಆಸ್ಟ್ರೇಲಿಯಾ ತಂಡದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್‌ ಮಾತುಕತೆ 

   

–ಪಿಟಿಐ ಚಿತ್ರ

ಲಖನೌ: ಈ ಸಲದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಲು ಪರದಾಡುತ್ತಿರುವ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಸೋಮವಾರ ಮುಖಾಮುಖಿಯಾಗಲಿವೆ.

ADVERTISEMENT

ಇಲ್ಲಿಯ ಏಕನಾ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಆಡಲಿವೆ. ಇದು ಎರಡೂ ತಂಡಗಳಿಗೂ ಈ ಟೂರ್ನಿಯ ಮೂರನೇ ಪಂದ್ಯ. ಮೊದಲೆರಡೂ ಪಂದ್ಯಗಳಲ್ಲಿ ಈ ಬಳಗಗಳು ಸೋತಿವೆ.

ಐದು ಬಾರಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಭಾರತ ಮತ್ತು ದಕ್ಷಿಣ ಆಫ್ರಿಕಾದ ಎದುರಿನ ಪಂದ್ಯಗಳಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಹತ್ತು ತಂಡಗಳು ಸ್ಪರ್ಧೆಯಲ್ಲಿರುವ ಲೀಗ್‌ನಲ್ಲಿ –1.846 ನೆಟ್‌ ರನ್‌ ರೇಟ್ ಹೊಂದಿದೆ.

1996ರ ಚಾಂಪಿಯನ್ ಲಂಕಾ ತಂಡವು ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ಎದುರು ಪರಾಭವಗೊಂಡಿತ್ತು.  ಇದರೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ (–1.161)ದಲ್ಲಿದೆ.

ಉಭಯ ತಂಡಗಳಿಗೂ ಮುಂದಿನ ಏಳು ಪಂದ್ಯಗಳಲ್ಲಿ ಆದಷ್ಟು ಹೆಚ್ಚು ಗೆಲುವುಗಳನ್ನು ಸಾಧಿಸಿದರೆ ಮಾತ್ರ ಸೆಮಿಫೈನಲ್ ಕನಸು ಕಾಣಲು ಸಾಧ್ಯವಿದೆ. ಆದರೆ ಏಕದಿನ ಕ್ರಿಕೆಟ್‌ ಈ ತಂಡವು ಆಡಿದ ಕಳೆದ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತಿದೆ.

ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ಗಳಲ್ಲಿ ಲೋಪಗಳು ಮರುಕಳಿಸುತ್ತಿವೆ. ಕಮಿನ್ಸ್, ಜೋಷ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ವೇಗದ ಬೌಲಿಂಗ್ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ. ಸ್ಪಿನ್‌ ನಲ್ಲಿ ಆ್ಯಡಂ ಜಂಪಾ ಅವರೊಂದಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಹೊಣೆ ಹಂಚಿಕೊಳ್ಳುವರು.

ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಮಾರ್ಷ್ ಅವರು ಮಿಂಚಿದರೆ  ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿದೆ. ಮಾರ್ಕಸ್ ಸ್ಟೊಯಿನಿಸ್ ಗಾಯದಿಂದ ಚೇತರಿಸಿಕೊಂಡು ಮರಳಿದರೆ ಮಧ್ಯಮ ಕ್ರಮಾಂಕ ಬಲಿಷ್ಠ ಗೊಳ್ಳಲಿದೆ. ಲಂಕಾ ಬೌಲರ್‌ಗಳಾದ ಪಥಿರಾಣ, ತೀಕ್ಣಣ ಮತ್ತು ದುನಿತ್ ವೆಲಾಳಗೆ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿದರೆ ಆಸ್ಟ್ರೆಲಿಯಾ ಬ್ಯಾಟರ್‌ಗಳಿಗೆ ಕಠಿಣ ಸವಾಲು ಎದುರಾಗಬಹುದು.

ಲಂಕಾ ತಂಡದ ಬ್ಯಾಟರ್‌ಗಳಾದ ಕುಶಾಲ ಮೆಂಡಿಸ್, ಸದೀರ ಸಮರವಿಕ್ರಮ ಅವರು ಪಾಕ್ ಎದುರಿನ ಪಂದ್ಯದಲ್ಲಿ ತಲಾ ಒಂದು ಶತಕ ಹೊಡೆದಿದ್ದರು. ಅದರಿಂದಾಗಿ ತಂಡವು ಬೃಹತ್ ಗುರಿ ನೀಡಿತ್ತು. ಆದರೆ ಬೌಲರ್‌ಗಳ ವೈಫಲ್ಯದಿಂದಾಗಿ ಲಂಕಾ ಸೋತಿತು.

ಬ್ಯಾಟರ್‌ಗಳು ತಮ್ಮ ಲಯ ಕಾಪಾಡಿಕೊಂಡರೆ ಮತ್ತು ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿದರೆ ಪಂದ್ಯವು ರೋಚಕ ತಿರುವು ತೆಗೆದುಕೊಳ್ಳಬಹುದು.

ತಂಡಗಳು: ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ) ಸ್ಟೀವ್ ಸ್ಮಿತ್ ಅಲೆಕ್ಸ್ ಕ್ಯಾರಿ ಜೋಶ್ ಇಂಗ್ಲಿಸ್ ಸೀಣ್ ಅಬಾಟ್ ಆ್ಯಷ್ಟನ್ ಅಗರ್ ಕ್ಯಾಮರಾನ್ ಗ್ರೀನ್ ಜೋಷ್ ಹ್ಯಾಜಲ್‌ವುಡ್ ಟ್ರಾವಿಸ್ ಹೆಡ್ ಮಿಚೆಲ್ ಮಾರ್ಷ್ ಗ್ಲೆನ್ ಮ್ಯಾಕ್ಸ್‌ವೆಲ್ ಮಾರ್ಕಸ್ ಸ್ಟೊಯಿನಿಸ್ ಡೇವಿಡ್ ವಾರ್ನರ್ ಆ್ಯಡಂ ಜಂಪಾ ಮಿಚೆಲ್ ಸ್ಟಾರ್ಕ್.

ಶ್ರೀಲಂಕಾ: ಕುಶಾಲ ಮೆಂಡಿಸ್ (ನಾಯಕ) ಕುಶಾಲ ಪೆರೆರಾ ಪಥುಮ್ ನಿಸಾಂಕ ಲಾಹಿರು ಕುಮಾರ ದಿಮುತ ಕರುಣಾರತ್ನೆ ಸದೀರ ಸಮರವಿಕ್ರಮ ಚರಿತ ಅಸಲಂಕಾ ಧನಂಜಯ ಡಿಸಿಲ್ವಾ ಮಹೀಷ್ ತೀಕ್ಷಣ ದುನಿತ್ ವೆಳಾಲಗೆ ಕಸುನ್ ರಜಿತಾ ಮಥೀಷ ಪಥಿರಾಣ ದಿಲ್ಶಾನ್ ಮಧುಶಂಕಾ ದುಶಾನ್ ಹೇಮಂತ ಚಮಿಕಾ ಕರುಣಾರತ್ನೆ.

ಪಂದ್ಯ ಆರಂಭ: ಮಧ್ಯಾಹ್ನ 2 ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಟ್‌ಸ್ಟಾರ್ ಆ್ಯಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.