ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಪ್ರೊಬಾ–3: ಇಸ್ರೊದ PSLV ಮೂಲಕ ಉಡ್ಡಯನ
ಪಿಟಿಐ ಚಿತ್ರ
ಶ್ರೀಹರಿಕೋಟಾ (ಆಂಧ್ರ ಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಸ್ಥೆಯು (ಇಸ್ರೊ) ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್‌ಎ) ಕೈಗೊಂಡಿರುವ ‘ಪ್ರೋಬಾ–3’ ಮಿಷನ್‌ನ ಉಪಗ್ರಹಗಳನ್ನು ಗುರುವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು.
‘ಪ್ರೋಬಾ–3’ ಹೊತ್ತ ಪಿಎಸ್‌ಎಲ್‌ವಿ –ಸಿ59 ರಾಕೆಟ್‌ಅನ್ನು ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 4.04ಕ್ಕೆ ಉಡಾವಣೆ ಮಾಡಲಾಯಿತು. ‘ಟೇಕಾಫ್ ಆದ 18 ನಿಮಿಷಗಳ ಬಳಿಕ ಎರಡು ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸಲಾಯಿತು’ ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದರು.
ಪ್ರೋಬಾ–3 (ಪ್ರೊಜೆಕ್ಟ್ ಫಾರ್ ಆನ್‌ಬೋರ್ಡ್ ಅಟಾನಮಿ) ಮಿಷನ್, ಅವಳಿ ಉಪಗ್ರಹಗಳನ್ನು ಒಳಗೊಂಡಿದೆ. ಈ ಉಪಗ್ರಹಗಳ ಒಳಗೆ ಎರಡು ಬಾಹ್ಯಾಕಾಶ ನೌಕೆಗಳನ್ನು ಇರಿಸಲಾಗಿದೆ. ಉಪಗ್ರಹಗಳು ತಮ್ಮ ಕಕ್ಷೆಯಲ್ಲಿ ಜತೆಯಾಗಿ ಸಂಚರಿಸಲಿದ್ದು, ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡಲಿವೆ.
ಇಸ್ರೊದ ವಾಣಿಜ್ಯ ವಿಭಾಗ ‘ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್’ (ಎನ್‌ಎಸ್‌ಐಎಲ್) ತನ್ನ ಈಚೆಗಿನ ಕಾರ್ಯಾಚರಣೆಯಾಗಿ, ಇಎಸ್‌ಎನ ಎರಡು ಉಪಗ್ರಹಗಳನ್ನು ಉಡಾವಣೆ ಮಾಡುವ ಒಪ್ಪಂದ ಮಾಡಿಕೊಂಡಿತ್ತು.
‘ಪಿಎಸ್‌ಎಲ್‌ವಿಯು ಈ ಹಿಂದೆಯೂ ಉಪಗ್ರಹಗಳನ್ನು ಜಿಯೊಸ್ಟೇಷನರಿ ಕಕ್ಷೆಗೆ ಸೇರಿಸಿತ್ತು. ಆದರೆ ಉಪಗ್ರಹಗಳನ್ನು 60 ಸಾವಿರ ಕಿ.ಮೀ. ಎತ್ತರದಲ್ಲಿರುವ ಕಕ್ಷೆಗೆ ಸೇರಿಸಿದ್ದು ಇದೇ ಮೊದಲು. ಇದು ವಿಶೇಷ ಸಾಧನೆ’ ಎಂದು ಎನ್‌ಎಸ್‌ಐಎಲ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ರಾಧಾಕೃಷ್ಣನ್ ತಿಳಿಸಿದರು.
ಈ ಉಡಾವಣೆಯು ಇಸ್ರೊ ನಡೆಸುತ್ತಿರುವ ಸೌರ ಅಧ್ಯಯನ ಯೋಜನೆಗೆ ಬೇಕಾದ ಪ್ರಮುಖ ಒಳನೋಟಗಳನ್ನು ಒದಗಿಸಲಿದೆ. ಇಸ್ರೊ, ತನ್ನ ‘ಆದಿತ್ಯ ಎಲ್–1’ ಉಪಗ್ರಹದ ಮೂಲಕ ಸೂರ್ಯನ ಬಗ್ಗೆ ಅಧ್ಯಯನ ಕೈಗೊಂಡಿದೆ.
ಯೋಜನೆಯ ಉದ್ದೇಶ...
ಪ್ರಪಂಚದ ಮೊದಲ ಉಪಕ್ರಮವೆಂದು ಹೆಸರಿಸಲಾದ ‘ಪ್ರೋಬಾ-3’ ಮಿಷನ್‌ನಲ್ಲಿ ‘ಕರೋನಾಗ್ರಾಫ್’ (310 ಕೆ.ಜಿ) ಮತ್ತು ‘ಆಕಲ್ಟರ್’ (240 ಕೆ.ಜಿ. ತೂಕ) ಎಂಬ ಎರಡು ಬಾಹ್ಯಾಕಾಶ ನೌಕೆಗಳನ್ನು ಒಟ್ಟಿಗೆ ಉಡಾವಣೆ ಮಾಡಲಾಗುತ್ತಿದೆ. ಇವು ಆರಂಭಿಕ ಕಕ್ಷೆಯನ್ನು ತಲುಪಿದ ನಂತರ, ಎರಡೂ ಉಪಗ್ರಹಗಳು 150 ಮೀಟರ್ ಅಂತರದಲ್ಲಿ (ಒಂದು ದೊಡ್ಡ ಉಪಗ್ರಹ ರಚನೆಯಾಗಿ) ಒಟ್ಟಿಗೆ ಹಾರುತ್ತವೆ.
ಈ ಉಪಗ್ರಹಗಳ ಸಹಾಯದಿಂದ ಕೃತಕ ಸೂರ್ಯಗ್ರಹಣ ಸೃಷ್ಟಿಸಿ, ಸೂರ್ಯನ ಕರೋನಾ ಅಧ್ಯಯನ ಮಾಡಲು ಬಾಹ್ಯಾಕಾಶ ವಿಜ್ಞಾನಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಬಾಹ್ಯಾಕಾಶ ನೌಕೆಗಳ ನಿಖರ ಚಲನೆ ಮತ್ತು ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಇಎಸ್‌ಎ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.