ADVERTISEMENT

OnePlus Nord 5 ಜುಲೈ 8ರಂದು ಬಿಡುಗಡೆ: 50 ಮೆಗಾ ಪಿಕ್ಸೆಲ್ ಕ್ಯಾಮೆರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2025, 13:35 IST
Last Updated 24 ಜೂನ್ 2025, 13:35 IST
   

ಮುಂಬೈ: ಸ್ಮಾರ್ಟ್‌ಫೋನ್ ತಯಾರಿಸುವ ಒನ್‌ಪ್ಲಸ್‌ ಕಂಪನಿಯು ತನ್ನ ಮಧ್ಯಮ ಶ್ರೇಣಿಯ ನಾರ್ಡ್ ಸರಣಿಯ ಫೋನ್‌ ಅನ್ನು ಜುಲೈ 8ರಂದು ನಡೆಯಲಿರುವ ‘ಸಮ್ಮರ್‌ ಲಾಂಚ್‌’ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ನಾರ್ಡ್‌ನ 4ನೇ ಸರಣಿ ಬಿಡುಗಡೆಯಾಗಿತ್ತು. ಈ ಬಾರಿ ನಾರ್ಡ್‌ ಸರಣಿಯ 5 ಬಿಡುಗಡೆಯಾಗಲಿದ್ದು,  ಇದು 6.83 ಇಂಚಿನ 1.5ಕೆ ಅಮೊಲೆಡ್‌ ಡಿಸ್‌ಪ್ಲೇ ಹಾಗೂ 144 ಹರ್ಟ್ಜ್‌ ರೆಫ್ರೆಶ್‌ ರೇಟ್‌ ಹೊಂದಿರಲಿದೆ ಎಂದೆನ್ನಲಾಗಿದೆ. ನೀರು ಮತ್ತು ಧೂಳು ನಿರೋಧಕ ಐಪಿ65 ರೇಟಿಂಗ್‌ ಹೊಂದಿದ್ದು, ಲಘು ಮಳೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಇದರದ್ದು ಎಂದೆನ್ನಲಾಗಿದೆ.

ನಾರ್ಡ್‌ 5ರಲ್ಲಿ 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದ್ದು, 8 ಮೆಗಾ ಪಿಕ್ಸೆಲ್‌ 116 ಡಿಗ್ರಿ ಅಲ್ಟ್ರಾ ವೈಡ್‌ ಆ್ಯಂಗಲ್‌ ಲೆನ್ಸ್‌ ಹೊಂದಿದೆ. ಇದಕ್ಕೆ ಸೋನಿ ಎಲ್‌ವೈಟಿ–700 ಪ್ರಾಥಮಿಕ ಸೆನ್ಸರ್‌ ಅಳವಡಿಸಿರುವ ಸಾಧ್ಯತೆಗಳಿವೆ. ಸೆಲ್ಫಿಗೂ 50 ಮೆಗಾ ಪಿಕ್ಸೆಲ್‌ನ ಸ್ಯಾಮ್ಸಂಗ್‌ ಜೆಎನ್‌5 ಸೆನ್ಸರ್‌ ಅಳವಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಈ ಬಾರಿ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆ ಇದ್ದು. 6,700 ಎಂಎಎಚ್‌ ಮತ್ತು 80ವಾಟ್‌ ಫಾಸ್ಟ್‌ ಚಾರ್ಜಿಂಗ್‌ ನೀಡುವ ಸಾಧ್ಯತೆ ಇದೆ. ಈ ಹಿಂದಿನ ನಾರ್ಡ್‌ 4ರಲ್ಲಿ 5,500 ಎಂಎಎಚ್‌ ಬ್ಯಾಟರಿ ನೀಡಲಾಗಿತ್ತು ಹಾಗೂ 100 ವಾಟ್‌ನ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವಿತ್ತು.

ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಸ್ನಾಪ್‌ಡ್ರಾಗನ್‌ 8ಎಸ್‌ 3ನೇ ತಲೆಮಾರಿನ ಪ್ರಾಸೆಸರ್‌ ಅಳವಡಿಸಲಾಗಿದೆ. ಇದು ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಈಗಾಗಲೇ ಬಳಕೆಯಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.