ADVERTISEMENT

ಅಡುಗೆಯವರ ಕಳ್ಳತನ ಪತ್ತೆಗೆ AI ಬಳಕೆ: ಟೆಕ್ಕಿ ಪ್ಲಾನ್‌ಗೆ ಕೆಲಸ ಕಳೆದುಕೊಂಡ ಮಹಿಳೆ

ಬೆಂಗಳೂರು ಟೆಕ್ಕಿಗೆ ‘ಎಐ ರೂಮ್‌ಮೇಟ್’; ಅಡುಗೆಯವರ ಕಳ್ಳತನ ಪತ್ತೆ, ಮುಂದೇನಾಯ್ತು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮಾರ್ಚ್ 2026, 9:16 IST
Last Updated 4 ಮಾರ್ಚ್ 2026, 9:16 IST
<div class="paragraphs"><p>ಎಐ ಬಳಸಿದ ಬೆಂಗಳೂರು ಟೆಕ್ಕಿ</p></div>

ಎಐ ಬಳಸಿದ ಬೆಂಗಳೂರು ಟೆಕ್ಕಿ

   

ಚಿತ್ರ ಕೃಪೆ: ಪಂಕಜ್

ಪ್ರಸ್ತುತ ದಿನಗಳಲ್ಲಿ ಜಗತ್ತು ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆ (ಎಐ) ಅನ್ನು ಬಹುತೇಕ ಕ್ಷೇತ್ರಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಅದರಂತೆ, ಬೆಂಗಳೂರಿನ ಎಐ ತಂತ್ರಜ್ಞರೊಬ್ಬರು, ಎಐ ಚಾಟ್‌ಬಾಟ್ ಅನ್ನು ಬಳಸಿ ಕಳ್ಳತನ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿರುವ ಘಟನೆ ನಡೆದಿದೆ.

ADVERTISEMENT

ಅಡುಗೆ ಮನೆಯಲ್ಲಿ, ಸಾಮಾಗ್ರಿಗಳನ್ನು ಕಳ್ಳತನ ಮಾಡುತ್ತಿದ್ದ ಅಡುಗೆಯವರನ್ನು ಹಿಡಿಯಲು ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಕೃತಕ ಬುದ್ಧಿಮತ್ತೆ (AI) ಚಾಲಿತ ಮೇಲ್ವಿಚಾರಣಾ ವ್ಯವಸ್ಥೆ ಬಳಕೆ ಮಾಡಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.

ಆಗಾಗ್ಗೆ ತಾವು ತಯಾರಿಸುವ AI ಸಾಧನಗಳ ಕುರಿತು ಎಕ್ಸ್‌ ಮೂಲಕ ಮಾಹಿತಿ ಹಂಚಿಕೊಳ್ಳುವ ಪಂಕಜ್ ಎಂಬುವವರು, ಅಡುಗೆಮನೆಯಲ್ಲಿ ‘ಎಐ ಜೊತೆಗಾರನನ್ನು’ ನೇಮಿಸಿ ಅಡುಗೆಯವರು ರೆಫ್ರಿಜರೇಟರ್‌ನಲ್ಲಿ ಇರಿಸಿದ್ದ ಹಣ್ಣುಗಳನ್ನು ಕಳ್ಳತನ ಮಾಡಿರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪಂಕಜ್ ಅವರು ಎಕ್ಸ್‌ ಪೋಸ್ಟ್‌ನಲ್ಲಿ, ‘ನಾನು ತಯಾರಿಸಿರುವ ಎಐ, ಅಡುಗೆ ತಯಾರಿಸುವವರ ಮೇಲ್ವಿಚಾರಣೆ ಮಾಡುತ್ತದೆ. ಅವರು ಏನನ್ನಾದರೂ ಕದಿಯಲು ಯತ್ನಿಸಿದರೆ ತಕ್ಷಣ ಪತ್ತೆಹಚ್ಚಿ ನನಗೆ ಮಾಹಿತಿ ರವಾನಿಸುತ್ತದೆ. ಮಾತ್ರವಲ್ಲ, ಅದು ವಾರಕ್ಕೊಮ್ಮೆ ಸಂಪೂರ್ಣ ವರದಿಯನ್ನು ನನಗೆ ನೀಡುತ್ತದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕೇವಲ ಕಳ್ಳತನದ ವರದಿ ಮಾತ್ರವಲ್ಲ, ಅಡುಗೆ ಮಾಡುವುದಕ್ಕೆ ಮೊದಲು ಅವರು ಕೈ ಸ್ವಚ್ಛಗೊಳಿಸುತ್ತಾರಾ? ಇಲ್ಲವಾ? ಅಡುಗೆ ಮಾಡಿದ ಬಳಿಕ ಸ್ಲ್ಯಾಬ್‌ಗಳನ್ನು ಸ್ವಚ್ಛಗೊಳಿಸುತ್ತಾರಾ? ಎಂಬುದನ್ನು ಪರಿಶೀಲಿಸಿ ಮಾಹಿತಿ ನೀಡುವಂತೆ ತರಬೇತಿ ನೀಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

‘ಎಐನ ಸಹಾಯದಿಂದ, ನಾನು ಈ ವಾರ ಅಡುಗೆ ತಯಾರಿಸುವ ಮಹಿಳೆ ಮಾಡುತ್ತಿದ್ದ ಕಳ್ಳತನವನ್ನು ಎರಡು ಬಾರಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇನೆ. ಮಾತ್ರವಲ್ಲ, ಆಕೆ ಮಾಡಿದ ಕಳ್ಳತನಕ್ಕಾಗಿ ಅವರನ್ನು ಕೆಲಸದಿಂದ ತೆಗೆದುಹಾಕಿದೆ’ ಎಂದು ಅವರು ಹೇಳಿದ್ದಾರೆ. ಭವಿಷ್ಯದಲ್ಲಿ ಗ್ಯಾಸ್ ಸೋರಿಕೆ ಮತ್ತು ನಿಖರ ಸಮಯದ ಮೇಲ್ವಿಚಾರಣೆಯನ್ನು ಸೇರಿಸುವ ಕುರಿತು ಯೋಜನೆ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಇದನ್ನು ಆರಂಭಿಕ ಹಂತ ಎಂದಿರುವ ಪಂಕಜ್, ಈಗಾಗಲೆ ತಾವು ತಯಾರಿಸಿರುವ ಎಐ ‘ನಾನು ಎಂದಿಗೂ ಗಮನಿಸದ ಅನೇಕ ವಿಷಯಗಳನ್ನು ಸೆರೆಹಿಡಿಯುತ್ತಿದೆ’ ಎಂದು ಹೇಳಿದ್ದಾರೆ.

ಪಂಕಜ್ ಅವರು ಪ್ರಸ್ತುತ ಆಂಥ್ರೊಪಿಕ್‌ನ ಕ್ಲೌಡ್ ಹೈಕು 4.5 (Anthropic’s Claude Haiku 4.5) ಅನ್ನು ಮಾದರಿಯಾಗಿ ಬಳಸುತ್ತಿದ್ದಾರೆ ಮತ್ತು ಅದನ್ನು ರಾಸ್ಪ್‌ಬೆರ್ರಿ–ಪೈ ಸಾಧನದ ಸ್ಥಳೀಯ ಮಾದರಿಗೆ ಬದಲಾಯಿಸುವ ಬಗ್ಗೆ ಯೋಜಿಸುತ್ತಿದ್ದಾರೆ.

ಹೀಗೆ ಬದಲಾಯಿಸಿದರೆ, ಅದು ಆಫ್‌ಲೈನ್‌ನಲ್ಲೂ ಕಾರ್ಯನಿರ್ವಹಿಸಲಿದೆ. ಪ್ರಾಥಮಿಕವಾಗಿ ಮುಖ ಗುರುತಿಸುತ್ತಿದೆ. ಕ್ರಮೇಣವಾಗಿ ಅದು ವಿವಿಧ ಭಾಷೆಗಳಲ್ಲಿ ಧ್ವನಿಯನ್ನು ಕೂಡ ಗ್ರಹಿಸುವ ಸಾಮರ್ಥ್ಯ ಹೊಂದಲಿದೆ ಎಂದು ಹೇಳಿದ್ದಾರೆ.

ಪಂಕಜ್ ಅವರು ತಮ್ಮ ‘AI ರೂಮ್‌ಮೇಟ್’ ಜೊತೆ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್ ಒಳಗೊಂಡಿರುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಆರಂಭವಾಗುತ್ತಿದ್ದಂತೆ, ಬಳಕೆದಾರರು ಅನೇಕ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. ಓರ್ವ ಬಳಕೆದಾರ, ‘ಒಂದು ವೇಳೆ ನೀವು ಇರಿಸಿರುವ ಎಐನಲ್ಲಿ ಕ್ಯಾಮೆರಾ ಇರುವುದು ಗೊತ್ತಾಗಿದ್ದರೆ, ಅವರು ಜಾಗರೂಕರಾಗುತ್ತಿರಲಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ಬಳಕೆದಾರರ ಪ್ರಶ್ನೆಗೆ ಉತ್ತರಿಸಿರುವ ಪಂಕಜ್, ‘ನಾನು ಈ ಎಐ ಆಧಾರಿತ ಜೊತೆಗಾರನನ್ನು ಎರಡು ವಾರಗಳ ಹಿಂದೆ ಅಳವಡಿಸಿದ್ದೆ. ಆರಂಭದಲ್ಲಿ ಅಡುಗೆ ಮಾಡುವ ಮಹಿಳೆ ಜಾಗರೂಕವಾಗಿದ್ದರು. ಆದರೆ ನಂತರದ ದಿನಗಳಲ್ಲಿ, ದಿನವಿಡೀ ರೆಕಾರ್ಡ್ ಆಗಿರುವ ವಿಡಿಯೊವನ್ನು ಯಾರು ಪರಿಶೀಲಿಸುತ್ತಾರೆ ಎಂದು ಅದನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ. ಆರಂಭದ ಎರಡು ವಾರ ನಾನು ಕೂಡ ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡಿರಲಿಲ್ಲ’ ಎಂದು ಉತ್ತರಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು, ‘ಅಡುಗೆ ತಯಾರಿಸಲು ನೀವು, ಆಕೆಗೆ ಸ್ವಲ್ಪ ಆಹಾರ ಪದಾರ್ಥಗಳನ್ನು ನೀಡಬೇಕಿತ್ತು? ಹಾಗೆ ಮಾಡಿದ್ದರೆ, ಕಳ್ಳತನ ತಪ್ಪಿಸಬಹುದಿತ್ತು. ಈ ಬಗ್ಗೆ ಯೋಚಿಸಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪಂಕಜ್, ‘ಇದನ್ನು ಎಐ ಅಳವಡಿಕೆಗೆ ಮೊದಲು ಒಂದೆರೆಡು ವಾರ ಪ್ರಯೋಗಿಸಿದ್ದೆ. ಆದರೆ, ಅವರು ಎರಡು ವಾರಗಳ ನಂತರ, ಮತ್ತೆ ಅದೇ ರೀತಿ ಕಳ್ಳತನ ಮಾಡಲು ಆರಂಭಿಸಿದರು. ನನಗೆ ಕೇಳಿ ತೆಗೆದುಕೊಳ್ಳುವುದರ ಬಗ್ಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಕಳ್ಳತನ ಮಾಡುವುದನ್ನು ಸಹಿಸಲಾರೆ’ ಎಂದು ಉತ್ತರಿಸಿದ್ದಾರೆ.

ಪಂಕಜ್ ಅವರು ಕಳೆದ ವಾರ ಇನ್ನೊಂದು ಎಐ ಚಾಲಿತ ಸಾಧನವನ್ನು ನಿರ್ಮಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅದರಲ್ಲಿ ‘ಎಸ್ಕೇಪ್’ ಬಟನ್ ಎಂಬ ಬಟನ್ ಅಳವಡಿಸಿದ್ದು, ಅದನ್ನು ಒತ್ತಿದರೆ ಸಾಕು ನನಗೆ ಬೇಸರವಾದಾಗಲೆಲ್ಲಾ, ನಗರದ ಆಸಕ್ತಿದಾಯಕ ಸ್ಥಳಗಳಿಗೆ ಹೋಗಲು ಸ್ವಯಂಚಾಲಿತವಾಗಿ ಉಬರ್ ಅನ್ನು ಬುಕ್ ಮಾಡುತ್ತದೆ’ ಎಂದು ಅವರು ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.