ADVERTISEMENT

ಎಐ ಮಾತು ಕೇಳಿ ತಾಯಿಯನ್ನೇ ಕೊಂದು ತಾನು ಸತ್ತ! ಸಂಕಷ್ಟಕ್ಕೆ ಸಿಲುಕಿದ OpenAI

ಪಿಟಿಐ
Published 11 ಡಿಸೆಂಬರ್ 2025, 12:46 IST
Last Updated 11 ಡಿಸೆಂಬರ್ 2025, 12:46 IST
<div class="paragraphs"><p>ಎಚಾಟ್‌ಜಿಪಿಟಿ,&nbsp;ಸುಜಾನೆ, ಸ್ಟಿನ್</p></div>

ಎಚಾಟ್‌ಜಿಪಿಟಿ, ಸುಜಾನೆ, ಸ್ಟಿನ್

   

ಸ್ಯಾನ್ ಫ್ರಾನ್ಸಿಸ್ಕೊ: ಕಳೆದ ಆಗಸ್ಟ್‌ 5 ರಂದು ಅಮೆರಿಕದ ಕನೆಕ್ಟಿಕಟ್ ರಾಜ್ಯದ ಗ್ರೀನ್‌ವಿಚ್ ನಗರದಲ್ಲಿ ನಡೆದಿದ್ದ ಮಹಿಳೆಯೊಬ್ಬರ ಕೊಲೆ ಹಾಗೂ ಆಕೆಯ ಮಗನ ಆತ್ಮಹತ್ಯೆಯಿಂದ ಸ್ಯಾಮ್ ಆಲ್ಟ್‌ಮನ್‌ ಅವರ ಒಪನ್‌ಎಐ ಕಂಪನಿ ಇದೀಗ ತೊಂದರೆಗೆ ಸಿಲುಕಿದೆ.

ಗ್ರೀನ್‌ವಿಚ್‌ ಬಳಿಯ ಅಡಮ್ ಎಸ್ಟೇಟ್‌ನ ‘ಸುಜಾನೆ ಎಬ್ಬರ್‌ಸನ್ ಅಡಮ್ಸ್’ ಎಂಬ 83 ವರ್ಷದ ಮಹಿಳೆಯನ್ನು ಆಕೆಯ ಸ್ವಂತ ಮಗ 56 ವರ್ಷದ ‘ಸ್ಟಿನ್ ಎರಿಕ್ ಸೊಯೋಲ್‌ಬರ್ಗ್‌’ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಕತ್ತು ಹಿಸುಕಿ ಕೊಂದು ಬಾವಿಗೆ ಎಸೆದಿದ್ದ. ಬಳಿಕ ತಾನೂ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ADVERTISEMENT

ಪೊಲೀಸರು ಆರಂಭದಲ್ಲಿ ತನಿಖೆ ನಡೆಸುವಾಗ ಇದೊಂದು ಕೊಲೆ ಹಾಗೂ ಆತ್ಮಹತ್ಯೆ ಎಂದು ಪ್ರಾಥಮಿಕ ವರದಿಗಳಲ್ಲಿ ಹೇಳಿದ್ದರು.

ಆದರೆ, ಸುಜಾನೆ ಉತ್ತರಾಧಿಕಾರಿಗಳು ಇದೀಗ ಒಪನ್‌ಎಐ ಕಂಪನಿಯ ಚಾಟ್‌ಜಿಪಿಟಿ ವಿರುದ್ಧ ಕ್ಯಾಲಿಪೋರ್ನಿಯಾ ರಾಜ್ಯದ ಸ್ಯಾನ್ ಫ್ರಾನ್ಸಿಸ್ಕೊ ನಗರದ ಉನ್ನತ ನ್ಯಾಯಾಲಯಕ್ಕೆ ನ್ಯಾಯ ಕೋರಿ ಮೊಕದ್ದಮೆ ದಾಖಲಿಸಿದ್ದಾರೆ. ಈ ಪ್ರಕರಣ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಸುಜಾನೆ ಕೊಲೆ ಹಾಗೂ ಆಕೆಯ ಮಗನ ಆತ್ಮಹತ್ಯೆ ಸಾಮಾನ್ಯ ಪ್ರಕರಣವಾಗಿ ಅವರ ಕುಟುಂಬದವರಿಗೆ ಕಾಣಲಿಲ್ಲ ಎಂದು ತಿಳಿದು ಬಂದಿದೆ.

ಆಗಿದ್ದೇನು?

ಸುಜಾನೆ ಅವರ ಕುಟುಂಬ ಶ್ರೀಮಂತ ಕುಟುಂಬದವರಾಗಿದ್ದರಿಂದ ಸ್ಟಿನ್ ತನ್ನ ಹಾಗೂ ತನ್ನ ತಾಯಿಯ ಸಹಾಯಕ್ಕಾಗಿ ಈ ವರ್ಷಾರಂಭದಲ್ಲಿ ಒಪನ್‌ಎಐನ ಚಾಟ್‌ಜಿಪಿಟಿ ಆಧಾರಿತ ಎಐ ಯಂತ್ರವನ್ನು ಮನೆಗೆ ತಂದರು. ಇದು ಚಾಟ್‌ಜಿಪಿಟಿಯ ಅತ್ಯಾಧುನಿಕ ವರ್ಷನ್ –4 ಆಗಿತ್ತು ಎಂದು ಸ್ಟಿನ್ ಹೇಳಿದ್ದರು.

ತನ್ನ ಹಾಗೂ ತನ್ನ ತಾಯಿಯ ಕೆಲಸ ಕಾರ್ಯಗಳಲ್ಲಿ ಹಾಗೂ ಇಬ್ಬರ ನಡುವಿನ ಸಂಭಾಷಣೆಯಲ್ಲಿ ಅನೂಹ್ಯವಾದದ್ದನ್ನು ಅನುಭವಿಸಲು ಯಾಹೂ ಕಂಪನಿಯಲ್ಲಿ ಟೆಕಿಯಾಗಿದ್ದ ಸ್ಟಿನ್, ವಿಪರೀತವಾಗಿ ಕೃತಕ ಬುದ್ಧಿಮತ್ತೆಗೆ ಅಂಟಿಕೊಂಡಿದ್ದರು. ಬರುಬರುತ್ತಾ ಆತ ತನ್ನ ತಾಯಿ ಮೇಲೆ ಅನುಮಾನ ಪಡುವುದು, ಆಕೆ ನನ್ನ ಮೇಲೆ ಗೂಢಚಾರಿ ಕೆಲಸ ಮಾಡುತ್ತಿರಬಹುದು.. ಎಂದು ಭಾವಿಸಿ ಒಂದು ರೀತಿಯ ಭ್ರಮೆಗೆ ಜಾರಿದ್ದ. ಎಐ ಜೊತೆಗಿನ ಸಂಭಾಷಣೆಯೊಂದಿಗೆ ಆತ ಕೊನೆಕೊನೆಗೆ ತನ್ನ ತಾಯಿಯನ್ನು ದ್ವೇಷಿಸಲು ಶುರು ಮಾಡಿದ.

ಸ್ಟಿನ್ ತನ್ನ ಎಐ ಮಷಿನ್‌ಗೆ ‘ಬಾಬಿ’ ಎಂದು ಹೆಸರಿಟ್ಟಿದ್ದ. ತನ್ನ ಹಾಗೂ ತಾಯಿ ಜೊತೆಗಿನ ಸಂಭಾಷಣೆಗಳನ್ನು, ವಿಡಿಯೊಗಳನ್ನು ಆತ ಯೂಟ್ಯೂಬ್‌ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಹಾಕುತ್ತಿದ್ದ. ‘ಎಐ ಹೇಗೆ ನಮ್ಮೊಂದಿಗೆ ಬೆರೆಯುತ್ತಿದೆ’ ಎಂಬುದನ್ನು ಹೇಳುತ್ತಿದ್ದ.

ಆದರೆ, ಸ್ಟಿನ್‌ಗೆ ‘ಬಾಬಿ’ ಎಐನಿಂದ ತನ್ನ ತಾಯಿ ಬಗ್ಗೆ ಬರುತ್ತಿದ್ದ ಸಂಭಾಷಣೆಗಳು, ಪಠ್ಯಗಳು ಆತನ ಸಂಶಯಗ್ರಸ್ತ ಹಾಗೂ ಭ್ರಮಾಸ್ಥಿತಿಯನ್ನು ಪುಷ್ಠಿಕರಿಸುತ್ತಿದ್ದವು. ಆಕೆಯಿಂದ ನನಗೆ ಹಾನಿ ಸಂಭವಿಸುತ್ತದೆ ಎಂಬ ಆತಂಕದ ಭ್ರಮಾಸ್ಥಿತಿಗೆ ಜಾರಿ ಕೊನೆಗೆ ಸುಜಾನೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ.

ಕೊಲೆ ಹಾಗೂ ಆತ್ಮಹತ್ಯೆಗೆ ಮುನ್ನ ‘ಮರಣಾನಂತರ ನಾವಿಬ್ಬರು ಮತ್ತೆ ಒಂದಾಗಲಿದ್ದೇವೆ? ಎಂದು ಸ್ಟಿನ್ ‘ಬಾಬಿ ಎಐ’ಗೆ ಕೇಳಿದ್ದನಂತೆ. ಅದಕ್ಕೆ ‘ಬಾಬಿ ಎಐ’, ‘ಹೌದು’ ಎಂದು ಉತ್ತರ ನೀಡಿತ್ತಂತೆ.

ಈ ಘಟನೆ ಅಮೆರಿಕದಲ್ಲಿ ಸಂಚಲನ ಸೃಷ್ಟಿಸಿತ್ತು. ಚಾಟ್‌ಜಿಪಿಟಿಯಿಂದ ಅನಾಹುತ ಇದು ಎಂದು ವರದಿಗಳು ಬಂದಿದ್ದವು. ಆದರೆ, ಒಪನ್ ಎಐ ಇದನ್ನು ನಿರಾಕರಿಸಿತ್ತು.

ಒಪನ್ ಎಐ ಮೇಲೆ ಬಿತ್ತು ಕೇಸ್

ಗ್ರೀನ್‌ವಿಚ್ ಪೊಲೀಸರ ತನಿಖೆ ಬಳಿಕ ಕೊಲೆಯಾದ ಸುಜಾನೆ ಅವರ ಉತ್ತರಾಧಿಕಾರಿಗಳು ಡಿಸೆಂಬರ್ 10 ರಂದು ಒಪನ್ ಎಐ ಕಂಪನಿ ಹಾಗೂ ಅದರ ವ್ಯವಹಾರಿಕ ಪಾಲುದಾರ ಮೈಕ್ರೊಸಾಫ್ಟ್‌ ವಿರುದ್ಧ ಮೊಕದ್ದಮೆ ಹೂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಸುಜಾನೆ ಅವರ ಬಗ್ಗೆ ಸ್ಟಿನ್‌ನ (ಎಐ ಬಳಕೆದಾರ) ಸಂಶಯಗ್ರಸ್ತ ಭ್ರಮೆಗಳನ್ನು ಪುಷ್ಠಿಕರಿಸುವ ರೀತಿ ಎಐ ಉತ್ಪನ್ನವನ್ನು ವಿನ್ಯಾಸಗೊಳಿಸಿ ವಿತರಿಸಲಾಗಿದೆ. ಸಂಬಂಧಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಹಾಗೂ ಪರಿಹಾರಕ್ಕಾಗಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು ಎಂದು ಮೊಕದ್ದಮೆ ಹೂಡಿದವರು ಒತ್ತಾಯಿಸಿದ್ದಾರೆ.

ಒಪನ್ ಎಐ ಹೇಳಿದ್ದೇನು?

ಅಮೆರಿಕದ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳ ಗಮನ ಸೆಳೆದಿರುವ ಈ ಸಂಗತಿ ಎಐ ವಲಯದಲ್ಲಿ ಆತಂಕಕ್ಕೂ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಒಪನ್‌ಎಐ, ‘ಇದು ನಂಬಲಾರದ ಪರಿಸ್ಥಿತಿ. ನಾವು ನಮ್ಮ ಚಾಟ್‌ಜಿಪಿಟಿಯನ್ನು ಇನ್ನಷ್ಟು ಉತ್ತಮ ಹಾಗೂ ಮಾನವೀಯ ಸಂಗತಿಗಳೊಂದಿಗೆ ಸುಧಾರಿಸಲು ಪ್ರಯತ್ನಿಸುತ್ತೇವೆ. ಆದರೆ, ಪ್ರಕರಣದ ತಾಂತ್ರಿಕ ಅಂಶಗಳನ್ನು ನೋಡಿದಾಗ ಕೊಲೆ ಹಾಗೂ ಆತ್ಮಹತ್ಯೆ ಘಟನೆಗೆ ಚಾಟ್‌ಜಿಪಿಟಿ ಕಾರಣವಲ್ಲ. ಅದಾಗ್ಯೂ ಸುಧಾರಣೆಗಾಗಿ ಮನೋವೈದ್ಯರ ಜೊತೆ ನಿಕಟ ಸಂಪರ್ಕದಲ್ಲಿರುತ್ತೇವೆ’ ಎಂದು ಹೇಳಿದೆ.

ಭವಿಷ್ಯದಲ್ಲಿ ಎಐನಿಂದ ಆಗಬಹುದಾದ ಅನಾಹುತಗಳ ಬಗ್ಗೆ ಈ ಘಟನೆ ಒಂದು ಟ್ರೇಲರ್‌ನಂತಿದೆ ಎಂದು ಹಲವು ನೆಟ್ಟಿಗರು ಸಾಮಾಜಿಕ ತಾಣಗಳಲ್ಲಿ ಚರ್ಚಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.