ADVERTISEMENT

NIT ರೂರ್ಕೆಲಾದಿಂದ ಮೆಗ್ನೀಷಿಯಂ ಆಧಾರಿತ ಬ್ಯಾಟರಿ ಸಂಶೋಧನೆ: ರಾಜ್ಯದಲ್ಲೂ ನಿಕ್ಷೇಪ

ಪಿಟಿಐ
Published 17 ಜನವರಿ 2025, 11:53 IST
Last Updated 17 ಜನವರಿ 2025, 11:53 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಲೀಥಿಯಂ–ಅಯಾನ್‌ ತಂತ್ರಜ್ಞಾನದಲ್ಲಿ ಹೊಸ ಮಾದರಿಯ ಕ್ಯಾಥೋಡ್‌ ವಸ್ತುಗಳನ್ನು ಬಳಸುವ ಮೂಲಕ ಕೊಬಾಲ್ಟ್‌ ಆಧಾರಿತ ವಿನ್ಯಾಸಕ್ಕೆ ಪರ್ಯಾಯ ಮತ್ತು ಭರವಸೆ ಮೂಡಿಸುವ ಬ್ಯಾಟರಿಯನ್ನು ರೂರ್ಕೆಲಾದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಮೆಗ್ನೀಷಿಯಂ ಆಧಾರಿತ ಕ್ಯಾಥೋಡ್‌ ವಸ್ತುವನ್ನು ಈ ತಂಡ ಅಭಿವೃದ್ಧಿಪಡಿಸಿದೆ. ಇದು ಹೆಚ್ಚು ಸುಸ್ಥಿರ ಹಾಗೂ ದುಬಾರಿಯಲ್ಲದ ಮತ್ತು ಕೊಬಾಲ್ಟ್‌ಗೆ ಪರ್ಯಾಯ ವಸ್ತುವಾಗಿದೆ. 

ADVERTISEMENT

ಸಾಂಪ್ರದಾಯಿಕ ಲೀಥಿಯಂ–ಅಯಾನ್ ಬ್ಯಾಟರಿಗಳಲ್ಲಿರುವ ಕೊಬಾಲ್ಟ್‌ ಬಳಕೆಯಿಂದ ದುಬಾರಿ ವೆಚ್ಚ, ಅಲಭ್ಯತೆ ಹಾಗೂ ಪರಿಸರಕ್ಕೆ ಮಾರಕದಂತ ಸವಾಲುಗಳಿದ್ದವು. ಈ ನೂತನ ತಂತ್ರಜ್ಞಾನವು ಅವುಗಳಿಗೆ ಪರಿಹಾರ ಒದಗಿಸಲಿದೆ. 

ಎನ್‌ಐಟಿ ರೂರ್ಕೆಲಾದ ಸೆರಾಮಿಕ್ ಎಂಜಿನಿಯರಿಂಗ್‌ ವಿಭಾಗದ ಸಹ ಪ್ರಾಧ್ಯಾಪಕ ಪಾರ್ಥ ಸಾಹಾ ಅವರು ಮಾಹಿತಿ ನೀಡಿ, ‘ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಹಾಗೂ ಬ್ಯಾಟರಿ ಚಾಲಿತ ವಾಹನಗಳಲ್ಲಿ (EV) ಬಹುತೇಕ ಕೊಬಾಲ್ಟ್‌ ಆಧಾರಿತ ಕ್ಯಾಥೋಡ್‌ಗಳನ್ನೇ ಬಳಸಲಾಗುತ್ತಿದೆ. ಆದರೆ ಇದರ ಬಳಕೆಯಲ್ಲಿ ಹಲವು ಸವಾಲುಗಳಿವೆ. ಕೊಬಾಲ್ಟ್‌ ಬೆಲೆ ಸ್ಥಿರವಾಗಿರುವುದಿಲ್ಲ. ಕೆಲವೊಮ್ಮೆ ದುಬಾರಿಯೂ ಆಗಿರುತ್ತದೆ. ಲಭ್ಯತೆ ಸೀಮಿತವಾಗಿದೆ. ಕ್ಯೂಬಾ, ಮಡ್ಗಾಸ್ಕರ್‌ ಹಾಗೂ ಪಾಪುವಾ ನ್ಯೂಗಿನಿನಲ್ಲಿ ಸಿಗುತ್ತಿದೆ. ಲಭ್ಯತೆ ಕಡಿಮೆ, ಆದರೆ ಬೇಡಿಕೆ ಹೆಚ್ಚಿರುವುದರಿಂದ ಬೆಲೆ ದುಬಾರಿಯೇ ಆಗಿರುತ್ತದೆ. ಆದರೆ ಇದರ ಗಣಿಗಾರಿಕೆಯು ಪರಿಸರಕ್ಕೆ ಮಾರಕವಾಗಿದೆ’ ಎಂದು ತಿಳಿಸಿದ್ದಾರೆ.

‘ಒಂದೆಡೆ ಇವಿ ವಾಹನಗಳ ಬೇಡಿಕೆ ಹೆಚ್ಚಾಗಿರುವುದರಿಂದ ಲೀಥಿಯಂ–ಅಯಾನ್ ಬ್ಯಾಟರಿ ಬಳಕೆಯೂ ಏರುಮುಖವಾಗಿದೆ. ಇದರಿಂದಾಗಿ ಕೊಬಾಲ್ಟ್‌ಗೆ ಬೇಡಿಕೆಯೂ ಹೆಚ್ಚಾಗಿದೆ. 2050ರ ಹೊತ್ತಿಗೆ ಬೇಡಿಕೆಯಷ್ಟು ಕೊಬಾಲ್ಟ್‌ ಲಭ್ಯವಾಗುವ ಸಾಧ್ಯತೆ ತೀರಾ ಕಡಿಮೆಯಾದ್ದರಿಂದ, ಪರ್ಯಾಯ ವಸ್ತುವನ್ನು ಅಭಿವೃದ್ಧಿಪಡಿಸುವ ಜರೂರು ಇತ್ತು’ ಎಂದಿದ್ದಾರೆ.

ಕೊಬಾಲ್ಟ್‌ಗೆ ಪರ್ಯಾಯವಾಗಿರುವ ಮೆಗ್ನೀಷಿಯಂನಿಂದ ಹಲವು ಪ್ರಯೋಜನ

‘ಸುಲಭವಾಗಿ ಲಭ್ಯ, ನಿಸರ್ಗದಲ್ಲಿ ಹೇರಳವಾಗಿದೆ ಮತ್ತು ಭಾರತವನ್ನೂ ಒಳಗೊಂಡು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಲಭ್ಯ. ಭಾರತದಲ್ಲಿ ತಮಿಳುನಾಡು, ಉತ್ತರಕನ್ನಡ ಹಾಗೂ ಕರ್ನಾಟಕದ ಇತರ ಭಾಗಗಳಲ್ಲಿ ಲಭ್ಯ. ಮೆಗ್ನೀಷಿಯಂ ಪರಿಸರ ಸ್ನೇಹಿಯಾಗಿರುವುದರಿಂದ ಬ್ಯಾಟರಿ ತಯಾರಿಕೆಯಿಂದ ಪರಿಸರದ ಮೇಲಾಗುತ್ತಿರುವ ನಕಾರಾತ್ಮಕ ಪರಿಣಾಮ ತಗ್ಗಲಿದೆ’ ಎಂದಿದ್ದಾರೆ.

'ಶೇ 100ರಷ್ಟು ಚಾರ್ಜ್‌ ಮಾಡಿದಲ್ಲಿ ಕ್ಯಾಥೋಡ್‌ ಉಳಿಯುವಿಕೆಯ ಪ್ರಮಾಣ ಮೆಗ್ನೀಷಿಯಂನಲ್ಲಿ ಶೇ 74.3ರಷ್ಟಿದೆ ಎಂಬುದು ನಮ್ಮ ಸಂಶೋಧನೆಯಲ್ಲಿ ಪತ್ತೆಯಾಗಿದೆ. ಆದರೆ ಕೊಬಾಲ್ಟ್‌ ಆಧಾರಿತ ಬ್ಯಾಟರಿಗಳಲ್ಲಿ ಕ್ಯಾಥೋಡ್ ಗಣನೀಯವಾಗಿ ಇಳಿಕೆಯಾಗುತ್ತದೆ. ಹೊಸ ಮಾದರಿಯ ಕ್ಯಾಥೋಡ್‌ನಿಂದ ಲೀಥಿಯಂನಲ್ಲಿರುವ ನಿಕ್ಕಲ್‌ನಿಂದ ಆಗುವ ಕ್ಯಾಟಿಯಾನಿಕ್ ಅಸ್ವಸ್ಥತೆಯನ್ನು ತಗ್ಗಿಸಲಿದೆ. ಸಾಂಪ್ರದಾಯಿಕ ಎನ್‌ಎಂಸಿ ಆಧಾರಿತ ಕ್ಯಾಥೋಡ್‌ಗಳಲ್ಲಿ ವೋಲ್ಟೇಜ್‌ ಹಾಗೂ ಸಾಮರ್ಥ್ಯದ ಇಳಿಕೆ ಸಾಮಾನ್ಯ ಸಮಸ್ಯೆಯಾಗಿದೆ’ ಎಂದೂ ಅವರು ವಿವರಿಸಿದರು.

ಈ ಸಂಶೋಧನೆಯಿಂದಾಗಿ ಬ್ಯಾಟರಿ ಬಳಕೆಯು ಇನ್ನಷ್ಟು ವಿಸ್ತಾರಗೊಳ್ಳಲಿದೆ ಹಾಗೂ ಅಗ್ಗದ ಬೆಲೆಯಲ್ಲಿ ಬ್ಯಾಟರಿ ಉತ್ಪಾದನೆ ಸಾಧ್ಯವಾಗಲಿದೆ. ಜತೆಗೆ ಬ್ಯಾಟರಿ ಚಾಲಿತ ವಾಹನಗಳ ಕಾರ್ಯಕ್ಷಮತೆಯೂ ಹೆಚ್ಚಲಿದೆ. ಇದರಿಂದ ಇವಿ ಕ್ಷೇತ್ರ ಇನ್ನಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಲಾಗಿದೆ. ಭಾರತದ ನವೀಕೃತ ಇಂಧನ ಗುರಿ ಮತ್ತು ಅಗ್ಗದ ಬೆಲೆಯಲ್ಲಿ ಇಂಧನ ಶೇಖರಿಸಿಡುವ ತಂತ್ರಜ್ಞಾನದ ಅಗತ್ಯವನ್ನು ಇದು ಪೂರೈಸಲಿದೆ. ಆ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಲಿದೆ. ಆಮದು ವಸ್ತುಗಳ ಮೇಲಿನ ಅವಲಂಬನೆ ತಗ್ಗಲಿದೆ. ಬ್ಯಾಟರಿ ತಯಾರಿಕೆಯಲ್ಲಿ ಭಾರತವು ಸ್ವಾವಲಂಬಿ ಸಾಧಿಸಲಿದೆ. ಈ ಎಲ್ಲದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸ್ಥಾನ ಹೆಚ್ಚಲಿದೆ’ ಎಂದು ಪಾರ್ಥ ಸಾಹಾ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.