ADVERTISEMENT

ಮಂಗಳೂರಿನಲ್ಲಿ ಜಲಜನಕ ಉತ್ಪಾದನಾ ಘಟಕ ಆರಂಭಿಸಿದ ವಿಜ್ಞಾನಿ ಎಂ. ಕೃಷ್ಣ ಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 14:23 IST
Last Updated 9 ಏಪ್ರಿಲ್ 2025, 14:23 IST
<div class="paragraphs"><p>ಎಇಎಂ ಎಲೆಕ್ಟ್ರೋಲೈಜರ್‌</p></div>

ಎಇಎಂ ಎಲೆಕ್ಟ್ರೋಲೈಜರ್‌

   

ಮಂಗಳೂರು: ಹೈಡ್ರೋಜನ್ ಇನೊವೇಷನ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯು ನೀರಿನಿಂದ ಗುಣಮಟ್ಟದ ಹೈಡ್ರೋಜನ್ ಅನಿಲವನ್ನು ಅಗ್ಗದ ದರದಲ್ಲಿ ಉತ್ಪಾದಿಸುವ ಆ್ಯನ್ ಅಯಾನ್ ಎಕ್ಸ್‌ಚೇಂಜ್ ಮೆಂಬ್ರೇನ್‌ (ಎಇಎಂ) ಎಲೆಕ್ಟ್ರೋಲೈಜರ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಇಲ್ಲಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಹೈಡ್ರೋಜನ್ ಇನೊವೇಷನ್‌ ದಿನಾಚರಣೆಯಲ್ಲಿ ಇದನ್ನು ಪ್ರದರ್ಶಿಸಲಾಯಿತು.

ADVERTISEMENT

ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿರುವ ವಿಜ್ಞಾನಿ ಮನ್ನಿಪಾಡಿ ಕೃಷ್ಣ ಕುಮಾರ್‌, ‘ನೀರಿನ ಅಣುವನ್ನು (H2O) ಹೈಡ್ರೋಜನ್‌ ಮತ್ತು ಆಕ್ಸಿಜನ್‌ ಅನಿಲಗಳನ್ನಾಗಿ ವಿಭಜಿಸುವ ಎಲೆಕ್ಟ್ರೋಲಿಸಿಸ್‌ ಪ್ರಕ್ರಿಯೆಗೆ ಸಾಮಾನ್ಯವಾಗಿ ಆಲ್ಕಲೈನ್‌ ಅಥವಾ ಪ್ರೋಟಾನ್ ಎಕ್ಸ್‌ಚೇಂಜ್‌ ಮೆಂಬ್ರೇನ್‌ (ಪಿಇಎಂ) ಎಲೆಕ್ಟ್ರೋಲೈಜರ್‌ಗಳನ್ನು ಬಳಸಲಾಗುತ್ತದೆ. ಪಿಇಎಂ ಎಲೆಕ್ಟ್ರೋಲೈಜರ್‌ನಲ್ಲಿ ವೇಗವರ್ಧಕವಾಗಿ ಬಳಕೆಯಾಗುವ ಇರಿಡಿಯಂ ಆಕ್ಸೈಡ್‌ ಜಗತ್ತಿನಲ್ಲಿ ಕೇವಲ 7,000 ಕೆ.ಜಿ.ಗಳಷ್ಟು ಮಾತ್ರ ಉತ್ಪಾದನೆಯಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಹೈಡ್ರೊಜನ್ ಉತ್ಪಾದಿಸಲು ಇಷ್ಟು ಇರಿಡಿಯಂ ಆಕ್ಸೈಡ್‌ ಸಾಲದು. ಈ ಕೊರತೆ ನೀಗಿಸಲು ಯಥೇಚ್ಛವಾಗಿ ಲಭ್ಯವಿರುವ ಆಂತರಿಕ ಪರಿವರ್ತನಾ ಧಾತುಗಳಾದ ಕಬ್ಬಿಣ, ಕೋಬಾಲ್ಟ್ ಮತ್ತು ನಿಕ್ಕೆಲ್‌ ಬಳಸಿ ಎಇಎಂ ಎಲೆಕ್ಟ್ರೋಲೈಜರ್‌ ತಯಾರಿಸಿದ್ದೇವೆ’ ಎಂದು ತಿಳಿಸಿದರು.

‘ಎಇಎಂ ಎಲೆಕ್ಟ್ರೋಲೈಜರ್‌ನಲ್ಲಿ ಹೈಡ್ರೋಜನ್ ಉತ್ಪಾದನಾ ವೆಚ್ಚವು ಅರ್ಧಕ್ಕರ್ಧ ಕಡಿಮೆಯಾಗುತ್ತದೆ. ಸೌರ ಶಕ್ತಿ, ಗಾಳಿ ಶಕ್ತಿ, ಅಲೆಗಳ ಶಕ್ತಿ ಬಳಸಿ ಹೈಡ್ರೊಜನ್ ಉತ್ಪಾದಿಸಬಹುದು. ಈ ಯಂತ್ರದಿಂದ 1 ಕೆ.ಜಿ. ಹೈಡ್ರೊಜನ್ ಉತ್ಪಾದಿಸಲು ಕೇವಲ ₹ 400ರಿಂದ ₹ 500 ವೆಚ್ಚವಾಗಲಿದೆ. 25 ಕಿಲೊ ವಾಟ್ ಸಾಮರ್ಥ್ಯದ ಎಇಎಂ ಎಲೆಕ್ಟ್ರೋಲೈಸರನ್ನು ದೇಶದಲ್ಲಿ ನಾವು ಮಾತ್ರ ಉತ್ಪಾದಿಸುತ್ತಿದ್ದೇವೆ. ಇದು ದಿನಕ್ಕೆ 11 ಕೆ.ಜಿ.ಗಳಷ್ಟು ಹೈಡ್ರೊಜನ್ ಉತ್ಪಾದಿಸಬಲ್ಲುದು’ ಎಂದರು.‌

‘ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಗಣದಲ್ಲೇ ಎಲೆಕ್ಟ್ರೊಲೈಜರ್‌ ಘಟಕವನ್ನು ಹೊಂದಿದ್ದೇವೆ. ಸದ್ಯಕ್ಕೆ ಕೈಗಾರಿಕೆಗಳಿಗೆ ಅಗತ್ಯವಿರುವ ಹೈಡ್ರೋಜನ್‌ ಉತ್ಪಾದಿಸುತ್ತಿದ್ದೇವೆ. ಹೈಡ್ರೊಜನ್ ಇಂಧನಕೋಶಗಳ ಅಭಿವೃದ್ಧಿಯಲ್ಲೂ ಪ್ರಗತಿಯಾಗುತ್ತಿದ್ದು, ಇದರಿಂದಾಗಿ ಎಇಎಂ ಎಲೆಕ್ಟ್ರೋಲೈಜರ್‌ಗಳಿಗೂ ಕ್ರಮೇಣ ಬೇಡಿಕೆ ಹೆಚ್ಚಬಹುದು. ಸದ್ಯಕ್ಕೆ ಒಂದು ಎಇಎಂ ಎಲೆಕ್ಟ್ರೊಲೈಜರ್‌ ಅನ್ನು ₹ 30 ಲಕ್ಷಕ್ಕೆ ಪೂರೈಸುತ್ತಿದ್ದೇವೆ. ಬೇಡಿಕೆ ಹೆಚ್ಚಾದಂತೆ ದರವು ಕಡಿಮೆಯಾಗಬಹುದು’ ಎಂದರು.

ಹೈಡ್ರೋಜನ್ ಉತ್ಪಾದನೆಯ ಕುರಿತು ಐಐಟಿ ಮದ್ರಾಸ್‌ನಲ್ಲಿ ಸಂಶೋಧನೆ ನಡೆಸಿದ್ದ ಎಂ.ಕೃಷ್ಣಕುಮಾರ್ ಬಳಿಕ ಸಿಂಗಪುರದ ಕಂಪನಿಯಲ್ಲಿ ವಿಜ್ಞಾನಿಯಾಗಿದ್ದರು. ಕಳೆದ ವರ್ಷ ಹೈಡ್ರೋಜನ್ ಇನೊವೇಷನ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಸ್ಥಾಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.