ADVERTISEMENT

ಭಾರತದ ಬೂಮ್ರಾ ನೋಡಿ ಕಲಿಯಿರಿ: ಪಾಕ್ ವೇಗಿ ಅಫ್ರಿದಿಗೆ ವಕಾರ್ ಯೂನಿಸ್ ಸಲಹೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2023, 6:01 IST
Last Updated 17 ಅಕ್ಟೋಬರ್ 2023, 6:01 IST
<div class="paragraphs"><p>ಅಭ್ಯಾಸದ ವೇಳೆ ಶಾಹೀನ್‌ ಅಫ್ರಿದಿ ಹಾಗೂ ಪಾಕ್‌ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್‌ ಮಾಡುತ್ತಿರುವ ಜಸ್‌ಪ್ರಿತ್‌ ಬೂಮ್ರಾ</p></div>

ಅಭ್ಯಾಸದ ವೇಳೆ ಶಾಹೀನ್‌ ಅಫ್ರಿದಿ ಹಾಗೂ ಪಾಕ್‌ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್‌ ಮಾಡುತ್ತಿರುವ ಜಸ್‌ಪ್ರಿತ್‌ ಬೂಮ್ರಾ

   

ಪಿಟಿಐ ಚಿತ್ರಗಳು

ಬೆಂಗಳೂರು: ವಿಶ್ವಕಪ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡುವುದು ಹೇಗೆ ಎಂಬುದನ್ನು ಭಾರತದ ಜಸ್‌ಪ್ರೀತ್‌ ಬೂಮ್ರಾ ಅವರಿಂದ ಕಲಿಯಬೇಕು ಎಂದು ಪಾಕಿಸ್ತಾನದ ಯುವ ವೇಗಿ ಶಾಹೀನ್‌ ಅಫ್ರಿದಿಗೆ ಮಾಜಿ ಕ್ರಿಕೆಟಿಗ ವಕಾರ್‌ ಯೂನಿಸ್‌ ಸಲಹೆ ನೀಡಿದ್ದಾರೆ.

ADVERTISEMENT

ಈ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ಬೂಮ್ರಾ ಅವರನ್ನು 'ಶ್ರೇಷ್ಠ ಬೌಲರ್‌' ಎಂದು ವಕಾರ್‌ ಬಣ್ಣಿಸಿದ್ದಾರೆ.

ಮೂರು ಪಂದ್ಯಗಳಲ್ಲಿ 27 ಓವರ್‌ ಬೌಲಿಂಗ್‌ ಮಾಡಿರುವ ಬೂಮ್ರಾ 11.62ರ ಸರಾಸರಿಯಲ್ಲಿ 93 ರನ್‌ ನೀಡಿ 8 ವಿಕೆಟ್‌ ಪಡೆದಿದ್ದಾರೆ. ಇಷ್ಟೇ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅಫ್ರಿದಿ 22 ಓವರ್‌ಗಳಲ್ಲಿ 139 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಪಡೆಯಲಷ್ಟೇ ಶಕ್ತರಾಗಿದ್ದಾರೆ.

ಪಾಕಿಸ್ತಾನದ ದಿಗ್ಗಜ ವಕಾರ್‌ ಯೂನಿಸ್‌ ಅವರು, ವಿಶ್ವಕಪ್‌ ಪಂದ್ಯದ ವೀಕ್ಷಕ ವಿವರಣೆ ವೇಳೆ ಬೂಮ್ರಾ ಹಾಗೂ ಅಫ್ರಿದಿ ಆಟದ ಕುರಿತು ಮಾತನಾಡಿದ್ದಾರೆ.

'ಅಫ್ರಿದಿ ಫಿಟ್‌ನೆಸ್‌ ಸಮಸ್ಯೆ ಎದುರಿಸುತ್ತಿದ್ದಾರೆಯೇ ಎಂಬುದು ಗೊತ್ತಿಲ್ಲ. ಆದರೆ, ಅವರ ಬೌಲಿಂಗ್‌ನಲ್ಲಿ ಶಿಸ್ತಿನ ಕೊರತೆ ಕಾಣುತ್ತಿದೆ. ವಿಕೆಟ್ ಪಡೆಯಲು ಭಾರಿ ಪ್ರಯತ್ನ ಮಾಡುತ್ತಿರುವ ಅವರು ಮತ್ತೆ ಮತ್ತೆ ಯಾರ್ಕರ್‌ ಪ್ರಯೋಗಿಸುತ್ತಿದ್ದಾರೆ. ಮೇಲಿಂದ ಮೇಲೆ ಅದೇ ಪ್ರಯತ್ನ ಮುಂದುವರಿಸಿದರೆ ಬ್ಯಾಟರ್‌ಗೆ ರನ್‌ ಗಳಿಸಲು ಸುಲಭವಾಗುತ್ತದೆ' ಎಂದಿದ್ದಾರೆ.

‌ಭಾರತ ತಂಡ ಅಹಮದಾಬಾದ್‌ನಲ್ಲಿ ಅಕ್ಟೋಬರ್‌ 14ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿತ್ತು. ಈ ಪಂದ್ಯದಲ್ಲಿ 7 ಓವರ್‌ ಬೌಲಿಂಗ್‌ ಮಾಡಿದ ಬೂಮ್ರಾ 19 ರನ್‌ ನೀಡಿ ಪ್ರಮುಖ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು. ಶಾಹೀನ್‌ ಕೂಡ ಎರಡು ವಿಕೆಟ್ ಪಡೆದರೂ, 6 ಓವರ್‌ಗಳಲ್ಲಿ 36 ರನ್‌ ಬಿಟ್ಟುಕೊಟ್ಟಿದ್ದರು.

'ಬೂಮ್ರಾ ಎದುರಾಳಿಗಳಲ್ಲಿ ಒತ್ತಡ ಸೃಷ್ಟಿಸುತ್ತಾರೆ. ಪಾಕ್‌ ವಿರುದ್ಧ ಅಮೋಘ ಬೌಲಿಂಗ್‌ ಮಾಡಿದ ಅವರು, ಒತ್ತಡ ಹೇರಿ ವಿಕೆಟ್‌ಗಳನ್ನು ಕಬಳಿಸಿದರು' ಎಂದು ವಿವರಿಸಿದ್ದಾರೆ.

ನಸೀಂ ಅಲಭ್ಯತೆ ಎದ್ದು ಕಾಣುತ್ತಿದೆ
ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಿದ್ದ ಯುವ ವೇಗಿ ನಸೀಂ ಶಾ ಅವರು ಗಾಯಗೊಂಡು ವಿಶ್ವಕಪ್‌ನಿಂದ ಹೊರಗುಳಿದಿರುವುದು ಪಾಕ್‌ ಪಡೆಗೆ ಹಿನ್ನಡೆಯಾಗಿದೆ ಎಂದು ವಕಾರ್‌ ಅಭಿಪ್ರಾಯಪಟ್ಟಿದ್ದಾರೆ.

'ನಸೀಂ ಉತ್ತಮ ಬೌಲರ್‌. ಅವರು ಹೆಚ್ಚು ರನ್ ಬಿಟ್ಟುಕೊಡುತ್ತಿರಲಿಲ್ಲ. ಅವರು ಎದುರಾಳಿಗಳಲ್ಲಿ ಒತ್ತಡ ಉಂಟುಮಾಡುತ್ತಿದ್ದರು. ಇದರಿಂದ ಬ್ಯಾಟರ್‌ಗಳು ಇತರ ಬೌಲರ್‌ಗಳನ್ನು ದಂಡಿಸಲು ಹೋಗಿ ವಿಕೆಟ್‌ ಕಳೆದುಕೊಳ್ಳುತ್ತಿದ್ದರು' ಎಂದಿದ್ದಾರೆ.

ಆಡಿರುವ ಮೂರು ಪಂದ್ಯಗಳ ಪೈಕಿ ಪಾಕ್‌ ಪಡೆ ಎರಡರಲ್ಲಿ ಗೆದ್ದಿದ್ದರೂ, ಆ ತಂಡದ ಬೌಲಿಂಗ್‌ನಲ್ಲಿ ಶಿಸ್ತಿನ ಕೊರತೆ ಎದ್ದುಕಾಣುತ್ತಿದೆ ಎಂದು ವಕಾರ್ ಟೀಕಿಸಿದ್ದಾರೆ.

ಬಾಬರ್‌ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಅಕ್ಟೋಬರ್‌ 20ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ. ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.